ಬೆಂಗಳೂರು ಬುಧವಾರ ಮಾರ್ಚ್ 10,2021(www.justkannada.in): ಈಗಾಗಲೇ 2ಎ ಪಟ್ಟಿಯಲ್ಲಿರುವ ಅತಿ ಹಿಂದುಳಿದ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವುದು ಬಹಳ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಪ್ರಬಲ ಸಮುದಾಯಗಳ ಬೇಡಿಕೆಯನ್ನು ಸರಕಾರ ಮನ್ನಿಸದಂತೆ ತಡೆಯುವಂತೆ ಆಗ್ರಹಿಸಿ ಅತಿ ಹಿಂದುಳಿದ ವರ್ಗಗಳ ವೇದಿಕೆಯ ಗೌರವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಹಾಗೂ ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್ ಅವರ ನೇತೃತ್ವದ ನಿಯೋಗ ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಇಂದು ಮನವಿಯನ್ನು ಸಲ್ಲಿಸಿತು.
2ಎ ಪ್ರವರ್ಗದಲ್ಲಿ ಈಗಾಗಲೇ 102 ಜಾತಿಗಳಿವೆ. ಇವುಗಳಲ್ಲಿ ಹಲವಾರು ಜಾತಿಗಳು ಮೀಸಲಾತಿಯ ಸಣ್ಣ ಪ್ರಮಾಣದ ಉಪಯೋಗವನ್ನು ಪಡೆದುಕೊಳ್ಳಲು ಆಗಿಲ್ಲ. ಈಗಾಗಲೇ ಈ ಪಟ್ಟಿಯನ್ನು ಪರಿಷ್ಕರಿಸುವ ಅವಶ್ಯಕತೆ ಇದ್ದು, ಅದರ ಬಗ್ಗೆ ಗಮನ ನೀಡಬೇಕು. ಈಗಾಗಲೇ ಪಟ್ಟಿಯಲ್ಲಿರುವ ಮುಂದುವರೆದ ಜಾತಿಗಳನ್ನು ತಗೆದು ಹಾಕುವ ಮೂಲಕ ಇನ್ನುಳಿದ ಬಲ ಇಲ್ಲದ ಜಾತಿಗಳಿಗೆ ಬಲ ತುಂಬುವಂತಹ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಸರಕಾರಕ್ಕೆ ನಾವು ಮನವಿಯನ್ನು ಸಲ್ಲಿಸಿದ್ದು, ಸರಕಾರದ ಮಟ್ಟದಲ್ಲಿ ಒತ್ತಡ ಹೇರುವಂತೆ ವಿರೋಧ ಪಕ್ಷದ ನಾಯಕರುಗಳಿಗೆ ಆಗ್ರಹಿಸಿದ್ದೇವೆ ಎಂದು ವೇದಿಕೆಯ ಗೌರವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಹಾಗೂ ಅಧ್ಯಕ್ಷರಾದ ಎಂ.ಸಿ ವೇಣುಗೋಪಾಲ್ ಎಂದು ಹೇಳಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶೋಷಿತ ವರ್ಗದಲ್ಲಿರುವ ಸಮುದಾಯಗಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿವೆ. ಈ ಕಾರಣದಿಂದಾಗಿ 162 ಕೋಟಿ ರೂಪಾಯಿಗಳನ್ನು ವ್ಯಯಿಸಿ ಶಾಶ್ವತ ಹಿಂದುಳಿದ ಆಯೋಗದಿಂದ ಸಮೀಕ್ಷೆಯನ್ನು ಮಾಡಿಸಲಾಗಿತ್ತು. ಪ್ರಸ್ತುತ ಸರಕಾರ ಈ ಸಮೀಕ್ಷೆಯ ವರದಿಯನ್ನ ಬಿಡುಗಡೆಗೊಳಿಸಿದಲ್ಲಿ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಅರಿತು ಸರಕಾರಗಳು ಕಾರ್ಯಕ್ರಮಗಳು ಹಾಗೂ ಅಭಿವೃದ್ದಿಗೆ ಸರಿಯಾದ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಈ ವೇದಿಕೆ ಅತಿ ಹಿಂದುಳಿದ ಸಮಾಜಕ್ಕೆ ಸಂಜೀವಿನಿ ಆಗಬೇಕು ಎನ್ನುವ ಅಭಿಲಾಷೆ ನನ್ನದಾಗಿದೆ. ಸದಾಕಾಲ ರಾಜಕೀಯ ಜೀವನದಲ್ಲಿ ಮತ್ತು ನನ್ನ ಅಧಿಕಾರದ ಅವಧಿಯಲ್ಲಿ ನ್ಯಾಯವನ್ನು ಕೊಟ್ಟಿದ್ದೆ ಆದರೆ ಮುಂದಿನ ದಿನಗಳಲ್ಲಿ ಅವರಿಗೆ ನ್ಯಾಯ ದೊರಕಿಸಲು ಈ ಹೋರಾಟದ ಜೊತೆಯಲ್ಲಿರುತ್ತೇನೆ ಎಂದು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಮಾಜಿ ಸಭಾಪತಿ ವಿ. ಆರ್. ಸುದರ್ಶನ್, ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷರುಗಳಾದ ಡಾ. ಸಿ.ಎಸ್.ದ್ವಾರಕಾನಾಥ್, ಪ್ರೊ. ನರಸಿಂಹಯ್ಯ, ವಿದಾನಪರಿಷತ್ ಸಧಸ್ಯರಾದ ಪಿ.ಆರ್.ರಮೇಶ್, ಕೆ.ಪಿ ನಂಜುಂಡಿ, ಪ್ರಧಾನ ಕಾರ್ಯದರ್ಶಿಗಳಾದ ಎಸ್ ಆರ್ ಯೆಲ್ಲಪ್ಪ, ವೇದಿಕೆಯ ಉಪಾಧ್ಯಕ್ಷ ರಾದ ಡಾ ಜಿ ರಮೇಶ್, ಹೆಚ್. ಸುಬ್ಬಣ್ಣ, ಸಿ. ನಂಜಪ್ಪ, ಬಿ. ವೆಂಕಟೇಶ್, ಬಸಬರಾಜು ಉಪಸ್ಥಿತರಿದ್ದರು.
Key words: Committed -protecting – interests – backward classes-former cm- siddaramaiah