ಬೆಂಗಳೂರು,ಮಾರ್ಚ್, 30, 2024 (www.justkannada.in): ನರೇಂದ್ರ ಮೋದಿ ಅವರು ದುರ್ಬಲ ಪ್ರಧಾನಮಂತ್ರಿ, ನಾನು ಪ್ರಬಲ ಸಿಎಂ ಎಂದು ಕೊಚ್ಚಿಕೊಂಡ ಸಿದ್ದರಾಮಯ್ಯ ಅವರ ಗರ್ವಭಂಗ ಈ ಲೋಕಸಭೆ ಚುನಾವಣೆಯಲ್ಲಿ ಆಗಬೇಕು ಎಂದು ಹೇಳಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ದ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿ ಕಿಡಿಕಾರಿರುವ ಸಿಎಂ ಸಿದ್ದರಾಮಯ್ಯ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ಗರ್ವಭಂಗ ಮಾಡುತ್ತೇನೆಂದು ಶಪಥ ಮಾಡಿದ್ದಾರೆ. ನನ್ನದು ಗರ್ವವೂ ಅಲ್ಲ, ಅಹಂಕಾರವೂ ಅಲ್ಲ. ನನ್ನದು ಕನ್ನಡಿಗರ ರಕ್ತದ ಕಣಕಣದಲ್ಲಿರುವ ಸ್ವಾಭಿಮಾನ. ಕನ್ನಡ-ಕನ್ನಡಿಗ-ಕರ್ನಾಟಕದ ರಕ್ಷಣೆಗಾಗಿ ತಲೆ ಎತ್ತಿ, ಎದೆಯುಬ್ಬಿಸಿ ಪ್ರಶ್ನಿಸುವ ಮತ್ತು ಹೋರಾಟ ನಡೆಸುವ ಸ್ವಾಭಿಮಾನ ಎನ್ನುವುದನ್ನು ಅತ್ಯಂತ ವಿನಯಪೂರ್ವಕವಾಗಿ ಅವರ ಗಮನಕ್ಕೆ ತರಬಯಸುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರೇ, ವೈಯಕ್ತಿಕ ಇಲ್ಲವೆ ರಾಜಕೀಯ ಲಾಭಕ್ಕಾಗಿ ನಾನು ಯಾರ ಜೊತೆಯಲ್ಲಿಯೂ ರಾಜಿ ಮಾಡಿಕೊಳ್ಳಲಾರೆ, ಅಂತಹ ಪರಿಸ್ಥಿತಿ ಬಂದೊದಗಿದರೆ ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ ವಿನ: ಕರ್ನಾಟಕದ ಹಿತಾಸಕ್ತಿಯ ವಿರೋಧಿಗಳ ಜೊತೆಯಲ್ಲಿ ನಿಮ್ಮಂತೆ ಹೊಂದಾಣಿಕೆ ಮಾಡಿಕೊಳ್ಳಲಾರೆ ಎಂದು ಸಿಎಂ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ದೇವೇಗೌಡರ ಜೊತೆ ರಾಜಕೀಯವಾಗಿ ನನಗೆ ಭಿನ್ನಾಭಿಪ್ರಾಯವಿದ್ದರೂ. ನಮ್ಮ ನೆಲ, ಜಲ ಮತ್ತು ಭಾಷೆಯ ರಕ್ಷಣೆಯ ಬಗೆಗಿನ ಅವರ ನಿಲುವಿನ ಬಗ್ಗೆ ಗೌರವ ಇತ್ತು. ಆದರೆ ಕಳೆದ ಹತ್ತು ವರ್ಷಗಳ ಅಧಿಕಾರವಧಿಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹೆಜ್ಜೆಹೆಜ್ಜೆಗೂ ಕರ್ನಾಟಕದ ಹಿತಾಸಕ್ತಿಯ ವಿರುದ್ಧವೇ ಕೆಲಸ ಮಾಡಿದೆ. ನಾಡಧ್ವಜಕ್ಕೆ ವಿರೋಧ, ಹಿಂದಿ ಹೇರಿಕೆ, ಕಾವೇರಿ, ಕೃಷ್ಣ, ಮಹದಾಯಿ ಜಲವಿವಾದಗಳಲ್ಲಿ ಅನ್ಯಾಯ, ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗ ಯುವಜನರಿಗೆ ವಂಚನೆ, ಹೀಗೆ ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ದ್ರೋಹ ಎಸಗುತ್ತಾ ಬಂದಿದೆ. ಹೀಗಿದ್ದರೂ ‘ದೇಶದ ಎಲ್ಲ ಸಮಸ್ಯೆಗಳಿಗೆ ಮೋದಿ ಮತ್ತು ಶಾ ಬಳಿ ಪರಿಹಾರ ಇದೆ ಎಂದು ಹೇಳುವಾಗ ಕನಿಷ್ಠ ನಿಮ್ಮ ಆತ್ಮಸಾಕ್ಷಿಯಾದರೂ ನಿಮ್ಮನ್ನು ಚುಚ್ಚಲಿಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ಮಾಡಿರುವ ಅನ್ಯಾಯಕ್ಕೆ ಕ್ಷಮೆಯೇ ಇಲ್ಲ. ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರದ ಖಜಾನೆಗೆ ಸಂದಾಯವಾಗುವ ಕನ್ನಡಿಗರ ಒಂದು ರೂಪಾಯಿಗೆ ಪ್ರತಿಯಾಗಿ ಕೇವಲ ಹದಿಮೂರು ಪೈಸೆಯಷ್ಟು ಹಣ ಮಾತ್ರ ಕರ್ನಾಟಕಕ್ಕೆ ವಾಪಸು ಬರುತ್ತಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಕೂಡಾ ಕೇಂದ್ರ ಸರ್ಕಾರದ ಅನ್ಯಾಯವನ್ನು ಕೂಗಿ ಕೂಗಿ ಹೇಳುತ್ತಿವೆ. ಆದರೆ ಕರ್ನಾಟಕದ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಮಾತ್ರ ನಮ್ಮ ನೆಲ-ಜಲ-ಭಾಷೆಯ ವಿರೋಧಿಗಳ ಜೊತೆಯಲ್ಲಿ ರಾಜಿ ಮಾಡಿಕೊಂಡು ಕನ್ನಡಿಗರಿಗೆ ದ್ರೋಹ ಎಸಗಿದೆ.
ದೇವೇಗೌಡರೇ, ಎಪ್ಪತ್ತು ವರ್ಷಗಳ ಕಾಲ ರಾಜಕೀಯದಲ್ಲಿದ್ದು ಕನ್ನಡಿಗರ ಪ್ರೀತಿ-ಅಭಿಮಾನವನ್ನು ಉಂಡು ಬೆಳೆದ ನೀವು ನಾವು ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿಯೇ ಚುನಾವಣೆ ನಡೆಸುತ್ತೇವೆ ಎಂಬ ಶರಣಾಗತಿಯ ಹೇಳಿಕೆಯನ್ನು ನೀಡುವಾಗ ಕನಿಷ್ಠ ನಿಮ್ಮ ಆತ್ಮಾಭಿಮಾನವೂ ಕುಟುಕಲಿಲ್ಲವೇ? ಕನ್ನಡ-ಕರ್ನಾಟಕ ವಿರೋಧಿ ನಾಯಕನಿಗೆ ಈ ರೀತಿ ಶರಣಾಗುವುದು ಸಮಸ್ತ ಕನ್ನಡಿಗರಿಗೆ ಮಾಡುವ ದ್ರೋಹ ಎಂದು ನಿಮಗೆ ಅನಿಸಲಿಲ್ಲವೇ? ನಿಮ್ಮೊಳಗಿನ ರಾಜಕೀಯ ನಾಯಕ ಅಷ್ಟೊಂದು ದುರ್ಬಲ ಅಸಹಾಯಕನಾಗಿ ಹೋದನೇ ಎಂದು ಹೆಚ್ ಡಿಡಿಗೆ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.
Key words: CM Siddaramaiah, former PM, HD DeveGowda