ಬೆಂಗಳೂರು,ಜುಲೈ,27,2022(www.justkannada.in): ಮದುವೆಯಾಗಿ 11 ದಿನಕ್ಕೆ ಕೋವಿಡ್ ಗೆ ಬಲಿಯಾಗಿದ್ದ ರಾಜ್ ಟಿವಿ ಕ್ಯಾಮರಾಮೆನ್ ಜಿ.ಕೆ.ವಿನಾಯಕ ಕುಟುಂಬಕ್ಕೆ ಪರಿಹಾರ ಬಿಡುಗಡೆ ಮಾಡಲಾಗಿದೆ.
ಚಿತ್ರದುರ್ಗ ಸ್ಥಳೀಯ ಚಾನಲ್ ಗಳಲ್ಲಿ ಕ್ಯಾಮರಾಮೆನ್ ಆಗಿದ್ದ ಜಿ.ಕೆ.ವಿನಾಯಕ ಉದಯ ಟಿವಿ ಕ್ಯಾಮರಾಮೆನ್ ಆಗಿ ಕೆಲಸ ಮಾಡಿದ್ದರು. ಬಳಿಕ ರಾಜ್ ಟಿವಿ ಕ್ಯಾಮರಾಮೆನ್ ಆಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದರು.
ಇನ್ನೇನು ಬದುಕು ಒಂದು ನೆಮ್ಮದಿಯ ಹಂತಕ್ಕೆ ಬಂದಿದೆ ಎಂದು ಅನ್ನಿಸತೊಡಗಿತ್ತು. ಮೂವತ್ತು ವಸಂತಗಳನ್ನ ಕಂಡ ವಿನಾಯಕ ಅವರ ಮನಸಿನಲ್ಲಿ ಮದುವೆ ಮಾತು ಮೊಳೆಯತೊಡಗಿತು. ಗುರುಹಿರಿಯರ ಆರ್ಶೀವಾದಿಂದ ಕಂಕಣಬಲ ಕೂಡಿ ಬಂದಾಗ ಸ್ವರ್ಗಕ್ಕೆ ಮೂರು ಗೇಣು ಎನ್ನುವಷ್ಟು ಸಂಭ್ರಮ. ಸ್ನೇಹಿತರ ಜೊತೆಗೆ ಮದುವೆ ಸಿಹಿ ಸುದ್ದಿ ಹೇಳಿಕೊಂಡಿದ್ದರು ಕೋವಿಡ್ ಸಂದರ್ಭದಲ್ಲಿ ಸಪ್ತಪದಿ ತುಳಿಯಲು ಗಟ್ಟಿ ಮನಸ್ಸು ಮಾಡಿ ನಿರ್ಧರಿಸಿದ್ದರು. ಎಡವಟ್ಟಾಗಿದ್ದು ಆಗಲೇ. ಮದುವೆ ಮುಗಿದ ವಾರಕ್ಕೆ ವಿನಾಯಕ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಚಿತ್ರದುರ್ಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಳಿಕ ಕೋವಿಡ್ ಧೃಡಪಟ್ಟಿತು. ಚಿಕಿತ್ಸೆಯೂ ಶುರುವಾಗಿ ಸುದ್ದಿ ಮನೆಯ ಗೆಳೆಯರೆಲ್ಲ ಬೇಗ ಹುಷಾರಾಗಿ ಬಾ ಎಂದು ಪ್ರಾರ್ಥಿಸಿದರು. ಮದುವೆಯಾಗಿ ಹತ್ತನೇ ದಿನವೂ ಆಸ್ಪತ್ರೆಯಲ್ಲಿ ಮಾತನಾಡಿದವ, ಹನ್ನೊಂದನೆಯ ದಿನಕ್ಕೆ ಉಸಿರು ಚೆಲ್ಲಿದಾಗ ಹೆತ್ತವರ ಕರಳು ಹೇಗಾಗಿರಬೇಡ?
ರಾಜ್ ಟಿವಿ ಕ್ಯಾಮರಾಮೆನ್ ಕೋವಿಡ್ ಗೆ ಬಲಿಯಾದ ನೋವಿನ ಸಂಗತಿಯನ್ನು ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ನನ್ನ ಗಮನಕ್ಕೆ ತರಲಾಯಿತು. ಏನಾದರೂ ಸಹಾಯ ಮಾಡಿಸಬೇಕು ಎಂದು ಮನವಿ ಮಾಡಿತು. ವಿನಾಯಕನ ಕುಟುಂಬಕ್ಕೆ ನೆರವು ಕೇಳಿ ಮುಖ್ಯಮಂತ್ರಿಗೆ ಕೆಯುಡಬ್ಲ್ಯುಜೆ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಕುಟುಂಬಕ್ಕೆ ತಕ್ಷಣ ಪರಿಹಾರ ಮಂಜೂರು ಆಯಿತು. ಇದೆಲ್ಲ ಘಟನಾವಳಿಗಳಿಗೆ ವರ್ಷ ತುಂಬಿದೆ. ಮೊನ್ನೆ ವಿನಾಯಕ ಕುಟುಂಬದವರು ಚಿತ್ರದುರ್ಗದಿಂದ ಪೋನ್ ಮಾಡಿದ್ದರು. ಬೆಂಗಳೂರಿಗೆ ಬಂದವರು ವಿಧಾನಸೌಧಕ್ಕೆ ಹುಡುಕಿಕೊಂಡು ಬಂದರು.
ತಾಂತ್ರಿಕ ಕಾರಣಕ್ಕಾಗಿ ಅಕೌಂಟ್ ಗೆ ಹಣ ಹೋಗಿರಲಿಲ್ಲ. ಸಮಸ್ಯೆ ಸರಿಪಡಿಸಿದ ಬಳಿಕ ಬ್ಯಾಂಕ್ ಅಕೌಂಟ್ ಗೆ ಪರಿಹಾರ ಹಣ ಬಂದಿದೆ ಎಂದು ವಿನಾಯಕನ ಸಹೋದರ ಶ್ರೀಧರ ಅವರು ಬ್ಯಾಂಕ್ ಪಾಸ್ ಬುಕ್ ಹಿಡಿದು ಬಂದು ಎರಡು ಲಕ್ಷ ಜಮೆ ಆಗಿದೆ ಎಂದು ಧನ್ಯವಾದ ಹೇಳಿದಾಗ ನನಗೂ ನೊಂದ ಕ್ಯಾಮರಾಮೆನ್ ಕುಟುಂಬಕ್ಕೆ ಪರಿಹಾರ ಕೊಡಿಸಿದ ಸಮಾಧಾನ.
ಈ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಚಿತ್ರದುರ್ಗ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅವಿರತ ಹೋರಾಟಕ್ಕೆ ಧನ್ಯವಾದ ಹೇಳುವುದನ್ನು ಮರೆಯಲಿಲ್ಲ ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
Key words: compensation – family – Raj TV -cameramen – Covid