ಮೆಟ್ರೋ ಪ್ರಯಾಣ ದರ ಇಳಿಕೆಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೆಂಗಳೂರು,ಫೆಬ್ರವರಿ,13,2025 (www.justkannada.in):  ಇತ್ತೀಚೆಗೆ ಬಿಎಂಆರ್ ಸಿಎಲ್ ಮೆಟ್ರೋ ಪ್ರಯಾಣ ದರವನ್ನ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದಕ್ಕೆ ಪ್ರಯಾಣಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ಇದೀಗ ಸಿಎಂ ಸಿದ್ದರಾಮಯ್ಯ ಅವರು  ಮೆಟ್ರೋ ಪ್ರಯಾಣ ದರ ಇಳಿಕೆ ಮಾಡುವಂತೆ ಬಿಎಂಆರ್ ಸಿಎಲ್ ಗೆ ಸೂಚನೆ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಇತ್ತೀಚೆಗೆ ಪರಿಷ್ಕರಿಸಿರುವ ಪ್ರಯಾಣ ದರ ಏರಿಕೆ ಹಲವು ರೀತಿಯ ವೈಪರೀತ್ಯಗಳಿಂದ ಕೂಡಿದ್ದು, ಕೆಲವು ಕಡೆಗಳಲ್ಲಿ ಪ್ರಯಾಣ ದರ ದುಪ್ಪಟ್ಟಾಗಿರುವುದನ್ನು ಗಮನಿಸಿದ್ದೇನೆ. ಇದರ ವಿರುದ್ಧ ವ್ಯಕ್ತವಾದ ಸಾರ್ವಜನಿಕರ ವಿರೋಧವನ್ನು ಪರಿಗಣಿಸಿ ಎಲ್ಲೆಲ್ಲಿ ಅಸಹಜ ರೀತಿಯಲ್ಲಿ ದರ ಏರಿಕೆಯಾಗಿದೆಯೋ ಅಂತಹ ಕಡೆಗಳಲ್ಲಿ ಪ್ರಯಾಣ ದರ ಇಳಿಸುವಂತೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮೆಟ್ರೊ ರೈಲು ವ್ಯವಸ್ಥೆ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಮಾಡಬೇಕಾಗಿರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿರುವ ಕಾರಣ ಪ್ರಯಾಣ ದರ ಪರಿಷ್ಕರಣೆ ಅನಿವಾರ್ಯವಾಗಿತ್ತು ಎನ್ನುವುದು ನಿಜವಾದರೂ ಅಂತಿಮವಾಗಿ ಪ್ರಯಾಣಿಕರ ಹಿತರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎನ್ನುವುದನ್ನು ಬಿಎಂಆರ್‌ಸಿಎಲ್ ಗಮನಕ್ಕೆ ತಂದಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

Key words: CM, Siddaramaiah, reduction, metro fares, BMRCL