ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ: ಪ್ರವಾಹದ ನಡುವೆ ಕರಾವಳಿ ಜನರ ಸೈಡ್‌ ಬ್ಯುಸಿನೆಸ್‌ ಹೇಗಿದೆ ಗೊತ್ತಾ?

ಮಂಗಳೂರು:ಆ-10: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಉಕ್ಕಿ ಹರಿಯುತ್ತಿರುವ ನೇತ್ರಾವತಿ ನದಿಯಿಂದಾಗಿ ಬಂಟ್ವಾಳದ ಹಲವು ಪ್ರದೇಶಗಳು ಜಲಾವೃತವಾಗಿವೆ.

ಅಜಿಲ ಮೊಗರು, ಜಕ್ರಿಬೆಟ್ಟು ಮುಂತಾದ ಕಡೆಗಳಲ್ಲಿ ಜಲಾವೃತವಾಗಿದ್ದು, ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಭೇಟಿ ನೀಡಿ ದೋಣಿಯಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದ್ದಾರೆ.

ಪ್ರವಾಹದ ನಡುವೆಯು ಜನರು ಸೈಡ್‌ ಬ್ಯುಸಿನೆಸ್‌ ಮೊರೆ ಹೋಗಿದ್ದು, ಅಣಿಯೂರು ಹಳ್ಳ ಹೊಳೆಯಲ್ಲಿ ಬರುತ್ತಿರುವ ತೆಂಗಿನಕಾಯಿಗಳನ್ನು ಹಿಡಿಯುತ್ತಿದ್ದಾರೆ. ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ನದಿ, ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ತೇಲಿ ಬರುತ್ತಿರುವ ಸುಮಾರು 100-200 ತೆಂಗಿನಕಾಯಿಗಳನ್ನು ಸ್ಥಳೀಯರು ಹಿಡಿದಿದ್ದಾರೆ.

ಶಾಲಾ- ಕಾಲೇಜು ರಜೆ ವಿಸ್ತರಣೆ

ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳ ರಜೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಅತ್ಯಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.

ಇನ್ನೊಂದೆಡೆ ಸೋಮಂತಡ್ಕ-ಕಾಜೂರು ಸಂಪರ್ಕ ರಸ್ತೆಯಾಗಿದ್ದ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕುಕ್ಕಾವು ಸೇತುವೆ ಕೊಚ್ಚಿ ಹೋಗಿದ್ದುಸ ಎರಡು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉದನೆ ಪ್ರದೇಶದಲ್ಲಿ ಹೆದ್ದಾರಿಗೆ ನೀರು ನುಗ್ಗಿರುವುದರಿಂದಾಗಿ ಮಂಗಳೂರು-ಬೆಂಗಳೂರು ಸಂಚಾರ ವ್ಯವಸ್ಥೆ ಬಂದ್ ಆಗಿದೆ. ಹೆದ್ದಾರಿಯಲ್ಲಿ ಕುಮಾರಧಾರಾ ನದಿ ನೀರು ಹರಿಯುತ್ತಿದ್ದು, ಬದಲಿ ಮಾರ್ಗವನ್ನು ಸೂಚಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಗ್ರಾಮಗಳಲ್ಲಿ ಧಾರಾಕಾರ ಮಳೆಯಿಂದಾಗಿ 7 ಮನೆಗಳು ಧರೆಗುರುಳಿವೆ. ಕಾಜೂರು-ಕೊಲ್ಲಿ, ಮಲವಂತಿಗೆ ಗ್ರಾಮಗಳಲ್ಲಿ ಘಟನೆ ನಡೆದಿದೆ.
ಕೃಪೆ:ವಿಜಯವಾಣಿ

ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ: ಪ್ರವಾಹದ ನಡುವೆ ಕರಾವಳಿ ಜನರ ಸೈಡ್‌ ಬ್ಯುಸಿನೆಸ್‌ ಹೇಗಿದೆ ಗೊತ್ತಾ?
coconutbusiness-heavyrain-dakshinakannada-karnatakaflood