ಬೆಂಗಳೂರು, ಮಾ.21,2025: .ವಿರೋಧ ಪಕ್ಷದವರು ರಾಜ್ಯದ ಹಣಕಾಸಿನ ಸ್ಥಿತಿಯ ಬಗ್ಗೆ ಮಾತನಾಡುವಾಗ ಎರಡು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಒಂದು, ತೆರಿಗೆ ಸಂಗ್ರಹಣೆ ಸಮರ್ಪಕವಾಗಿಲ್ಲ ಎಂದಾದರೆ ಇನ್ನೊಂದು ಪರೋಕ್ಷವಾಗಿ ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಹಣಕಾಸಿನ ಪರಿಸ್ಥಿತಿ ಕ್ಲಿಷ್ಟಕರವಾಗಿದೆ ಎಂದು ವ್ಯಾಖ್ಯಾನಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೆ ವಾಸ್ತವ ಸಂಗತಿಗಳು ಬೇರೆಯದೆ ಆಗಿವೆ.
ಬಜೆಟ್ ಮೇಲಿನ ಚರ್ಚೆಗಳಿಗೆ ಸದನದಲ್ಲಿ ಮುಖ್ಯಮಂತ್ರಿಗಳ ಉತ್ತರ ಹೀಗಿತ್ತು..
ಒಂದು, ಕೇಂದ್ರ ಸರ್ಕಾರವು ತೆರಿಗೆ ಹಂಚಿಕೆ ಹಾಗೂ ಸಂಪನ್ಮೂಲ ಹಂಚಿಕೆಯಲ್ಲಿ ಮಾಡಿದ ದ್ರೋಹ ಮೊದಲ ಕಾರಣವಾದರೆ, ಎರಡನೆಯದಾಗಿ ಹಿಂದೆ ಆಡಳಿತ ನಡೆಸಿದ್ದ ಯಡಿಯೂರಪ್ಪ ಮತ್ತು ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಆರ್ಥಿಕ ಅಶಿಸ್ತು ಹಾಗೂ ಅರಾಜಕ ಆಡಳಿತದಿಂದಾಗಿ ಸಮಸ್ಯೆಗಳು ಉದ್ಭವಿಸಿವೆ. ಈ ಎರಡನ್ನೂ ಬಚ್ಚಿಡಲು ವಿರೋಧ ಪಕ್ಷದವರು ಜನರಿಗೆ ನೀಡುತ್ತಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಹಾಗೂ ಅದನ್ನು ಅನುಷ್ಠಾನ ಮಾಡುತ್ತಿರುವ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಇದು ಸರಿಯಾದ ಕ್ರಮ ಅಲ್ಲ. ರಾಜ್ಯದ ಆರ್ಥಿಕತೆಯ ಬಗ್ಗೆ ಕಿಂಚಿತ್ತಾದರೂ ತಿಳುವಳಿಕೆ ಇರುವವರು ವರ್ತಿಸುವ ರೀತಿ ಇದಲ್ಲ.
2018-19ರಲ್ಲಿ ಕೇಂದ್ರದ ಬಜೆಟ್ ಗಾತ್ರ 24.42 ಲಕ್ಷ ಕೋಟಿ ರೂ.ಇದ್ದಾಗ ರಾಜ್ಯಕ್ಕೆ ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ 46,288 ಕೋಟಿ ರೂ. ಬಂದಿತ್ತು. ಈಗ ಕೇಂದ್ರದ ಬಜೆಟ್ ಗಾತ್ರ 50.65 ಲಕ್ಷ ಕೋಟಿ ಮೀರಿದೆ. 2018-19 ಕ್ಕೆ ಹೋಲಿಸಿದರೆ ಶೇ.100 ರಷ್ಟು ಹೆಚ್ಚಾಗಿದೆ. ಆ ಲೆಕ್ಕಕ್ಕೆ ಹೋಲಿಸಿದರೆ 2025-26ನೆ ಸಾಲಿಗೆ ನಮಗೆ ಕನಿಷ್ಠ 1 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಪಾಲು ಮತ್ತು ಕೇಂದ್ರ ಪುರಸ್ಕೃತ ಯೋಜನೆಗಳಿಂದ ಅನುದಾನ ಬರಬೇಕಾಗಿತ್ತು. ಆ ಅನುದಾನ ನಿರೀಕ್ಷಿತ ಪ್ರಮಾಣದಲ್ಲಿ ಬರಲಿಲ್ಲ. ಒಂದು ನಮಗೆ ಸಮರ್ಪಕವಾಗಿ ತೆರಿಗೆ ಪಾಲೂ ಸಿಗುತ್ತಿಲ್ಲ. ಯೋಜನೆಗಳನ್ನೂ ತೆಗೆದುಕೊಳ್ಳುತ್ತಿಲ್ಲ.
ಕರ್ನಾಟಕಕ್ಕೆ 14 ನೇ ಹಣಕಾಸು ಆಯೋಗವು ಶೇ. 4.71 ರಷ್ಟು ತೆರಿಗೆ ಪಾಲು ನೀಡಿತ್ತು. ಆದರೆ 15 ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಸಿದರು. ಶೇ.23 ರಷ್ಟು ಕುಸಿತವಾಯಿತು. ಇದರಿಂದ ಪ್ರತಿ ವರ್ಷ 12 ಸಾವಿರ ಕೋಟಿ ರೂ. ರಾಜ್ಯಕ್ಕೆ ನಷ್ಟವಾಗುತ್ತಿದೆ. ಇದಷ್ಟೆ ಅಲ್ಲದೆ 15 ನೇ ಹಣಕಾಸು ಆಯೋಗವು 5,495 ಕೋಟಿ ರೂ.ವಿಶೇಷ ಅನುದಾನ ಕೊಡಲು ಶಿಫಾರಸ್ಸು ಮಾಡಿತ್ತು. ಕೆರೆಗಳ ಅಭಿವೃದ್ಧಿಗೆ 3000 ಕೋಟಿ ಹಾಗೂ ಫೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3000 ಕೋಟಿ ರೂ ಶಿಫಾರಸ್ಸು ಮಾಡಿತ್ತು. ಅದನ್ನೂ ಕೊಡಲಿಲ್ಲ. ಹಾಗೆಯೇ, ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿಗಳನ್ನು ಕೊಡುತ್ತೇನೆ ಎಂದು ಹೇಳಿ, ಕೊಡದೆ ದ್ರೋಹ ಮಾಡಿದೆ. ಈ ಕುರಿತು ವಿರೋಧ ಪಕ್ಷದವರು ತುಟಿಪಿಟಕ್ಕೆನ್ನುವುದಿಲ್ಲ. ಬದಲಾಗಿ ಮೋದಿ ಸರ್ಕಾರದ ದ್ರೋಹವನ್ನು ಸಮರ್ಥಿಸುತ್ತಾರೆ.
key words: economic situation, karnataka, betrayal of the Centre, BJP government, CM Siddaramaiah
The current economic situation of the state is due to the betrayal of the Centre and the previous BJP government: CM Siddaramaiah gave detailed information to the House