ಕಲಬುರಗಿ,ಜೂ,26,2020(www.justkannada.in): ಸಹಕಾರ ಸಂಘಗಳಲ್ಲಿ ಸಾರ್ವಜನಿಕರ ಹಣ ದುರುಪಯೋಗಕ್ಕೆ ಕಡಿವಾಣ ಹಾಕಿ, ಅವರ ಹಣಕ್ಕೆ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರ ಸ್ವಾಗತಾರ್ಹ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಸಹಕಾರ ಇಲಾಖೆ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮಕ್ಕೆ ಚೆಕ್ ವಿತರಣೆ ಮಾಡುವ ಮೂಲಕ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಎಸ್.ಟಿ ಸೋಮಶೇಖರ್, ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ಗಳು ಸೇರಿದಂತೆ ಅನೇಕ ಸಹಕಾರಿ ಬ್ಯಾಂಕ್ ಗಳಲ್ಲಿ ಇಂದು ಅಕ್ರಮಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರ ಆಸ್ತಿ ಹಾಗೂ ಹಣಕ್ಕೆ ಭದ್ರತೆ ಇಲ್ಲದಂತಾಗುವುದಲ್ಲದೆ, ಸಹಕಾರ ಸಂಘಗಳಲ್ಲಿ ನಡೆಯುವ ಇಂಥ ಅವ್ಯವಹಾರಗಳಿಗೆ ಕಡಿವಾಣ ಹಾಕುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳ ಮೇಲುಸ್ತುವಾರಿ ಹೊಣೆಯನ್ನು ಆರ್ ಬಿ ಐ ಗೆ ವಹಿಸಿದೆ. ಪ್ರಧಾನಿಯವರ ಈ ಕ್ರಮವನ್ನು ರಾಜ್ಯ ಸರ್ಕಾರ ಸ್ವಾಗತಿಸುತ್ತದೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಈವರೆಗೆ 5 ಲಕ್ಷ ರೈತರಿಗೆ ಸಾಲ….
ರಾಜ್ಯದಲ್ಲಿ ಗುರುವಾರದ ವರೆಗೆ (25/06/2020) 5,42,991 ರೈತರಿಗೆ 3807 ಕೋಟಿ ರೂಪಾಯಿ ಹಣವನ್ನು ರೈತರಿಗೆ ಕೃಷಿ ಸಾಲವಾಗಿ ವಿತರಣೆ ಮಾಡಲಾಗಿದೆ. ರೈತರಿಗೆ ಸಾಲ ಕೊಡುವ ಸಂಬಂಧ ಪ್ರಸಕ್ತ ಸಾಲಿನಲ್ಲಿ 1750 ಕೋಟಿ ರೂ. ಸಾಲವನ್ನು ಅಪೆಕ್ಸ್ ಬ್ಯಾಂಕಿಗೆ ನಬಾರ್ಡ್ ಕೊಟ್ಟಿದೆ. ಕಳೆದ ಬಾರಿ ರೈತರಿಗೆ 13,577 ಕೋಟಿ ರೂಪಾಯಿಯನ್ನು ಕೊಡಲಾಗಿತ್ತು. ಈ ಬಾರಿ 14,500 ಕೋಟಿ ರೂಪಾಯಿ ಬೆಳೆ ಸಾಲ ನೀಡಲು ಚಾಲನೆ ನೀಡಲಾಗಿದೆ ಎಂದು ಸಚಿವ ಎಸ್. ಟಿ.ಸೋಮಶೇಖರ್ ತಿಳಿಸಿದರು.
ರೈತರಿಗೆ ಹೆಚ್ಚಿನ ಸಾಲ ಸಿಗಬೇಕು. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆಯಾಗಬಾರದು ಎಂಬುದು ಮಾನ್ಯ ಮುಖ್ಯಮಂತ್ರಿಗಳ ಆಶಯವಾಗಿದ್ದು, ಅವರ ನಿರ್ದೇಶನದಂತೆ ಹೊಸ ರೈತರಿಗೆ ಸಾಲ ನೀಡಲು ಎಲ್ಲ ಜಿಲ್ಲಾ ಸಹಕಾರ ಬ್ಯಾಂಕ್ ಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರಾದ ಎಸ್ ಟಿ ಸೋಮಶೇಖರ್ ತಿಳಿಸಿದರು.
ಕಲಬುರಗಿ ಡಿಸಿಸಿ ಬ್ಯಾಂಕ್ ಸೂಪರ್ ಸೀಡ್
ಕಲಬುರಗಿ ಡಿಸಿಸಿ ಬ್ಯಾಂಕ್ ನಲ್ಲಿ ಅನೇಕ ಅಕ್ರಮಗಳ ಆರೋಪಗಳು ಬಂದ ಹಿನ್ನೆಲೆಯಲ್ಲಿ ಇದನ್ನು ಸೂಪರ್ ಸೀಡ್ ಮಾಡಲಾಗಿದ್ದು, ನಬಾರ್ಡ್ ಅನುಮತಿಗಾಗಿ ಕಳುಹಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು.
ಪ್ರತಿ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಶೀಘ್ರ
ಶೀಘ್ರದಲ್ಲಿಯೇ ಪ್ರತಿ ಜಿಲ್ಲೆಗಳ ಡಿಸಿಸಿ ಬ್ಯಾಂಕ್ ಪ್ರಗತಿ ಪರಿಶೀಲನೆ ಮಾಡಲಾಗುವುದು. ರೈತರಿಗೆ, ಬಡವರಿಗೆ, ಮಹಿಳೆಯರಿಗೆ ಹಾಗೂ ಸ್ತ್ರೀಶಕ್ತಿ ಸಂಘಗಳು ಸೇರಿದಂತೆ ವಿವಿಧ ವರ್ಗಗಳಿಗೆ ಎಷ್ಟು ಸಾಲ ವಿತರಣೆ ಮಾಡಲಾಗಿದೆ ಎಂಬುದನ್ನು ಈ ವೇಳೆ ಪರಿಶೀಲಿಸಲಾಗುತ್ತದೆ. ರಾಜ್ಯದ ಒಟ್ಟು 21 ಡಿಸಿಸಿ ಬ್ಯಾಂಕಗಳಲ್ಲಿ 20 ಡಿಸಿಸಿ ಬ್ಯಾಂಕ್ ಗಳಲ್ಲಿ ಸಾಲ ನೀಡಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
Key words: Co-operative Society – RBI –minister- ST Somashekhar