ಮೈಸೂರು,ಅಕ್ಟೋಬರ್,31,2024 (www.justkannada.in): ಮೈಸೂರು ಮುಡಾ 50-50 ಹಗರಣ ದೊಡ್ಡ ಸದ್ದು ಮಾಡಿದೆ. ಮುಡಾ ಹಗರಣ ಸಂಬಂಧ ಇಡಿ ಕೂಡ ಎಂಟ್ರಿಕೊಟ್ಟಿದೆ. ಈ ನಡುವೆ 50-50 ಅನುಪಾತದಲ್ಲಿ ಹಂಚಿಕೆಯಾಗಿದ್ದ ಎಲ್ಲಾ ಸೈಟ್ ಗಳನ್ನ ರದ್ದು ಮಾಡುವಂತೆ ಶಾಸಕ ಶ್ರೀವತ್ಸ ಬರೆದಿದ್ದ ಪತ್ರಕ್ಕೆ ಮನವಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದು, ಇದೀಗ 50-50 ಅನುಪಾತದಲ್ಲಿ ಸೈಟ್ ಪಡೆದ ಎಲ್ಲರಿಗೂ ಟೆನ್ಷನ್ ಶುರುವಾಗಿದೆ.
ಹೌದು, ಮೈಸೂರು ಮುಡಾದಲ್ಲಿ 50-50 ಅನುಪಾತದಲ್ಲಿ ಹಂಚಿಕೆಯಾಗಿರುವ ಸೈಟ್ ವಿಚಾರ ಬಾರಿ ಸಂಚಲವನ್ನ ಸೃಷ್ಟಿ ಮಾಡಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಪತ್ನಿ 14 ಸೈಟ್ ಗಳನ್ನ ವಾಪಸ್ಸು ಮಾಡಿದ್ದಾರೆ. ಈ ಸಂಬಂಧ 50-50 ಅನುಪಾತದಲ್ಲಿ ಹಂಚಿಕೆಯಾಗಿರುವ ಎಲ್ಲಾ ಸೈಟ್ ಗಳನ್ನು ರದ್ದು ಮಾಡುವಂತೆ ಸಿಎಂ ಸಿದ್ದರಾಮಯ್ಯಗೆ ಕಳೆದ 15 ದಿನಗಳ ಹಿಂದೆ ಬಿಜೆಪಿ ಶಾಸಕ ಶ್ರೀವತ್ಸ ಮನವಿ ಪತ್ರ ನೀಡಿದ್ದರು.
ಇದೀಗ ಆ ಮನವಿ ಪತ್ರಕ್ಕೆ ಸ್ಪಂದನೆ ಸಿಕ್ಕಿದ್ದು ಎಲ್ಲಾ ಸೈಟ್ ಗಳನ್ನು ವಾಪಸ್ಸು ಪಡೆಯಿರಿ ಎಂಬ ಶಾಸಕರ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಲಿಖಿತ ರೂಪದಲ್ಲಿ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚನೆ ಕೊಟ್ಟಿದ್ದು, ಪತ್ರದ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದಾರೆ.
ಇದಕ್ಕೆ ಶಾಸಕ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದು, ಸಿಎಂ ನನ್ನ ಪತ್ರಕ್ಕೆ ಪಾಸಿಟಿವ್ ಆಗಿ ಸ್ಪಂದಿಸಿದ್ದಾರೆ. ಮುಡಾವನ್ನು ಸ್ವಚ್ಚಗೊಳಿಸಬೇಕು ಎಂದು ಸಿಎಂ ಅನಿಸಿರಬೇಕು ಎಂದಿದ್ದಾರೆ.
ಮುಖ್ಯಮಂತ್ರಿಗಳು ಪಾಸಿಟಿವ್ ಆಗಿ ತೆಗೆದುಕೊಂಡಿದ್ದಾರೆ. ನಗರಾಭಿವೃದ್ಧಿ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎಲ್ಲಾ 50-50 ಸೈಟ್ ಗಳನ್ನು ರದ್ದು ಮಾಡುವಂತೆ ಮನವಿ ಮಾಡಿದ್ದೆ. ಎಲ್ಲವನ್ನು ರದ್ದು ಮಾಡಿ, ತದ ನಂತರ ಅರ್ಹರಿಗೆ ಕೊಡಲಿ ಎಂಬುದು ನನ್ನ ಉದ್ದೇಶ. ಸೈಟ್ ಪಡೆದವರಲ್ಲಿ ಬಹುತೇಕರು ಅನರ್ಹರಿದ್ದಾರೆ. 50-50 ಅನುಪಾತದಲ್ಲಿ ಸೈಟ್ ಪಡೆದವರು ಈಗ ಅದನ್ನು ಅರ್ಧ ರೇಟ್ ಗೆ ಮಾರಾಟ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ಸಬ್ ರಿಜಿಸ್ಟ್ರಾರ್ ಗೆ ಸೂಚನೆ ನೀಡಬೇಕು ಎಂದು ಶಾಸಕ ಶ್ರೀವತ್ಸ ಆಗ್ರಹಿಸಿದ್ದಾರೆ.
ಸಿಎಂ ಸೈಟ್ ಮುಂದಿಟ್ಟುಕೊಂಡು ಹಲವರು ತಮ್ಮ ರಕ್ಷಣೆಗೆ ಮುಂದಾಗಿದ್ದರು. ಮೊದಲು 50-50 ಅನುಪಾತ ತಪ್ಪು ಅಂತ ಇದೆ. ಅದರ ಬಗ್ಗೆಯು ತೀರ್ಮಾನ ಮಾಡಬೇಕಿದೆ. ಸಿಎಂ ರೀತಿಯೆ ಉಳಿದವರ ತನಿಖೆಯಾಗಬೇಕಲ್ಲವೆ? ಎಲ್ಲಾ ಅಕ್ರಮ ಹೊರ ಬರಬೇಕು. ಭೈರತಿ ಸುರೇಶ್ ರವರ ಬಗ್ಗೆ ಎಳ್ಳಷ್ಟು ನಂಬಿಕೆ ಇಲ್ಲ. ಮುಡಾ ಹಗರಣ ವಿಚಾರವಾಗಿ ನನ್ನ ಹೋರಾಟ ನಿಲ್ಲಲ್ಲ. ಈ ಪ್ರಕರಣವನ್ನ ತಾರ್ಕಿಕ ಅಂತ್ಯಕ್ಕೆ ಕೊಂಡೋಯ್ಯುತ್ತೇನೆ. ಈ ಪತ್ರದ ಬಗ್ಗೆ ಮತ್ತೆ ಮುಂದಿನ ವಾರ ನಗರಾಭಿವೃದ್ಧಿ ಮುಖ್ಯ ಕಾರ್ಯದರ್ಶಿಗಳನ್ನ ಭೇಟಿ ಮಾಡಿ ಫಾಲೋ ಅಪ್ ಮಾಡುತ್ತೇನೆ ಎಂದು ಶಾಸಕ ಶ್ರೀವತ್ಸ ತಿಳಿಸಿದ್ದಾರೆ.
Key words: CM Siddaramaiah, MLA Srivatsa, letter, Muda, site