ಮೈಸೂರು,ಅಕ್ಟೋಬರ್,4,2024 (www.justkannada.in): ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿದ ಬಿಜೆಪಿ ನಾಯಕರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಸವಾಲು ಹಾಕಿದ್ದು ಡೋಂಗಿತನ ಬೇಡ. ಯಾರ ಮೇಲೆ ಎಫ್ಐಆರ್ ಆಗಿದೆ, ಯಾರ ಮೇಲೆ ಚಾರ್ಜ್ ಶೀಟ್ ಇದೆ. ಯಾರು ಬೇಲ್ ಮೇಲೆ ಇದ್ದಾರೆ ಅವರ ಸ್ಥಾನಗಳಿಗೆ ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಮೂಡಾ ಸೈಟ್ ವಾಪಸ್ಸು ಕೊಡಲು ಕುಟುಂಬದಲ್ಲಿ ಅವರು ಚರ್ಚಿಸಿದ್ದಾರೆ. ಸೈಟ್ ವಾಪಸ್ಸು ಕೊಟ್ಟಿರೋದು ಅವರ ವೈಯಕ್ತಿಕ ತೀರ್ಮಾನ. ಸಿಎಂ ಪತ್ನಿ ಅವರ ಜಮೀನನ್ನು ಮೂಡಾ ಅವರು ಒತ್ತುವರಿ ಮಾಡಿದ್ದರು. ಅದಕ್ಕೆ ಬದಲಾಗಿ 14 ಸೈಟುಗಳನ್ನು ನೀಡಿದ್ದರು. ಇದು ಡಿನೋಟಿಫಿಕೇಷನ್ ಭೂಮಿ ಅಲ್ಲ. ಪರಿಹಾರವಾಗಿ ಬದಲಿ ಜಾಗ ಕೊಟ್ಟಿರೋದು. ಈಗ ಅವರು ವೈಯಕ್ತಿಕ ತೀರ್ಮಾನ ತಗೊಂಡು ವಾಪಸ್ಸು ಕೊಟ್ಟಿದ್ದಾರೆ ಎಂದರು.
ಆರ್.ಅಶೋಕ್ ರಾಜೀನಾಮೆ ಕೊಟ್ಟು ಮಾತನಾಡಲಿ.
ಇದೇ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ದ ವಾಗ್ದಾಳಿ ನಡೆಸಿದ ಕೃಷ್ಣಭೈರೇಗೌಡ, ಆರ್.ಅಶೋಕ್ ರಾಜೀನಾಮೆ ಕೊಟ್ಟು ಮಾತನಾಡಲಿ. ಆ ಮೇಲೆ ನಾವು ಉತ್ತರ ಕೊಡ್ತೀವಿ. ಅಶೋಕ್ ಬಿಡಿಎ ವಶಪಡಿಸಿಕೊಂಡ ಜಮೀನನ್ನು 22 ವರ್ಷದ ಬಳಿ ಡಿನೋಟಿಫಿಕೇಶನ್ ಮಾಡಿಸುತ್ತಾರೆ. ಡಿನೋಟಿಫಿಕೇಶನ್ ಮೊದಲೇ ಜಮೀನನ್ನು ಖರೀದಿ ಮಾಡಿದ್ದಾರೆ. ಬಿಡಿಎ ಜಮೀನನ್ನೇ ಯಾರೋದ್ದೋ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ಇವರು ಮಾಡಿರೋದು ಬಹಳ ನ್ಯಾಯಾನಾ? ಬಿಡಿಎ ಜಮೀನನ್ನು ಯಾರಿಂದಲೋ ಖರೀದಿ ಮಾಡಿರೋದು ಸರಿನಾ? ಇವರದ್ದು ಯಾವ ಸೀಮೆ ನ್ಯಾಯ. ಬಿಡಿಎಗೆ ಫ್ರಾಡ್ ಮಾಡಿ ಜಮೀನು ಖರೀದಿ ಮಾಡಿರೋದು. ರಾಮಸ್ವಾಮಿ ಎಂಬ ಸಂಬಂಧಿಸಿದ ವ್ಯಕ್ತಿಯಿಂದ ಡಿನೋಟಿಫಿಕೇಶನ್ ಗೆ ಅರ್ಜಿ ಕೊಟ್ಟಿದ್ದಾರೆ. ರಾಮಸ್ವಾಮಿಗೂ ಈ ಜಮೀನಿಗೂ ಏನ್ ಸಂಬಂಧ. ಅರ್ಜಿ ಕೊಟ್ಟ 10 ದಿನಗಳಲ್ಲಿಯೇ ಡಿನೋಟಿಫಿಕೇಷನ್ ಮಾಡಿಸಿದ್ದಾರೆ. ಇವರು ನ್ಯಾಯ ಬದ್ಧವಾಗಿ ಮಾಡಿದ್ದಾರಾ. ಇವರು ಮಾಡಬಾರದ್ದು ಮಾಡಿ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡಬೇಕು ಅಂತಾರೆ. ಮೊದಲು ಅಶೋಕ್ ರಾಜೀನಾಮೆ ಕೊಟ್ಟು ಆ ಮೇಲೆ ಕೇಳಲಿ ಎಂದು ಟಾಂಗ್ ಕೊಟ್ಟರು.
ಸಿಎಂ ರಾಜೀನಾಮೆ ಕೇಳುವವರು ಡೋಂಗಿ ಮಾತು ಬಿಡಲಿ. ಸಿಎಂ ರಾಜೀನಾಮೆ ಕೇಳುವವರ ಮೇಲೆಯೇ ಕೇಸ್ ಗಳು ಇವೆ. ಅವರು ರಾಜೀನಾಮೆ ಕೊಟ್ಟ ಮೇಲೆ ರಾಜೀನಾಮೆ ಕೇಳುವ ನೈತಿಕತೆ ಇರುತ್ತೆ. ಅವರಿಗೊಂದು ಬೇರೆ ಅವರಿಗೊಂದು ಕಾನೂನು ಇದ್ಯಾ. ಈ ಡೋಂಗಿತನ ಬೇಡಾ. ಯಾರ ಮೇಲೆ ಎಫ್ಐಆರ್ ಆಗಿದೆ, ಯಾರ ಮೇಲೆ ಚಾರ್ಜ್ ಶೀಟ್ ಇದೆ. ಯಾರು ಬೇಲ್ ಮೇಲೆ ಇದ್ದಾರೆ ಅವರ ಸ್ಥಾನಗಳಿಗೆ ರಾಜೀನಾಮೆ ಕೊಡಲಿ. ಆ ಮೇಲೆ ಬೇರೆ ಅವರನ್ನು ರಾಜೀನಾಮೆ ಕೇಳಲಿ. ಮಾಡಬಾರದ್ದನ್ನು ಮಾಡಿ ಮತ್ತೊಬ್ಬರ ಮೇಲೆ ಗೂಬೆ ಕೂರಿಸಿ ಯಾರನ್ನೂ ಯಾಮಾರಿಸಲು ಆಗಲ್ಲ ಎಂದು ಸಚಿವ ಕೃಷ್ಣಭೈರೇಗೌಡ ಕಿಡಿಕಾರಿದರು.
ಯಾರು ರಾಜೀನಾಮೆ ಕೇಳ್ತಾ ಇದ್ದಾರೆ, ಎಫ್ಐಆರ್ ಆಗಿರುವವರು ಕೊಡಲಿ. ಡಿನೋಟಿಫಿಕೇಶನ್ ನಲ್ಲಿ ಭಾಗಿಯಾಗಿದ್ದಾರೆ ಅವರೆಲ್ಲರೂ ರಾಜೀನಾಮೆ ಕೊಡಲಿ. ಈ ಮೂಲಕ ರಾಜಕೀಯದಲ್ಲಿ ಮೇಲ್ಪಂಕ್ತಿ ಹಾಕಲಿ. ನಾನು ಆಗ ಏನು ಕ್ರಮ ಬೇಕು ಅದನ್ನು ತಗೋತೀವಿ. ಎಫ್ ಐಆರ್ ಆದ ಕೂಡಲೇ ರಾಜೀನಾಮೆ ಕೊಡಬೇಕು ಅಂತಾರೆ. ಆಗಿದ್ರೆ ಎಫ್ಐಆರ್ ಆಗಿರುವವರು ಎಲ್ಲಾ ರಾಜೀನಾಮೆ ಕೊಡಲಿ. ನಾವು ಸಹ ಮುಂದೆ ಅದೇ ಅನುಸರಿಸುತ್ತೇವೆ. ಒಂದು ಬೆರಳು ತೋರಿಸುವಾಗ, ನಾಲ್ಕು ಬೆರಳು ಅವರ ಕಡೆ ತೋರಿಸುತ್ತಿರುತ್ತೆ. ನಿಮಗೊಂದು ಕಾನೂನು ನಮಗೊಂದು ಕಾನೂನು ಬೇಡ. ಇನ್ನೊಬ್ಬರಿಗೆ ಬೋಧನೆ ಮಾಡುವ ಮುನ್ನ ತಾವು ಅನುಸರಿಬೇಕು. ಆ ಮೇಲೆ ಇನ್ನೊಬ್ಬರಿಗೆ ಪಾಠ ಹೇಳಬೇಕು. ಮಾಡೋದೆಲ್ಲಾ ಅನಾಚಾರ ಹೇಳೋದು ಆಚಾರ ಅಂದ್ರೆ ಹೇಗೆ. ಅವರ ಮಾತಿಗೆ ಅವರೇ ಬದ್ಧರಾಗಿಲಿ. ಅವರು ಮೊದಲು ರಾಜೀನಾಮೆ ಕೊಡಲಿ ಎಂದು ಆಗ್ರಹಿಸಿದರು.
40 ವರ್ಷದಿಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿ ಇದ್ದಾರೆ. ತಪ್ಪು ಮಾಡಿದ್ದರೆ ರಾಜಕೀಯದಲ್ಲಿ ಇರ್ತಾ ಇರಲಿಲ್ಲ. ಹೀಗೆ ಜಿ.ಟಿ.ದೇವೇಗೌಡರು ಹೇಳಿದ್ದಾರೆ. ಜಿಟಿ ದೇವೇಗೌಡರು ಸಿದ್ದರಾಮಯ್ಯ ಜೊತೆಗೆ, ಎದುರಾಳಿಯಾಗಿ, ವಿರೋಧಿಯಾಗಿ ಇದ್ದವರು. ಹತ್ತಿರದಿಂದ, ದೂರದಿಂದ, ಎದುರಾಗಿಯೂ ನೋಡಿದ್ದಾರೆ. ಅವರ ಅನುಭವದ ಮಾತಲ್ಲಿ ಹೇಳಿದ್ದಾರೆ. ಜಿಟಿಡಿ ಹಾಗೂ ಸಿದ್ದರಾಮಯ್ಯ ಪರಿಚಯ 50 ವರ್ಷದ್ದು. ಪರ ವಿರೋಧ ಎಲ್ಲವನ್ನೂ ಅನುಭವಿಸಿದ್ದಾರೆ. ಆ ಅನುಭವದ ಮೇಲೆ ಸಿದ್ದರಾಮಯ್ಯ ತಪ್ಪು ಮಾಡಿಲ್ಲ ಎಂದು ಜಿಟಿಡಿ ಹೇಳಿದ್ದಾರೆ. ಅದಕ್ಕೆ ಬೇರೆ ಬೇರೆ ವೈಯಕ್ತಿಕ ಆಯಾಮಗಳು ಇರುತ್ತೆ ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.
Key words: CM Siddaramaiah, resign, BJP, Minister, Krishnabhairegowda