ಸಿಎಂ ಸಿದ್ದರಾಮಯ್ಯ ಬೆಂಗಳೂರು ಸಿಟಿ ರೌಂಡ್ಸ್: ಡಬ್ಬಲ್ ಡೆಕ್ಕರ್ ವ್ಯವಸ್ಥೆ ಪರಿಶೀಲನೆ.

ಬೆಂಗಳೂರು,ಮೇ,22,2024 (www.justkannada.in):  ಸಿಎಂ ಸಿದ್ದರಾಮಯ್ಯ ಇಂದು ಬೆಂಗಳೂರು ಸಿಟಿ ರೌಂಡ್ಸ್ ಹಾಕುತ್ತದ್ದು ನಗರದಲ್ಲಿ ಮಳೆ ಹಾನಿ, ನಗರ ಸಂಚಾರ ಪರಿಶೀಲನೆ ನಡೆಸಿದ್ದಾರೆ.

ಬಿಟಿಎಂ ಮೆಟ್ರೋ ಸ್ಟೇಷನ್, ಬಿಟಿಎಂ ಲೇಔಟ್‌ ಸೇರಿದಂತೆ ಹಲವು ಪ್ರದೇಶಗಳಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ಬೆಂಗಳೂರು ನಗರ ಸಂಚಾರ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆಗೆ ಬಿಟಿಎಂ ಮೆಟ್ರೋಸ್ಟೇಷನ್‌ಗೆ ಭೇಟಿ ನೀಡಿದ್ದು, ಮೇಲುಸೇತುವೆ ರಸ್ತೆ ಹಾಗೂ ಮೆಟ್ರೋ ಮಾರ್ಗಗಳೆರಡೂ ಒಂದರ ಮೇಲೊಂದು ಇರುವ ಡಬಲ್‌ ಡೆಕ್ಕರ್‌ – 2 tier ವ್ಯವಸ್ಥೆಯನ್ನು ಪರಿಶೀಲಿಸಿದರು. ಸಂಚಾರ ದಟ್ಟಣೆ ನಿವಾರಣೆಗೆ ಈ ಡಬ್ಬಲ್ ಡೆಕರ್ ಮಾದರಿಯನ್ನು ನಗರದ ಇತರ ಭಾಗಗಳಲ್ಲಿಯೂ ಅಳವಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ಸಂಚಾರ ದಟ್ಟಣೆಗೆ ಪರಿಹಾರ ರೂಪವಾಗಿ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಇದಲ್ಲದೆ, ಸುಗಮ ಸಂಚಾರಕ್ಕಾಗಿ, ಬಿಟಿಎಂನಿಂದ ಬನಶಂಕರಿ ಕಡೆಗೆ ಹೋಗುವಾಗ, ರಾಘವೇಂದ್ರಸ್ವಾಮಿ ಟೆಂಪಲ್‌ ಸರ್ಕಲ್‌, ಜಯನಗರ 5ನೇ ಬ್ಲಾಕ್‌ ನಲ್ಲಿ ಅಂಡರ್‌ ಪಾಸ್‌ ನಿರ್ಮಾಣಕ್ಕೆ ಬೇಡಿಕೆ ಇದ್ದು, ಇಲ್ಲಿ ಅಂಡರ್‌ ಪಾಸ್‌ ನಿರ್ಮಿಸಲು  ಸಿಎಂ ಸಿದ್ದರಾಮಯ್ಯ ಸೂಚಿಸಿದರು.

ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ. ಅನಾಹುತ ಆಗ್ಲಿ ಅಂತನಾ..? ಸಿಎಂ ಪ್ರಶ್ನೆ

ಸಿಟಿ ರೌಂಡ್ಸ್ ವೇಳೆ ಸಿಎಂ‌ ಕಣ್ಣಿಗೆ ರಸ್ತೆ ಬದಿ ಇದ್ದ ಒಣ ಮರಗಳು ಕಣ್ಣಿಗೆ ಬಿದ್ದವು. ಈ ವೇಳೆ ಗರಂ ಆದ ಸಿಎಂ ಸಿದ್ದರಾಮಯ್ಯ, ಒಣಗಿದ ಮರ ಯಾಕೆ ಬಿಟ್ಕೊಂಡಿದ್ದೀರಿ. ಅನಾಹುತ ಆಗ್ಲಿ ಅಂತನಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಬನಶಂಕರಿ  2ನೇ ಹಂತ, 100 ft. ರಸ್ತೆಯ ಒಣಗಿದ ಮರಗಳನ್ಮು ತೆರವುಗೊಳಿಸಬೇಕು. ನಗರದಾದ್ಯಂತ ಇರುವ ಒಣಮರ, ಅಪಾಯಕಾರಿ ಮರಗಳನ್ನು ತೆರವುಗೊಳಿಸಬೇಕು. ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ಕೊಡಬೇಕು, ಪದ್ಮನಾಭನಗರ ಫ್ಲೈಓವರ್ ಬಳಿ ಹಾನಿಯಾಗಿರುವ ಫುಟ್ ಪಾತ್ ಶೀಘ್ರವಾಗಿ ದುರಸ್ತಿಗೊಳಿಸಲು ಹಾಗೂ ಮೆಟ್ರೋ ಮತ್ತು ಫ್ಲೈ ಓವರ್ ಕಾಮಗಾರಿಯಿಂದಾಗಿ ಅಲ್ಲಲ್ಲಿ ಹಾಕಲಾಗಿದ್ದ ಡೆಬ್ರಿಸ್ ಗಳನ್ನು ಆಗಿಂದಾಗಲೇ ತೆರವುಗೊಳಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದರು.

Key words: CM -Siddaramaiah-Bangalore -City -Rounds