ಸಂಯೋಜನಾ ಶುಲ್ಕ ಹೆಚ್ಚಿಸಿದ ಬೆಂವಿವಿ: ಆರ್ಥಿಕ ಸಂಕಷ್ಟ ಎದುರಿಸಲು ಹೊಸ ದಾರಿ

ಬೆಂಗಳೂರು:ಜುಲೈ-29: ವಿಭಜನೆಯಿಂದ ಬಡವಾಗಿರುವ ಬೆಂಗಳೂರು ವಿಶ್ವವಿದ್ಯಾಲಯ ಬೊಕ್ಕಸ ಭರ್ತಿಗಾಗಿ ಪ್ರಮುಖ ಆದಾಯದ ಮೂಲವಾಗಿರುವ ಕಾಲೇಜುಗಳ ಸಂಯೋಜನಾ ಶುಲ್ಕ ಹೆಚ್ಚಳ ಮಾಡಲು ಮುಂದಾಗಿದೆ.

ಜ್ಞಾನಭಾರತಿಯಲ್ಲಿರುವ ಬೆಂ.ವಿವಿ 2020-21ನೇ ಸಾಲಿನ ಸಯೋಜನಾ ಪ್ರಕ್ರಿಯೆಗಳ ಶುಲ್ಕವನ್ನು ಶೇ.5 ರಿಂದ ಶೇ.10 ರವರೆಗೆ ಹೆಚ್ಚಿಸುವ ಮೂಲಕ ಆರ್ಥಿಕವಾಗಿ ಮತ್ತಷ್ಟು ಸಬಲಗೊಳ್ಳಲು ನಿರ್ಧರಿಸಿದೆ. ವಿಶ್ವ ವಿದ್ಯಾಲಯಗಳಿಗೆ ಕಾಲೇಜುಗಳಿಂದ ಬರುವ ಸಂಯೋಜನಾ ಶುಲ್ಕವೇ ಆದಾಯದ ಮೂಲವಾಗಿರುತ್ತದೆ. ಇದೀಗ ಹೆಚ್ಚಳ ಮಾಡಿರುವುದರಿಂದ ವಿವಿಗೆ ಹೆಚ್ಚಿನ ಆದಾಯ ಬರಲಿದೆ.

ಬೆಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಗೆ 276 ಕಾಲೇಜುಗಳು ಬರಲಿವೆ. ಇದರಲ್ಲಿ 30 ಸರ್ಕಾರಿ ಕಾಲೇಜುಗಳಿವೆ. ಸಂಯೋಜನಾ ಶುಲ್ಕವನ್ನು ಪ್ರತಿ ವರ್ಷ ಖಾಸಗಿ ಕಾಲೇಜುಗಳು ಮಾತ್ರವೇ ಪಾವತಿಸಬೇಕಿರುತ್ತದೆ.

ಎಷ್ಟು ಹೆಚ್ಚಳ?: ಸಂಯೋಜನಾ ಶುಲ್ಕದ ಜತೆಗೆ ಹೊಸ ಕಾಲೇಜುಗಳ ಆರಂಭದ ಶುಲ್ಕ, ಇನ್​ಟೇಕ್ ಹೆಚ್ಚಳದ ಶುಲ್ಕ, ಶಾಶ್ವತ ಶುಲ್ಕ, ನವೀಕರಣ ಎಲ್ಲ ಶುಲ್ಕಗಳನ್ನು ಹೆಚ್ಚಳ ಮಾಡಿದೆ. ಹೊಸದಾಗಿ ಬಿ.ಎ. ಕೋರ್ಸ್ ಆರಂಭಿಸುವ ಕಾಲೇಜುಗಳ ಸಂಯೋಜನ ಶುಲ್ಕವಾಗಿ ಮೊದಲು 33,000 ರೂ. ಪಾವತಿಸಬೇಕಿತ್ತು. ಹೊಸ ಶುಲ್ಕ 35,000 ರೂ.ಗೆ ಏರಿಕೆಯಾಗಿದೆ. ಎಂ.ಎಸ್ಸಿಗೆ 1.40 ಲಕ್ಷ ರೂ. ಇತ್ತು. ಪರಿಷ್ಕೃತ ಶುಲ್ಕ 1.50 ಲಕ್ಷ ಕ್ಕೆ ಹೆಚ್ಚಳವಾಗಿದೆ. ಇದೇ ರೀತಿ ಎಲ್ಲ ಶುಲ್ಕಗಳು ಕೋರ್ಸ್​ಗಳ ಆಧಾರದ ಮೇಲೆ ಬದಲಾವಣೆಯಾಗಲಿದೆ.

ಇನ್​ಟೆಕ್ ನಿಗದಿ: ವಿವಿಯು 18 ವಿಭಾಗಗಳಲ್ಲಿ ಮಾನ್ಯತೆ ನೀಡುತ್ತದೆ. ಆ ಪ್ರಕಾರವಾಗಿ ಪ್ರತಿ ಕೋರ್ಸ್ ಇಂತಿಷ್ಟು ಎಂದು ಪ್ರವೇಶ ಸಂಖ್ಯೆ ನಿಗದಿಪಡಿಸಿರುತ್ತದೆ. ಅದಕ್ಕಿಂತ ಹೆಚ್ಚಳ ಮಾಡಲು ಕಾಲೇಜುಗಳು ಬಯಸಿದಲ್ಲಿ ಹೆಚ್ಚಿನ ಶುಲ್ಕ ಪಾವತಿಸಬೇಕಿರುತ್ತದೆ. ಸದ್ಯ ಬೆಂ.ವಿವಿಯು ಬಿ.ಎ.ಗೆ 100 ಮತ್ತು ಎಂ.ಎಸ್ಸಿಗೆ 30 ಇನ್​ಟೆಕ್ ನಿಗದಿ ಪಡಿಸಿದೆ.

ವಿವಿಯ ಬಜೆಟ್: ವಿವಿ ಬಜೆಟ್ 400 ಕೋಟಿ ರೂ.ದಾಟಿದೆ. ಆದರೆ, ಇದರಲ್ಲಿ ಪತ್ರಿ ವರ್ಷ 20 ಕೋಟಿ ರೂ. ಕೊರತೆ ಬಜೆಟ್ ಇರುತ್ತದೆ. ವಿವಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಬೋಧಕೇತರರು ಹಾಗೂ 400 ಬೋಧಕ ಸಿಬ್ಬಂದಿ ಇದ್ದಾರೆ. ವೇತನದ ಅನುದಾನವನ್ನು ರಾಜ್ಯ ಸರ್ಕಾರ ನೀಡಿದರೂ, ವಿವಿ ಇತರೆ ಖರ್ಚುಗಳನ್ನು ಭರಿಸುವುದು ಕಷ್ಟವಾಗಿದೆ. ಪಿಂಚಣಿಗೆ ವಾರ್ಷಿಕ 100 ಕೋಟಿ ರೂ.ಬೇಕಿದೆ. ಈ ಮಧ್ಯೆ 20 ಕೋಟಿ ರೂ. ಅನ್ನು ವಿವಿ ವಿಭಜನೆಯಾದ ಹೊಸ ವಿವಿಗಳಿಗೆ ನೀಡಿದೆ.

ವಿವಿ ವಿಭಜನೆಯಿಂದಾಗಿ ಆದಾಯದ ಮೂಲ ಕಡಿಮೆಯಾಗಿವೆ. ಇದನ್ನು ಸರಿದೂಗಿಸಲು ಇತರೆ ಶುಲ್ಕವನ್ನು ಹೆಚ್ಚಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಸಂಯೋಜನಾ ಶುಲ್ಕ ಹೆಚ್ಚಿಸಿದ್ದೇವೆ.

| ಕೆ.ಆರ್. ವೇಣುಗೋಪಾಲ್ ಬೆಂವಿವಿ ಕುಲಪತಿ


ಕೃಪೆ:ವಿಜಯವಾಣಿ

ಸಂಯೋಜನಾ ಶುಲ್ಕ ಹೆಚ್ಚಿಸಿದ ಬೆಂವಿವಿ: ಆರ್ಥಿಕ ಸಂಕಷ್ಟ ಎದುರಿಸಲು ಹೊಸ ದಾರಿ
combination-fee-increased-bengaluru-university-new-way-to-deal-with-financial-hardship