ಬೆಂಗಳೂರು, ನವೆಂಬರ್ 19,2022(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣ ಹಂತದಲ್ಲಿರುವ ಹಾಗೂ ಈಗಾಗಲೇ ನಿರ್ಮಿಸಿ ಹಂಚಿಕೆ ಮಾಡಿರುವ ಬಹುಮಹಡಿ ವಸತಿ ಯೋಜನೆಗಳಿಗೆ ಆಯುಕ್ತರಾದ ಜಿ ಕುಮಾರ್ ನಾಯಕ್ ಅವರು ಇಂದು ಧಿಡೀರ್ ಭೇಟಿ ನೀಡಿ ಖುದ್ದಾಗಿ ಪರಿವೀಕ್ಷಣೆ ನಡೆಸಿ ಸ್ಥಳದಲ್ಲಿದ್ದ ನಿವಾಸಿಗಳನ್ನು ಮಾತನಾಡಿಸಿ ಕುಂದು ಕೊರತೆಗಳ ಬಗ್ಗೆ ಅಹವಾಲು ಸ್ವೀಕರಿಸಿ ಮಾಹಿತಿ ಪಡೆದರು.
ಬೆಂಗಳೂರು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಸಂಸ್ಥೆಯಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಾರ್ವಜನಿಕರಿಗಾಗಿ ನಿವೇಶನಗಳ ಅಭಿವೃದ್ಧಿಯ ಜೊತೆಯಲ್ಲಿ ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ಬೆಲೆಯಲ್ಲಿ ವಸತಿ ನೀಡುವ ಉದ್ದೇಶದಿಂದ ಬಹುಮಹಡಿ ವಸತಿ ಯೋಜನೆಗಳನ್ನು ನಿರ್ಮಾಣ ಮಾಡುತ್ತಿದೆ. ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅವರು ಇಂದು ಸಂಬಂಧಿಸಿದ ಅಧಿಕಾರಿಗಳ ತಂಡದೊಂದಿಗೆ ನಗರದ ಕೆ.ಆರ್.ಪುರಂ ವ್ಯಾಪ್ತಿಯ ದೊಡ್ಡಬನಹಳ್ಳಿ ಹಾಗೂ ಕೋಣದಾಸಪುರದಲ್ಲಿ ಬಹುಮಹಡಿ ವಸತಿ ಯೋಜನೆಗಳಿಗೆ ಧಿಡೀರ್ ಭೇಟಿ ನೀಡಿ ಪರಿವೀಕ್ಷಿಸಿದರು.
ದೊಡ್ಡಬನಹಳ್ಳಿ ಬಹುಮಹಡಿ ವಸತಿ ಯೋಜನೆ ಹಂತ 1 ಮತ್ತು 2 ನೇ ಯೋಜನೆಯಲ್ಲಿ ಮನೆಗಳನ್ನು ಈಗಾಗಲೇ ಸಾರ್ವಜನಿಕರಿಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ ಸಹ ಕೆಲ ಕಾರ್ಯಗಳು ಬಾಕಿ ಇದ್ದು ಅವುಗಳನ್ನು ಪೂರ್ಣಗೊಳಿಸುವಂತೆ ಮನವಿ ಮಾಡಿದ ಸಾರ್ವಜನಿಕರಿಗೆ ಸ್ಪಂದಿಸಿದ ಆಯುಕ್ತರು ಸ್ಥಳದಲ್ಲಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ತುರ್ತಾಗಿ ಬಾಕಿ ಇರುವ ಕಾರ್ಯಗಳನ್ನು ಪೂರ್ಣ ಮಾಡಲು ಸೂಚಿಸಿದರು. ಹಾಗೂ ಸ್ಥಳೀಯ ನಿವಾಸಿಗಳಿಗೆ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಆದ್ಯತೆ ನೀಡುವಂತೆ ಮನವಿ ಮಾಡಿದರು.
ನಿರ್ಮಾಣ ಪೂರ್ಣಗೊಂಡು ಹಂಚಿಕೆಗೆ ಸಿದ್ಧವಾಗಿರುವ 2-BHK ಯ ಕೋಣದಾಸಪುರ ಹಂತ-2 ರ ಯೋಜನೆಯನ್ನು ಪೂರ್ಣವಾಗಿ ಪರಿವೀಕ್ಷಿಸಿದರು ಹಾಗೂ ಸ್ಥಳದಲ್ಲಿ ಹಾಜರಿದ್ದ ಅಭಿಯಂತರ ಸದಸ್ಯರಾದ ಹೆಚ್.ಆರ್.ಶಾಂತರಾಜಣ್ಣ ರವರಿಂದ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ಪಡೆದರು.
ಅಭಿಯಂತರ ಸದಸ್ಯರು ಈ ಯೋಜನೆಯನ್ನು Shear Wall Technology ಮುಖಾಂತರ ನಿರ್ಮಾಣ ಮಾಡುತ್ತಿದ್ದು ಈ Technology ನಲ್ಲಿ ಕಟ್ಟಡವನ್ನು ಸಂಪೂರ್ಣ ಕಾಂಕ್ರೀಟ್ ಹಾಗೂ ಕಬ್ಬಿಣವನ್ನು ಉಪಯೋಗಿಸಿ ನಿರ್ಮಿಸುತ್ತಿರುವುದಾಗಿ ತಿಳಿಸಿದರು.
ಇದರಿಂದಾಗಿ ಈ ಕಟ್ಟಡವನ್ನು ಕಡಿಮೆ ಸಮಯದಲ್ಲಿ ಪೂರ್ಣಗೊಳಿಸಬಹುದೆಂದು ಹಾಗೂ ಈ ತಂತ್ರಜ್ಞಾನದಿಂದ ನಿರ್ಮಿಸುವ ಮನೆಗಳು ಉತ್ತಮ ಗುಣಮಟ್ಟದ್ದಾಗಿದ್ದು, ದೀರ್ಘಕಾಲ ಬಾಳಿಕೆ ಬರುತ್ತವೆ ಹಾಗೂ ಈ ಕಟ್ಟಡವು ಭೂಕಂಪ ನಿರೋಧಕವಾಗಿದ್ದು, ಉತ್ತಮ ತಂತ್ರಜ್ಞಾನದಿಂದ ನಿರ್ಮಿಸಲಾಗಿರುತ್ತದೆ ಮತ್ತು ಈ ಯೋಜನೆಯಲ್ಲಿ ಒದಗಿಸಿರುವ ಕಾರ್ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಹಾಗೂ ಅಲ್ಲಿನ ಗಾಳಿ ಮತ್ತು ಬೆಳಕಿನ ಬಗ್ಗೆ ಮಾಹಿತಿ ನೀಡಿದರು.
ನಂತರ ಪ್ರತಿಕ್ರಿಯಿಸಿದ ಆಯುಕ್ತ ಜಿ ಕುಮಾರ್ ನಾಯಕ್ , ಬಿಡಿಎನಿಂದ ಸಾರ್ವಜನಿಕರಿಗಾಗಿ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸಬೇಕೆಂದು ಹಾಗೂ ನಮ್ಮ ಸಂಸ್ಥೆ ಕಟ್ಟಿರುವ ಮನೆಗಳಲ್ಲಿ ವಾಸಿಸುವವರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಯೋಜನೆಯಲ್ಲಿಯೇ ಒದಗಿಸುವಂತೆ ಸೂಚಿಸಿದರು.
ನಿರ್ಮಾಣ ಹಂತದಲ್ಲಿರುವ ಕೋಣದಾಸಪುರ ಹಂತ-1 ರ ಯೋಜನೆಯ ಪರಿವೀಕ್ಷಿಸಿದರು. ಸ್ಥಳದಲ್ಲಿ ಹಾಜರಿದ್ದ ಇಂಜಿನೀಯರುಗಳೊಂದಿಗೆ ನಿರ್ಮಾಣದ ಬಗ್ಗೆ ಮಾಹಿತಿಯನ್ನು ಪಡೆದರು ಹಾಗೂ ಈ ಯೋಜನೆಗೆ ಬೇಕಾದ ಕಾಂಕ್ರೀಟ್ ಅನ್ನು ಉತ್ಪಾದಿಸುವ ಘಟಕವನ್ನು ಸ್ಥಳದಲ್ಲೇ ನಿರ್ಮಿಸಿರುವ ಬಗ್ಗೆ ಹಾಗೂ ಯೋಜನೆಯ ಸ್ಥಳದಲ್ಲೇ ಗುಣಮಟ್ಟ ಪರಿವೀಕ್ಷಣೆಗಾಗಿ ಉತ್ತಮ ಗುಣಮಟ್ಟದ ಪ್ರಯೋಗ ಶಾಲೆ ಇರುವುದನ್ನು ಗಮನಿಸಿ ಪ್ರಯೋಗ ಶಾಲೆಗೆ ಭೇಟಿ ನೀಡಿ ಪರೀಕ್ಷೆಗಳ ಬಗ್ಗೆ ಮಾಹಿತಿ ಪಡೆದು ಸ್ಥಳದಲ್ಲೇ ಗುಣಮಟ್ಟದ ಕುರಿತು ಒಂದು ಪರೀಕ್ಷೆಯನ್ನು ಸಹ ಮಾಡಿಸಿದರು.
ನಂತರ ಕೋಣದಾಸಪುರದ ಬಿಡಿಎ BISMA Layout ನ ಪರವೀಕ್ಷಣೆಯನ್ನು ಮಾಡಿದರು. ಪರಿವೀಕ್ಷಣೆ ಮುಗಿದ ನಂತರ ಸ್ಥಳದಲ್ಲಿದ್ದ ಅಭಿಯಂತರ ಸದಸ್ಯರಿಗೆ, ವಸತಿ ಯೋಜನೆಗಳಲ್ಲಿ ಉತ್ತಮ ರೀತಿಯಲ್ಲಿ ನಿರ್ಮಿಸಲು, ವಾಸಿಸುವವರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಹಾಗೂ ವಸತಿ ಯೋಜನೆಗಲ್ಲಿ ಹೆಚ್ಚಿನ ಗಿಡಮರಗಳನ್ನು ಬೆಳೆಸಲು ಆಯುಕ್ತರು ನಿರ್ದೇಶಿಸಿದರು.
ಈ ಸಂದರ್ಭದಲ್ಲಿ ಅಭಿಯಂತರ ಸದಸ್ಯರಾದ ಶಾಂತರಾಜಣ್ಣ ಸೇರಿದಂತೆ ಸಂಬಂಧಿಸಿದ ಇತರೆ ಹಿರಿಯ ಅಧಿಕಾರಿಗಳು ಉಪಸ್ತಿತರಿದ್ದರು.
Key words: Commissioner -visits – inspection – BDA- multi-storied- housing -projects.