ನಾವು ಘೋಷಿಸಿದ ಕಾರ್ಯಕ್ರಮಗಳು ಜಾರಿ ಆಗುತ್ತಿರುವುದು ಜನರ ಕಣ್ಣಿಗೆ ಕಾಣುತ್ತಿದೆ. ಬಿಜೆಪಿಗೆ ಮಾತ್ರ  ಕಾಣುತ್ತಿಲ್ಲ-ಸಿಎಂ ಸಿದ್ದರಾಮಯ್ಯ

ಕಲ್ಬುರ್ಗಿ ಏಪ್ರಿಲ್, 16,2025 (www.justkannada.in): ಪ್ರಣಾಳಿಕೆಯಲ್ಲಿ, ಬಜೆಟ್ ನಲ್ಲಿ ಘೋಷಿಸಿದ ಕಾರ್ಯಕ್ರಮಗಳೆಲ್ಲಾ ಜಾರಿ ಆಗುತ್ತಿರುವುದು ಜನರ ಕಣ್ಣಿಗೆ ಕಾಣುತ್ತಿದೆ, ಬಿಜೆಪಿ ಕಣ್ಣಿಗೆ ಮಾತ್ರ ಕಾಣುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದರು.

ಕಲ್ಬುರ್ಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ 216.53 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ 6.20 ಕೋಟಿ ವೆಚ್ಚದ ಬ್ರಾಕಿಥೆರಪಿ ವಿಕೀರಣ ಚಿಕಿತ್ಸೆ ಘಟಕವನ್ನು ಉದ್ಘಾಟಿಸಿ ಹಾಗೂ 12 ಬೃಹತ್ ಮೊತ್ತದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿ ಮಾತನಾಡಿದರು.

ಪ್ರತೀ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು, ಟ್ರಾಮಾ ಸೆಂಟರ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ ಇರಲೇಬೇಕು ಎನ್ನುವುದು ನಮ್ಮ ಸರ್ಕಾರದ ಗುರಿ. ಬಡವರಿಗೂ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎನ್ನುವ ಉದ್ದೇಶದಿಂದ ಈ ಘೋಷಣೆ ಮಾಡಿದ್ದು ಒಂದೊಂದೇ ಜಿಲ್ಲೆಯಲ್ಲಿ ಇವೆಲ್ಲವೂ ನೆರವೇರುತ್ತಿವೆ ಎಂದರು.

ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಏನ್ನುವ ಬಿಜೆಪಿಯವರು ಕಲ್ಬುರ್ಗಿಗೆ ಬಂದು ಕಣ್ಣು ತೆರೆದು ನೋಡಿದರೆ ಅಭಿವೃದ್ಧಿಯ ಮಹಾಪೂರ ಕಾಣಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಿಯಾಂಕ್ ಖರ್ಗೆ ಅವರು ಮತ್ತು ಶರಣ ಪ್ರಕಾಶ್ ಪಾಟೀಲ್ ಅವರು ಯಾವ ಮಟ್ಟದ ಅಭಿವೃದ್ಧಿ ಮಾಡುತ್ತಿದ್ದಾರೆ ಎನ್ನುವುದನ್ನು ಗುಲ್ಬರ್ಗಕ್ಕೆ ಬಂದು ನೋಡಲಿ. ಸರ್ಕಾರದ ಘೋಷಿಸಿದ್ದ, ಬಜೆಟ್ ನಲ್ಲಿ ತಿಳಿಸಿದ್ದ ಎಲ್ಲವೂ ಈ ಜಿಲ್ಲೆಯಲ್ಲಿ ಜಾರಿ ಆಗುತ್ತಿದೆ ಎಂದು ಒಂದೊಂದಾಗಿ ಎಲ್ಲಾ ಯೋಜನೆಗಳನ್ನೂ ಉಲ್ಲೇಖಿಸಿ ಮಾತನಾಡಿದರು.

ಅಭಿವೃದ್ಧಿಗೆ ನಮ್ಮ ಸರ್ಕಾರದಲ್ಲಿ ಹಣಕ್ಕೆ ಕೊರತೆ ಇಲ್ಲ. ಎಲ್ಲಾ ವರ್ಗದ ಜನರಿಗೆ, ಅವಕಾಶಗಳಿಂದ ವಂಚಿತರಾದ ಜನರಿಗೆ ಸರ್ಕಾರದ ಯೋಜನೆಗಳನಗನು ತಲುಪಿಸಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿದರು.

Key words:   programs, implemented, people, BJP, CM, Siddaramaiah