ಬೆಂಗಳೂರು,ಮಾರ್ಚ್,17,2025(www.justkannada.in): ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ತೋರುತ್ತಿದೆ ಎಂದು ಆರೋಪಿಸುತ್ತಿರುವ ಸಿಎಂ ಸಿದ್ದರಾಮಯ್ಯ ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಗುಡುಗಿದ್ದಾರೆ.
ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ಕೊಟ್ಟಿರುವುದು ನಮ್ಮ ಪಾಲಿನ ಅನುದಾನವಲ್ಲ. ಬದಲಿಗೆ ಅವರು ಕೊಟ್ಟಿರುವುದು ಬಡ್ಡಿ ರಹಿತ ಸಾಲ ಮಾತ್ರ. ವಿರೋಧಪಕ್ಷದವರಿಗೆ ಮಾತನಾಡಲು ಏನೂ ಸಿಗದೆ ಸುಳ್ಳು ಮಾಹಿತಿಯನ್ನು ಸದನಕ್ಕೆ ನೀಡಿದ್ದಾರೆ ಎಂದು ಕಿಡಿಕಾರಿದರು.
ನಮ್ಮ ಗ್ಯಾರಂಟಿ ಯೋಜನೆಗಳಿಗೆ ಮಾಧ್ಯಮಗಳು, ಜನರು, ವಿಶ್ವವಿದ್ಯಾನಿಲಯಗಳು, ವಿದ್ವಾಂಸರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕನ್ನಡ ಮತ್ತು ಇಂಗ್ಲೀಷ್ ಪತ್ರಿಕೆಗಳು ಗ್ಯಾರಂಟಿಗಳನ್ನು ಶ್ಲಾಘಿಸಿ ಬರೆದಿರುವುದು ಸದನದ ಗಮನದಲ್ಲಿದ್ದರೂ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. 2020 ರಲ್ಲಿ ನಾವು ಗ್ಯಾರಂಟಿಗಳನ್ನು ಘೋಷಿಸಿದಾಗಲೂ ಪತ್ರಿಕೆಗಳು ಶ್ಲಾಘಿಸಿ ಬರೆದಿವೆ ಎಂದರು.
ರಾಜ್ಯಸರ್ಕಾರ ಗ್ಯಾರಂಟಿ ಜಾರಿ ಮಾಡಿದರೆ ಆರ್ಥಿಕವಾಗಿ ದಿವಾಳಿಯಾಗುತ್ತದೆ. ಅಭಿವೃದ್ಧಿಗೆ ಹಣವಿರುವುದಿಲ್ಲ ಎಂದು ನೀವು ಮಾತ್ರವಲ್ಲ ದೇಶದ ಪ್ರಧಾನಿಗಳು ಕೂಡ ಟೀಕಿಸಿದ್ದರು. ಆದರೆ ನೀವೇ ಲೋಕಸಭಾ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದು ಘೋಷಣೆ ಮಾಡಿದ್ದೀರಿ. ಗ್ಯಾರಂಟಿಗಳನ್ನು ನಿರಂತರವಾಗಿ ವಿರೋಧಿಸಿದವರೆ ಈ ಕೆಲಸ ಮಾಡಿದ್ದೀರಿ ಎಂದು ಕುಟುಕಿದ ಸಿಎಂ ಸಿದ್ದರಾಮಯ್ಯ , ಯಾವುದೇ ಕಾರಣಕ್ಕೂ ಐದುವರ್ಷಗಳವರೆಗೆ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ ಎಂದರು.
Key words: grant, Central Government, state, CM Siddaramaiah