ಚಾಮರಾಜನಗರ,ಸೆಪ್ಟಂಬರ್,18,2020(www.justkannada.in): ಸಹಕಾರ ಸಂಸ್ಥೆ ಲಾಭದಲ್ಲಿದೆ ಎಂದರೆ ಅದರ ಆಡಳಿತ ಮಂಡಳಿಯ ಬದ್ಧತೆ ಕಾರಣವಾಗಿರುತ್ತದೆ. ಈ ನಿಟ್ಟಿನಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ಚಾಮರಾಜನಗರ ಜಿಲ್ಲೆಯ ರಂಗಸಂದ್ರದಲ್ಲಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದಡಿ ಆಹಾರ ಮಾರಾಟ ಮಳಿಗೆ ಕಟ್ಟಡವನ್ನು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಿ ಮಾತನಾಡಿದರು, ಈ ಗ್ರಾಮದಲ್ಲಿ ಸಂಘವನ್ನು ಮಾಡಿ, ಕಟ್ಟಡ ಕಟ್ಟಿಸಿ ಕೃಷಿ ಉತ್ಪನ್ನ ಹಾಗೂ ಕಾಡು ಉತ್ಪನ್ನಗಳನ್ನು ಖರೀದಿಸುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.
ಆರ್ಥಿಕ ಸ್ಪಂದನ ಯೋಜನೆಗಳಡಿ 39 ಸಾವಿರ ಕೋಟಿ ರೂ. ಸಾಲ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಚಾಲನೆ ಕೊಡಲಾಗಿದೆ. ಇನ್ನು ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳ ಮೂಲಕ ಬಡವರ ಬಂಧು, ಎಸ್ ಸಿ ಎಸ್ ಟಿ ಗಳಿಗೆ ಸಾಲ ವಿತರಣೆ ಮಾಡುತ್ತಿದ್ದು, 10 ಸಾವಿರ, 20-25 ಸಾವಿರ ರೂ. ಹೀಗೆ ಅಗತ್ಯಕ್ಕೆ ತಕ್ಕಂತೆ ಸಾಲವನ್ನು ಸಹಕಾರ ಇಲಾಖೆ ವತಿಯಿಂದ ವಿತರಣೆ ಮಾಡಲಾಗುತ್ತಿದೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು, ಶಾಸಕರಾದ ನಿರಂಜನ್ ಕುಮಾರ್, ಪುಟ್ಟರಂಗಶೆಟ್ಟಿ ಉಪಸ್ಥಿತರಿದ್ದರು.
Key words: co-operative –profit- Food Store-inaugurated – Minister -ST Somashekhar-chamarajanagar