ಕುಶಾಲನಗರ, ಜೂನ್ 27,2022(www.justkannada.in): ಸಾಲದ ಹಣ ಮರುಪಾವತಿಯಲ್ಲಿ ಕೊಡಗಿನ ಸಹಕಾರಿ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಮುಂಚೂಣಿಯಲ್ಲಿವೆ. ಪ್ರಾಮಾಣಿಕರಿದ್ದರೆ ಮಾತ್ರ ಶತಮಾನೋತ್ಸವ ಆಚರಣೆ ಸಾಧ್ಯ. ಸಹಕಾರ ಸಂಘ ಬೆಳೆಯಲು, ಅದಕ್ಕೆ ಶ್ರಮಿಸಿದವರು, ಸಹಕಾರ ನೀಡಿದವರನ್ನು ಸ್ಮರಿಸಬೇಕು ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ನಂ.122ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿ. ಕುಶಾಲನಗರ ಸಹಕಾರ ಸಂಘದ ಶತಮಾನೋತ್ಸವ ಸಮಾರಂಭ ಹಾಗೂ ನೂತನ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಈ ಸಹಕಾರ ಸಂಘ ಐದು ವರ್ಷದಲ್ಲಿ ಪ್ರತಿ ವರ್ಷ ಸದಸ್ಯರು, ಠೇವಣಿ, ದುಡಿಯುವ ಬಂಡವಾಳ, ಲಾಭಾಂಶ ಎಲ್ಲದರಲ್ಲೂ ಏರಿಕೆ ಕಂಡುಬಂದಿದೆ ಎಂದರು.
ರಾಜ್ಯದ 21 ಡಿಸಿಸಿ ಬ್ಯಾಂಕುಗಳು ಲಾಭದಲ್ಲಿವೆ. 5477 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿವೆ. ಕೊಡಗು ಜಿಲ್ಲೆಯಲ್ಲಿ 9-10 ಸಹಕಾರ ಸಂಘಗಳು 100 ವರ್ಷ ಪೂರೈಸಿವೆ. ಜಿಲ್ಲೆಯ 99% ಸಹಕಾರಿ ಸಂಘಗಳಲ್ಲಿ ಸಾಲದ ಹಣ ಮರುಪಾವತಿ ಆಗುತ್ತಿರುವುದು ಸಂತಸದ ವಿಚಾರ ಎಂದು ಶ್ಲಾಘಿಸಿದರು.
ರೈತರ 6270 ಕೋಟಿ ರೂ. ಸಾಲ ಮನ್ನಾ ಮಾಡಲಾಗಿದ್ದು, 167 ಕೋಟಿ ರೂ. ಸಾಲ ಮನ್ನಾ ಮಾತ್ರ ಬಾಕಿಯಿದೆ. ಹಣಕಾಸು ಇಲಾಖೆಯಿಂದ ಕ್ಲಿಯರ್ ಆಗಿದೆ. 6 ಸಾವಿರ ರೂ. ಮೇಲ್ಪಟ್ಟು ಸಾಲ ಪಡೆದವರ ಸಾಲಮನ್ನಾ ಆಗಿದ್ದು 50 ಸಾವಿರದಿಂದ 1 ಲಕ್ಷ ರೂ. ಸಾಲ ಪಡೆದವರ ಸಾಲಮನ್ನಾ ಆಗಬೇಕಿದೆ ಎಂದು ಹೇಳಿದರು.
ನಾನಾ ಷರತ್ತುಗಳ ಕಾರಣದಿಂದ ಸಾಲಮನ್ನಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಬಿಪಿಎಲ್, ಆಧಾರ್ ಕಾರ್ಡ್, ಬ್ಯಾಂಕ್ ದಾಖಲೆ…ಹೀಗೆ ಹಲವು ದಾಖಲೆಗಳನ್ನು ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ 31 ಸಾವಿರ ರೈತರ ಸಾಲ ಮನ್ನಾ ಬಾಕಿಯಿದೆ. ಮುಖ್ಯಮಂತ್ರಿಗಳು ಅವರ ಸಾಲವನ್ನು ಕೂಡ ಮನ್ನಾ ಮಾಡಲಿದ್ದಾರೆ ಎಂದರು.
ಸಚಿವ ಬಿ.ಸಿ.ನಾಗೇಶ್ ಅವರು ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುತ್ತಾರೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುವ ರಾಜಕಾರಣಿಗಳಿಗೆ ತಕ್ಕ ಉತ್ತರ ಕೊಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದ ರೀತಿಯಲ್ಲಿ ನ್ಯಾಯ ಒದಗಿಸುವ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
33 ಲಕ್ಷ ರೈತರಿಗೆ 24 ಸಾವಿರ ಕೋಟಿ ಸಾಲ ವಿತರಣೆ ಗುರಿ ನಿಗದಿಪಡಿಸುವುದರ ಜೊತೆಗೆ, ಹೊಸದಾಗಿ ಮೂರು ಲಕ್ಷ ರೈತರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಹಿಂದೆ ಸಾಲದ ಹಣ ಬಿಡುಗಡೆ ಮಾಡುವಂತೆ ಡಿಸಿಸಿ ಬ್ಯಾಂಕುಗಳು ಸರ್ಕಾರವನ್ನು ಕೇಳುತ್ತಿದ್ದವು. ಆದರೀಗ ಹಣ ಬಿಡುಗಡೆ ಆಗಿ ಮೂರು ತಿಂಗಳಾದರೂ ಏಕೆ ತೆಗೆದುಕೊಂಡಿಲ್ಲ ಎಂದು ಸರ್ಕಾರವೇ ಕೇಳುವಂತಾಗಿದೆ ಎಂದರು.
ಸಹಕಾರ ಕ್ಷೇತ್ರ ರಾಜಕೀಯ ಪಕ್ಷಗಳಿಂದ ಹೊರತಾದ ಕ್ಷೇತ್ರ. ಇಲ್ಲಿ ಆ ಪಕ್ಷ, ಇ ಪಕ್ಷ ಎಂದರೆ ಬೆಳವಣಿಗೆ ಆಗಲ್ಲ. ಹಲವು ಬದಲಾವಣೆಗಳೊಂದಿಗೆ ಯಶಸ್ವಿನಿ ಯೋಜನೆ ಮರುಜಾರಿ ಮಾಡಲಾಗುತ್ತಿದೆ. ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಹಾಲು ಪೂರೈಸುವ 26 ಲಕ್ಷ ರೈತರಿಗೆ ಅನುಕೂಲ ಕಲ್ಪಿಸಲು ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನೆ ಮಾಡಲಾಗುತ್ತಿದೆ. 9 ಲಕ್ಷ ಮಹಿಳೆಯರಿಗೆ ನಬಾರ್ಡ್ ಮುಖಾಂತರ ಕ್ರೆಡಿಟ್ ಕಾರ್ಡ್, ಸಾಲ ವಿತರಣೆ ಮಾಡಲಾಗುವುದು. ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್ ನಿಂದ ಡಿಸಿಸಿ ಬ್ಯಾಂಕ್ ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.
ನಬಾರ್ಡ್ ನಿಂದ ಡಿಸಿಸಿ ಬ್ಯಾಂಕ್ ಗಳಿಗೆ ನಿಗದಿಪಡಿಸಿದ ಸಾಲದ ಮೊತ್ತ ಹೆಚ್ಚಳವಾಗಿದೆ. ರೈತರಿಗೆ ಅವಶ್ಯಕತೆ ಅನುಗುಣವಾಗಿ ಸಾಲ ನೀಡಿದರೆ ರಾಷ್ಟ್ರೀಕೃತ ಬ್ಯಾಂಕುಗಳ ಬಳಿಗೆ ಹೋಗುವುದು ತಪ್ಪಲಿದೆ ಎಂದರು.
ಚಾರ್ಟೆಡ್ ಅಕೌಂಟೆಂಟ್ ಗಳು ಸೂಕ್ತವಾಗಿ ಕಾರ್ಯನಿರ್ವಹಿಸಿದರೆ ವಂಚನೆ ಆಗುವುದನ್ನು ತಡೆಯಬಹುದು. 51 ಅಕೌಂಟೆಂಟ್ ಗಳಿಗೆ ನಿರ್ಬಂಧ ಹಾಕಿದರೆ ಒತ್ತಡ ಹಾಕಿಸುತ್ತಾರೆ. ಸಾಲಗಾರರ ಸಂಪೂರ್ಣ ಮಾಹಿತಿಯನ್ನು ಆಡಿಟ್ ವರದಿಯಲ್ಲಿ ಉಲ್ಲೇಖಿಸಿದ್ದರೆ ರಾಘವೇಂದ್ರ ಬ್ಯಾಂಕ್ ನಲ್ಲಿ ವಂಚನೆ ಆಗುತ್ತಿರಲಿಲ್ಲ. 3670 ಕೋಟಿ ರೂ. ವಂಚನೆ ಆಗಿದ್ದು 8 ಬಾರಿ ಆಡಿಟ್ ಮಾಡಿಸಲಾಗಿದೆ ಎಂದು ಹೇಳಿದರು.
ಸಾಲದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪ ತಂತ್ರಾಂಶ ಅಳವಡಿಸಲಾಗುವುದು. ಅಳವಡಿಕೆಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ. ನಾಗೇಶ್, ಶಾಸಕರಾದ ಅಪ್ಪಚ್ಚುರಂಜನ್, ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪರಿಚಯ..
1921 ಜೂನ್ 27 ರಂದು ಆರಂಭವಾದ ಸಹಕಾರ ಸಂಘ ಆರಂಭದಲ್ಲಿ 126 ಸದಸ್ಯರನ್ನು ಒಳಗೊಂಡು ನೋಂದಣಿಯಾಗಿದ್ದು, ಪ್ರಸ್ತುತ 3496 ಸದಸ್ಯರನ್ನು ಹೊಂದಿದೆ. 324.05 ಲಕ್ಷ ರೂ. ಷೇರು ಬಂಡವಾಳ ಹೊಂದಿದ್ದು, 4129.60 ಲಕ್ಷ ರೂ. ಠೇವಣಿ ಸಂಗ್ರಹಣೆ ಹೊಂದಿದೆ.
ಮಾರ್ಚ್ ಅಂತ್ಯದ ವೇಳೆಗೆ 109 ರೈತರಿಗೆ 62.90 ಲಕ್ಷ ರೂ. ಕೆಸಿಸಿ ಸಾಲ ವಿತರಣೆ ಮಾಡಲಾಗಿದೆ. 3634.67 ಲಕ್ಷ ರೂ. ಕೃಷಿಯೇತರ ಸಾಲ ವಿತರಣೆ ಮಾಡಲಾಗಿದೆ. 2021-22ನೇ ಸಾಲಿನಲ್ಲಿ 150.43 ಲಕ್ಷ ರೂ. ಲಾಭ ಗಳಿಸಿದೆ. ವಿಶೇಷ ಎಂದರೆ ಕಳೆದ ಐದು ವರ್ಷಗಳಿಂದ ಸತತವಾಗಿ ಕೋಟಿ ರೂ.ಗೂ ಹೆಚ್ಚು ಲಾಭಗಳಿಸುತ್ತಿದೆ.
ಕುಶಾಲನಗರ, ಮುಳ್ಳುಸೋಗೆ, ಗುಮ್ಮನಕೊಲ್ಲಿ, ಗೊಂದಿಬಸವನಹಳ್ಳಿ, ಮಾದಪಟ್ಟಣ, ಬೊಳ್ಳೂರು, ಗುಡ್ಡೆಹೊಸೂರು, ಬಸವನಹಳ್ಳಿ ಗ್ರಾಮಗಳಲ್ಲಿ ಸಂಘ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
Key words: Co-operative-societies – forefront – loan repayment-Minister-ST Somashekhar