ಮಂಗಳೂರು:ಜೂ-10:(www.justkannada.in) ಮಳೆಯ ನಿರೀಕ್ಷೆಯಲ್ಲಿರುವ ರಾಜ್ಯದ ಜನರಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಲಿದ್ದು, ಪರಿಣಾಮ ಲಕ್ಷದ್ವೀಪ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪ್ರಸ್ತುತ ನಿರ್ಮಾಣವಾಗಿರುವ ವಾಯುಭಾರ ಕುಸಿತ 36 ಗಂಟೆಗಳಲ್ಲಿ ಚಂಡಮಾರುತದ ಸ್ವರೂಪ ಪಡೆಯಲಿದ್ದು, ವಾಯವ್ಯ ದಿಕ್ಕಿನತ್ತ ಚಲಿಸಲಿದೆ. ಸಮುದ್ರದಿಂದ ಕಿನಾರೆಯತ್ತ ಈಗಾಗಲೇ ರಭಸವಾಗಿ ಗಾಳಿ ಬೀಸಲಾರಂಭಿಸಿದೆ. ಇದು ಮುಂದಿನ 2-3 ದಿನ ಇನ್ನಷ್ಟು ತೀವ್ರಗೊಳ್ಳಲಿದೆ. ರವಿವಾರ ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35ರಿಂದ 45 ಕಿ.ಮೀ. ವೇಗದ ವರೆಗೆ ಗಾಳಿ ಬೀಸುತ್ತಿತ್ತು. ಸೋಮವಾರ ಗಂಟೆಗೆ 40ರಿಂದ 55 ಕಿ.ಮೀ. ವರೆಗೂ ಗಾಳಿ ಬೀಸುವ ಸಂಭವ ಇದೆ. ಮಂಗಳವಾರ ಇದರ ವೇಗ ಮತ್ತಷ್ಟು ಹೆಚ್ಚಿ 55ರಿಂದ 65 ಕಿ.ಮೀ. ಇರುತ್ತದೆ. ಕೆಲವೊಮ್ಮೆ 75 ಕಿ.ಮೀ. ವರೆಗೂ ತಲುಪುವ ಸಂಭವ ಇದೆ.
ಜೂ. 12ರ ವೇಳೆಗೆ ಕರ್ನಾಟಕ ಕರಾವಳಿಯನ್ನು ದಾಟಿ ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿಯತ್ತ ಚಂಡಮಾರುತ ಚಲಿಸಲಿದೆ. ಈ ಸಂದರ್ಭ ಗಾಳಿ 70ರಿಂದ 80 ಕಿ.ಮೀ. ವರೆಗೆ ಹಾಗೂ 13ರಂದು 90ರಿಂದ 100 ಕಿ.ಮೀ. ವರೆಗೂ ತಲುಪಲಿದೆ. ಅನಂತರ ಚಂಡಮಾರುತದ ವೇಗ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆಯು ಚಂಡಮಾರುತದ ಕುರಿತಂತೆ ಈಗಾಗಲೇ ಅರಬಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ. ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಆರೆಂಜ್ ಎಚ್ಚರಿಕೆ ನೀಡಿದೆ. ಜೂ. 11, 13ಕ್ಕೆ ಕೇರಳ ಮತ್ತು ಕರ್ನಾಟಕ ಕರಾವಳಿಗೆ ಎಲ್ಲೋ ಎಚ್ಚರಿಕೆ ನೀಡಲಾಗಿದೆ. ಕರ್ನಾಟಕ ದಕ್ಷಿಣ ಒಳನಾಡಿಗೆ ಸೋಮವಾರಕ್ಕೆ ಹಳದಿ ಎಚ್ಚರಿಕೆ ನೀಡಲಾಗಿದೆ. ಚಂಡಮಾರುತದ ತೀವ್ರತೆಗೆ ತಕ್ಕಂತೆ ಎಚ್ಚರಿಕೆಯನ್ನು ಪರಿಷ್ಕರಿಸಲಾಗುತ್ತದೆ. ಎಲ್ಲ ಬಂದರುಗಳಲ್ಲಿ ಮುನ್ನೆಚ್ಚರಿಕೆಯ ಸಂಕೇತದ ಬಾವುಟ ಹಾರಿಸುವಂತೆ ಸೂಚಿಸಲಾಗಿದೆ.
ಇನ್ನು ಸಮುದ್ರದ ಅಬ್ಬರ ತೀವ್ರ ವಾಗಿರುವ ಹಿನ್ನಲೆಯಲ್ಲಿ ಸಾಗರ ತೀರದಲ್ಲಿ ಕಟ್ಟಚ್ಚರ ವಹಿಸಲಾಗಿದೆ. ಮಂಗಳೂರಿನಲ್ಲಿ ಉಳ್ಳಾಲ, ಸೋಮೇಶ್ವರ, ಪಣಂಬೂರು ಸೇರಿದಂತೆ ಬೀಚ್‌ಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.