ಮೈಸೂರು,ಅಕ್ಟೋಬರ್,2,2024 (www.justkannada.in): ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಯಾವುದೇ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸದೇ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಎನ್. ಮಹೇಶ್ ಆಗ್ರಹಿಸಿದರು.
ಮುಡಾ ಹಗರಣ ಸಂಬಂಧ ಮೈಸೂರಿನಲ್ಲಿ ಬಿಜೆಪಿ ನಾಯಕರಾದ ಮಾಜಿ ಸಚಿವ ಎನ್ ಮಹೇಶ್,ಶಾಸಕ ಶ್ರೀವತ್ಸ, ನಾಗೇಂದ್ರರ ಸಮ್ಮುಖದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಯಿತು.
ಈ ವೇಳೆ ಮಾತನಾಡಿದ ಎನ್ . ಮಹೇಶ್, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳ ಜಾರಿ ಮಾಡಲಿಕ್ಕೆ ಮುಗ್ಗರಿಸಿ ಬೀಳುತ್ತಿದೆ. ಮುಗ್ಗರಿಸುವುದನ್ನ ತಡೆಯಲಿಕ್ಕೆ ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನ ದುರುಪಯೋಗ ಮಾಡಿಕೊಂಡಿದೆ. ಮೊದಲ ವರ್ಷ ಸುಮಾರು 11,144 ಕೋಟಿ ಹಣವನ್ನ ದುರುಪಯೋಗ ಪಡಿಸಿ ಕೊಂಡಿದೆ. ಈ ವರ್ಷ ಸುಮಾರು 14 ಸಾವಿರ ಕೋಟಿ ಹಣವನ್ನ ಗ್ಯಾರಂಟಿಗೆ ಬಳಸಿದ್ದಾರೆ. ಒಟ್ಟು ಸುಮಾರು 26 ಸಾವಿರ ಕೋಟಿಗಳಷ್ಟು ದುರುಪಯೋಗ ಪಡಿಸಿಕೊಂಡಿದೆ. ಇದರಿಂದಾಗಿ ಎಸ್ಸಿ,ಎಸ್ಟಿ ಪ್ರತಿನಿಧಿಸುವ 6 ನಿಗಮಗಳು ಗುಟುಕು ನೀರು ಕುಡಿಯುವ ಪರಿಸ್ಥಿತಿಯಲ್ಲಿವೆ. ಆರು ನಿಗಮಗಳಲ್ಲಿ ಅಭಿವೃದ್ಧಿಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ. ಈ ಆರು ನಿಗಮಕ್ಕೆ ಕೇವಲ 510 ಕೋಟಿ ಮಾತ್ರ ಕೊಟ್ಟಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಮಗದಲ್ಲಿ 187 ಕೋಟಿ ದುರುಪಯೋಗವಾಗಿದೆ. ಇದನ್ನ ಸದಸದಲ್ಲೇ ಸಿದ್ದರಾಮಯ್ಯ ತಾವೇ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. 87 ಕೋಟಿ ವಿವಿಧ ಖಾತೆಗಳಿಗೆ ವರ್ಗಾವಣೆ ಆಗಿದೆ. ಸಿದ್ದರಾಮಯ್ಯ ಅವರು ಇದಕ್ಕೂ ನನಗೂ ಸಂಬಂಧ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಮುಡಾ ಹಗರಣದಲ್ಲೂ ಅದೇ ರೀತಿ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಮುಡಾ ಹಗರಣ ಸಂಬಂಧ ಆರಂಭದಲ್ಲಿ 14 ಸೈಟ್ ಗಳ ಬೆಲೆ 62 ಕೋಟಿ ಅಂತ ಕೇಳಿದರು. ಹಾಗಾದರೇ ತಪ್ಪು ಮಾಡಿಲ್ಲ ಎನ್ನುವುದಾದರೆ ಯಾಕೆ ಸೈಟು ವಾಪಸ್ ಮಾಡಿದ್ರಿ. ಮುಡಾ ಹಗರಣದಲ್ಲಿ ತಪ್ಪು ನಡೆದಿದೆ ಎಂದು ಕೋರ್ಟ್ ರಾಜ್ಯಪಾಲರ ಪ್ರಾಸಿಕ್ಯೂಸನ್ ಎತ್ತಿ ಹೊಡಿದಿದೆ. ಬಿಎಸ್ ಯಡಿಯೂರಪ್ಪ ಅವರ ಮೇಲೆ ಬಂದಂತಹ ಇಂತಹದ್ದೇ ಆರೋಪವನ್ನ ಸಿಎಂ ಸಿದ್ದರಾಮಯ್ಯ ಖಂಡಿಸಿದರು. ಅದೇ ಪರಿಸ್ಥಿತಿ ಈಗ ಸಿದ್ದರಾಮಯ್ಯ ಅವರಿಗೆ ಬಂದಿದೆ. ನಿನ್ನೆಯಿಂದ ಹೊಸ ತಿರುವು ಪಡೆದಿದೆ. ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಸಿಎಂ ಧರ್ಮ ಪತ್ನಿ ನಿವೇಶನ ವಾಪಸ್ ತಗೋಳಿ ಎಂದು ಪತ್ರ ಬರೆದಿದ್ದಾರೆ. ಒಂದೇ ದಿನಗಳಲ್ಲಿ ನಿವೇಶನ ವಾಪಸ್ ಮಾಡುವ ಪಕ್ರಿಯೇಯಲ್ಲಿ ಸಿಎಂ ಪುತ್ರ ತೊಡಗಿದ್ದಾದೆ. 2011 ರಲ್ಲಿ ಯಡಿಯೂರಪ್ಪ ಅವರು ಅವರ ಮಕ್ಕಳಿಗೆ ಕೊಟ್ಟ ನಿವೇಶನ ವಾಪಸ್ ಕೊಟ್ಟಾಗ ನೀವು ಅವರನ್ನ ಜರಿಯುವ ಕೆಲಸ ಮಾಡಿದ್ರಿ. ಈಗ ಅದೇ ಪರಿಸ್ಥಿತಿಯಲ್ಲಿ ನೀವು ನಿಂತಿದ್ದೀರಿ. ಒಟ್ಟಾರೆ ಒಂದು ವಿಷ ವರ್ತುಲದಲ್ಲಿ ಸಿದ್ದರಾಮಯ್ಯ ಅವರು ಸಿಕ್ಕಿಹಾಕಿಕೊಂಡಿದ್ದಾರೆ. ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ದೊಡ್ಡದಾಗಿ ಮಾತನಾಡುವ ಸಿದ್ದರಾಮಯ್ಯ ದಸರಾ ಮಹೋತ್ಸವ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸದೇ ರಾಜಿನಾಮೆ ನೀಡಬೇಕು. ರಾಜಿನಾಮೆ ನೀಡಿ ತನಿಖೆ ಎದುರಿಸಬೇಕು. 40 ವರ್ಷಗಳ ನಿಮ್ಮ ನಿಷ್ಕಳಂಕ ರಾಜಕಾರಣ ಮಾಡಿದ್ದೇನೆ ಎನ್ನುವುದಾದರೆ, ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಶಾಸಕ ಯತ್ನಾಳ್ ವಿರುದ್ಧ ಕ್ರಮಕ್ಕೆ ಎನ್ ಮಹೇಶ್ ಒತ್ತಾಯ
ಇದೇ ವೇಳೆ ಪಕ್ಷದ ನಾಯಕರ ವಿರುದ್ದ ಹೇಳಿಕೆ ನೀಡುತ್ತಿರುವ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪಕ್ಷದ ವರಿಷ್ಟರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಎನ್ ಮಹೇಶ್ ಒತ್ತಾಯ ಮಾಡಿದ್ದಾರೆ.
ಅವರ ಹೇಳಿಕೆ ಪಕ್ಷದ ಸಂಘಟನಾತ್ಮಕ ವಿಚಾರಗಳಿಗೆ ಧಕ್ಕೆಯಾಗಲಿದೆ. ಯತ್ನಾಳ್ ಹೇಳಿಕೆ ವಿಚಿತ್ರ, ವಿಪರ್ಯಾಸ ಅಹಂಕಾರದಿಂದ ಕೂಡಿದೆ. ಪಕ್ಷದ ಸದಸ್ಯತ್ವ ಅಭಿಯಾನ ನಡೆಯುವ ವೇಳೆಯಲ್ಲಿ ಯತ್ನಾಳ್ ಪದೇ ಪದೇ ಮಾತನಾಡಬಾರದು. ಏನೇ ಭಿನ್ನಾಭಿಪ್ರಾಯವಿದ್ದರೂ ಕೇಂದ್ರ, ರಾಜ್ಯ ನಾಯಕರ ಜೊತೆ ಬಗೆಹರಿಸಿಕೊಳ್ಳಲಿ. ವಿಜಯೇಂದ್ರ ಅವರನ್ನು ಅಳೆದು ತೂಗಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರ ಹೇಳಿಕೆಗಳು ಹೀಗೆ ಮುಂದುವರಿದರೆ ಕಾರ್ಯಕರ್ತರಲ್ಲಿ ನಿರುತ್ಸಾಹ ಉಂಟಾಗಲಿದೆ. ಇದೆ ರೀತಿ ಯತ್ನಾಳ್ ವರ್ತನೆ ಮುಂದುವರಿದರೆ ಪಕ್ಷದ ವರಿಷ್ಠರು ಕ್ರಮ ತೆಗೆದುಕೊಳ್ಳಬೇಕು. ಇದು ಯತ್ನಾಳ್ ರೀತಿ ವರ್ತಿಸುವ ಎಲ್ಲರಿಗೂ ಅನ್ವಯವಾಗಲಿದೆ. ನಾನು ರಾಜ್ಯದ ಉಪಾಧ್ಯಕ್ಷನಾಗಿ ಅವರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವರಿಷ್ಠರಿಗೆ ಒತ್ತಾಯಿಸುತ್ತೇನೆ ಎಂದು ಎನ್.ಮಹೇಶ್ ತಿಳಿಸಿದರು.
Key words: CM Siddaramaiah, resign, Former minister, N Mahesh, mysore