ಸಿಎಂ ಸಿದ್ದರಾಮಯ್ಯ ಒಬ್ಬ ಕೇರ್ಲೆಸ್ ಪರ್ಸನ್, ಬೇಜವಾಬ್ದಾರಿ ಮನುಷ್ಯ- ಹೆಚ್.ವಿಶ್ವನಾಥ್ ಟೀಕೆ

ಮೈಸೂರು,ಅಕ್ಟೋಬರ್,28,2024 (www.justkannada.in): ಸಿಎಂ ಸಿದ್ದರಾಮಯ್ಯ ಒಬ್ಬ ಕೇರ್ಲೆಸ್ ಪರ್ಸನ್. ಬೇಜವಾಬ್ದಾರಿ ಮನುಷ್ಯ. ಇವರ ಬೇಜವಾಬ್ದಾರಿಯಿಂದಲೇ ಇಷ್ಟು ಸಮಸ್ಯೆಗೆ ಸಿಲುಕಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಟೀಕಿಸಿದರು.

ನಗರ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್,  ರಾಜ್ಯದಲ್ಲಿ  ಮೂರು ಕ್ಷೇತ್ರಗಳಿಗೆ  ಉಪ ಚುನಾವಣೆ ನಡೆಯುತ್ತಿದೆ. ಕಾಂಗ್ರೆಸ್ ಮೇಲೆ ಮುಡಾ, ವಾಲ್ಮೀಕಿ‌‌ ನಿಗಮ ಹಗರಣಗಳ ಕಾರ್ಮೋಡ ಕವಿದಿದೆ‌. ಚನ್ನಪಟ್ಟಣದಲ್ಲಿ ಜೆಡಿಎಸ್ ಗೆ ಪೂರಕ ವಾತಾವರಣವಿದೆ. ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿದ್ದಾರೆ. ಮೆಗಾಸಿಟಿ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ವಂಚನೆಗೊಳಗಾದ ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾಗಾಗಿ ಜೆಡಿಎಸ್ ಯುವನಾಯಕ ನಿಖಿಲ್ ಗೆಲುವು ಸಾಧಿಸಲಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ ಎಂದು ನುಡಿದರು.

ಭೈರತಿ ಸುರೇಶ್ ಒಬ್ಬ ಅಯೋಗ್ಯ ಸಂಸ್ಕೃತಿ, ಸಂಸ್ಕಾರ ಇಲ್ಲದ ಮನುಷ್ಯ

ಇದೇ ವೇಳೆ ಸಚಿವ ಭೈರತಿ ಸುರೇಶ್ ವಿರುದ್ದ ವಾಗ್ದಾಳಿ ನಡೆಸಿದ ಹೆಚ್.ವಿಶ್ವನಾಥ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬಗ್ಗೆ ಸಚಿವ ಭೈರತಿ ಸುರೇಶ್ ಕೀಳಾಗಿ ಮಾತನಾಡಿದ್ದಾನೆ. ಈತ ಒಬ್ಬ ಅಯೋಗ್ಯ ಸಂಸ್ಕೃತಿ, ಸಂಸ್ಕಾರ ಇಲ್ಲದ ಮನುಷ್ಯ. ಶೋಭಾ ಕರಂದ್ಲಾಜೆ ಸುಸಂಸ್ಕೃತ ಹೆಣ್ಣು ಮಗಳು. ಕೇಂದ್ರ, ರಾಜ್ಯದಲ್ಲಿ ಸಚಿವೆಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಇಂತವರಿಂದ  ಸಿದ್ದರಾಮಯ್ಯ ಅವರ ಘನತೆ ಹಾಳಾಗುತ್ತಿದೆ. ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಿಕೊಳ್ಳಲಿ ಎಂದು ಬಿಟ್ಟುಬಿಟ್ಟಿದ್ದಾರೆ. ನನ್ನ ಬಗ್ಗೆಯೂ ಭೈರತಿ ಸುರೇಶ್ ಕೇವಲವಾಗಿ ಮಾತ‌ನಾಡಿದ್ದಾನೆ. ಇವನನ್ನು ಒದ್ದು ಒಳಗೆ ಹಾಕಬೇಕಿತ್ತು. ಸಿದ್ದರಾಮಯ್ಯ ಬೆಂಬಲದಿಂದ ಎಗರಾಡುತ್ತಿದ್ದಾನೆ ಎಂದು ಹರಿಹಾಯ್ದರು.

ಸಿದ್ದರಾಮಯ್ಯನನ್ನ  ಜೆಡಿಎಸ್ ನಿಂದ ಹೊರ ಹಾಕಿ ಬೀದಿ ಪಾಲಾಗಿದ್ದಾಗ ಕಾಂಗ್ರೆಸ್ ಗೆ ಕರೆತಂದವರು ನಾವು. ಸಿದ್ದರಾಮಯ್ಯ ಆಗ ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸುತ್ತಿದ್ದರು. ಆದರೆ, ಕಾಂಗ್ರೆಸ್ ಗೆ ಬಂದು ಸಿದ್ದರಾಮಯ್ಯ ಸಿಎಂ ಆದದ್ದು ವಿಪರ್ಯಾಸವಾಗಿದೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

ಸಿದ್ದರಾಮಯ್ಯನ ಕಾಲ ವಿಜಯನಗರ ಸಾಮ್ರಾಜ್ಯದ ಕಾಲದಂತಾಗಿದೆ. ಒಂದೂವರೆ ಕೋಟಿ ರೂಪಾಯಿ ಬೆಲೆ ಬಾಳುವ ನಿವೇಶನ ಕೇವಲ ಒಂದು ಸಾವಿರ, ಎರಡು ಸಾವಿರಕ್ಕೆ  ಕೊಟ್ಟಿದ್ದಾರೆ. ಸಿಎಂ ಸಿದ್ದರಾಮಯ್ಯ ಪತ್ನಿಗೂ ಇದೇ ರೀತಿ ‌ನಿವೇಶನ ಹಂಚಿಕೆ ಮಾಡಲಾಗಿದೆ‌ ಎಂದು ಹೆಚ್.ವಿಶ್ವನಾಥ್ ಆರೋಪಿಸಿದರು.

ಸಿದ್ದರಾಮಯ್ಯ ಮಾತೆತ್ತಿದರೆ ನಾನು ಅಕ್ಕಿ ಕೊಟ್ಟೆ ಎನ್ನುತ್ತಾರೆ. ದೇವರಾಜ ಅರಸು ಅವರು ಅಕ್ಕಿ ಬೆಳೆಯುವ ಭೂಮಿಯನ್ನೇ ನೀಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮೊದಲ ಬಾರಿ ಕೊಟ್ಟ ಆಡಳಿತ ಈಗ ಕೊಡಲಿಕ್ಕೆ ಆಗುತ್ತಿಲ್ಲ ಎಂದು ಹೆಚ್ ವಿಶ್ವನಾಥ್ ಟೀಕಿಸಿದರು.

ಮುಡಾ ಅಕ್ರಮದ ಪ್ರಕರಣ ಲೋಕಾಯುಕ್ತದಿಂದ ಸರಿಯಾಗಿ ತನಿಖೆ ನಡೆಯುತ್ತಿಲ್ಲ. ಲೋಕಾಯುಕ್ತದ ಬಗ್ಗೆ ರಾಜ್ಯದ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಾಯುಕ್ತ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ‌.  ಮುಡಾ ಹಗರಣದ ಬಗ್ಗೆ ಸಿಬಿಐ ಹಾಗು ಇಡಿ ಸಮಗ್ರವಾಗಿ ತನಿಖೆ ಮಾಡಬೇಕು. ಎಂಎಲ್ಸಿ  ಎಚ್ ವಿಶ್ವನಾಥ್  ಆಗ್ರಹಿಸಿದರು.

Key words: CM, Siddaramaiah, careless person, H. Vishwanath