ಬೆಂಗಳೂರು,ಡಿಸೆಂಬರ್,22,2023(www.justkannada.in): ಬರ ಪರಿಸ್ಥಿತಿ ಸಂಬಂಧ ಚರ್ಚಿಸಲು ತೆರಳಿದ್ದ ವೇಳೆ ಐಷಾರಾಮಿ ವಿಮಾನದಲ್ಲಿ ಪ್ರಯಾಣಿಸಿದ್ದನ್ನು ಟೀಕಿಸಿದ್ದ ಬಿಜೆಪಿ ನಾಯಕರಿಗೆ ಇದೀಗ ಸಿಎಂ ಸಿದ್ದರಾಮಯ್ಯ ಮತ್ತೆ ತಿರುಗೇಟು ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ. ಆಪರೇಷನ್ ಕಮಲದ ಮೂಲಕ ಸಮ್ಮಿಶ್ರ ಸರ್ಕಾರ ಬೀಳಿಸಿ, ಶಾಸಕರನ್ನು ವಿಶೇಷ ವಿಮಾನದಲ್ಲಿ ದೆಹಲಿ, ಮುಂಬೈ ಸುತ್ತಾಡಿಸಿದ, ಐಷಾರಾಮಿ ಹೋಟೆಲ್ ಗಳಲ್ಲಿ ವಾರಗಟ್ಟಲೆ ಠಿಕಾಣಿ ಹಾಕಿಸಿ ಮೋಜು ಮಸ್ತಿಗಾಗಿ ಖರ್ಚು ಮಾಡಿದ ನೂರಾರು ಕೋಟಿ ಹಣ ಬಿಜೆಪಿಯವರು ನರೇಗಾ ಯೋಜನೆಯಲ್ಲಿ ಕೂಲಿ ಮಾಡಿ ಕೂಡಿಟ್ಟದ್ದಲ್ಲ, ರಾಜ್ಯದ ಬಡಜನರು ಕಷ್ಟಪಟ್ಟು ಕಟ್ಟಿದ ತೆರಿಗೆ ಹಣ ಎಂದು ಟಾಂಗ್ ನೀಡಿದ್ದಾರೆ.
ರಾಜ್ಯದ ಬರ ಪರಿಸ್ಥಿತಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಚರ್ಚಿಸುವ ಸಲುವಾಗಿ ವಿಶೇಷ ವಿಮಾನದಲ್ಲಿ ನಾನು ಪ್ರಯಾಣ ಬೆಳೆಸಿದ್ದನ್ನು ವಿರೋಧಿಸುವ ನೈತಿಕತೆ ರಾಜ್ಯ ಬಿಜೆಪಿ ನಾಯಕರಿಗೆ ಇದೆಯೇ? ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
2014ರ ಜೂನ್ 15ರಿಂದ 2023ರ ಸೆಪ್ಟೆಂಬರ್ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 74 ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಪ್ರಧಾನಿಗಳ ಅಧಿಕೃತ ತಾಣದ ಅಂಕಿ ಅಂಶಗಳ ಪ್ರಕಾರ ಪ್ರತಿ ಪ್ರವಾಸದ ಸರಾಸರಿ ವೆಚ್ಚ 8.9 ಕೋಟಿ ರೂಪಾಯಿ.
ದೇಶ ಹಸಿವಿನ ಸೂಚ್ಯಂಕದಲ್ಲಿ 111ನೇ ಸ್ಥಾನದಲ್ಲಿದೆ. ದೇಶದ ಜನ ಹಸಿವಿನಿಂದ ಬಳಲುತ್ತಿರುವ ವೇಳೆ ಪ್ರಧಾನಿಗಳು ವಿಶೇಷ ವಿಮಾನದ ಮೂಲಕ ವಿದೇಶ ಯಾತ್ರೆ ಮಾಡಿಕೊಂಡು, ಮೋಜು ಮಾಡುತ್ತಾರೆಂದು ಹೇಳಲು ಬರುತ್ತದೆಯಾ? ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
Key words: coalition government –fell- -spent – money – poor people-tax – CM Siddaramaiah