ಮೈಸೂರು,ಫೆಬ್ರವರಿ,12,2021(www.justkannada.in) ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳು ಆರಂಭವಾಗಲಿದೆ ಎಂದು ಯೋಜನ, ಕ್ರೀಡೆ ಮತ್ತು ಯುವಜನ ಸೇವಾ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ, ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ಐಎಎಸ್ / ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳ ಆನ್ಲೈನ್ ತರಬೇತಿ ಶಿಬಿರಾರ್ಥಿಗಳಿಗೆ ಶುಭಹಾರೈಕೆ ಮತ್ತು ಅಧ್ಯಯನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಶುಭಹಾರೈಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ನಡೆಸುತ್ತಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮಾದರಿಯಾಗಿದ್ದು, ಇದೇ ರೀತಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕೆಂದು ಮಾನ್ಯ ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ. ಅವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಮುಂದಿನ ವರ್ಷದಿಂದ ರಾಜ್ಯದ ಎಲ್ಲಾ ಜಿಲ್ಲಾ ಮಟ್ಟದಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ತೆರೆಯಲು 2022ನೇ ಸಾಲಿನ ಬಜೆಟ್ನಲ್ಲಿ ಇದಕ್ಕೆ ಅನುಮೋದನೆ ದೊರೆಯುವ ನಿರೀಕ್ಷೆಯಿದೆ ಎಂದರು.
ಜಿಲ್ಲಾ ಕೇಂದ್ರಗಳ ಜೊತೆ ತಾಲೂಕು ಮಟ್ಟದಲ್ಲೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳ ಅಗತ್ಯವಿದೆ. ಜಿಲ್ಲಾ ಮತ್ತು ನಗರ ಪ್ರದೇಶದ ಯುವಕರಲ್ಲಿ ಐಎಎಸ್ ಕೆಎಎಸ್ ಅಧಿಕಾರಿಯಾಗುವ ಕನಸು ಇರುತ್ತದೆ. ಅದಕ್ಕೆ ತಕ್ಕಂತೆ ಮಾಗದರ್ಶನ ದೊರೆಯುತ್ತದೆ. ಆದರೆ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಭರವಸೆ ಇರುವುದಿಲ್ಲ. ಹೀಗಾಗಿ ಗ್ರಾಮೀಣ ಮಕ್ಕಳನ್ನು ಗುರಿಯಾಗಿರಿಸಿಕೊಂಡು ತಾಲೂಕು ಮಟ್ಟದಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಆರಂಭಿಸಬೇಕು. ಈ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದರು.
ರಾಜ್ಯದಲ್ಲಿ 2.5 ಕೋಟಿ ಯುವ ಸಮುದಾಯವಿದ್ದರೂ ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆ ಮಾತ್ರ ಶೇ.30ರಷ್ಟಿದೆ. ಹೀಗಾಗಿ ಪದವಿ ಹಾಗೂ ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿರುವ ಸಂಖ್ಯೆ ಶೇ.70 ಮಂದಿ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮುನ್ನಲೆಗೆ ಬರುವಂತೆ ಪ್ರೇರೇಪಿಸಬೇಕಿದೆ. ವೈಯುಕ್ತಿಕ ಭವಿಷ್ಯ ಅಥವಾ ಜೀವನಕ್ಕಾಗಿ ಐಎಎಸ್ ಹಾಗೂ ಐಪಿಎಸ್ ಆಗಲು ಪ್ರಯತ್ನಿಸಬೇಡಿ. ಜನಸೇವೆ ಮಾಡಲು ಹಾಗೂ ಸಮಾಜದಲ್ಲಿ ಬದಲಾವಣೆ ತರುವ ಮನಸ್ಸಿದ್ದರೆ ಮಾತ್ರವೇ ಈ ಕ್ಷೇತ್ರಕ್ಕೆ ಬನ್ನಿ. ಶಿಕ್ಷಣ ಪಡೆದವರಿಗೆ ರಕ್ಷಣಾ ಕ್ಷೇತ್ರ ಆರ್ಥಿಕ ಹಾಗೂ ವಿಮಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿಯೂ ಸಾಕಷ್ಟು ಅವಕಾಶಗಳಿದ್ದು ಅವುಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ನಾಗಲ್ಯಾಂಡ್ ಸರ್ಕಾರದ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ ಎನ್.ರಾಜಶೇಖರ ಅವರು ಮಾತನಾಡಿ, ಕಾಟಾಚಾರಕ್ಕೊ ಅಥವಾ ಪೋಷಕರ ಒತ್ತಾಯಕ್ಕೂ ತರಬೇತಿಗೆ ಬರಬೇಡಿ. ಓದನ್ನು ಗಂಭೀರವಾಗಿ ಪರಿಗಣಿಸಿ, ಸಮಯಕ್ಕೆ ಹೆಚ್ಚಿನ ಬೆಲೆಯಿದ್ದು, ಅದರ ಸದುಪಯೋಗಪಡಿಸಿಕೊಳ್ಳಬೇಕಿದೆ. ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ಅಭ್ಯಸಿಸುವುದು. ಪ್ರಚಲಿತ ವಿದ್ಯಮಾನ್ಯಗಳನ್ನು ಅರಿತಿರುವುದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಪೂರಕ ಆಗಲಿವೆ ಎಂದರು.
ಹಾಸನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ. ಭಾರತಿ ಮಾತನಾಡಿ ಕರಾಮುವಿ ನಡೆಸುತ್ತಿರುವ 60 ದಿನದ ತರಬೇತಿಗೆ ನಮ್ಮ ಮನೆಯಲ್ಲಿರುವ ಸಂಬಂಧಿ ತರಬೇತಿಗೆ ಸೇರಿದ್ದು ತರಬೇತಿಯ ಗುಣಮಟ್ಟ ಉತ್ತಮವಾಗಿದೆ. ನಿರ್ದಿಷ್ಟ ಗುರಿಯೊಂದಿಗೆ ಪ್ರಯತ್ನಿಸಿ ಯಶಸ್ಸು ನಿಮ್ಮದಾಗಲಿದೆ. ಜ್ಞಾನದ ಹಸಿವು ಎಂಬುದು ಯಾವುದೇ ಹುದ್ದೆಗೇರಿದರು ಇರಬೇಕು. ಹುದ್ದೆ ಅಲಂಕರಿಸಿದ ಬಳಿಕವೂ ಕಲಿಯುವುದು ಸಾಕಷ್ಟಿರುತ್ತದೆ. ಕಲಿಯುವಲ್ಲಿ ನಿಮ್ಮ ಆಸಕ್ತಿಯೂ ನಿರಂತರವಾಗಿರಬೇಕು ಎಂದರು.
ಕರಾಮುವಿಯ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮಾತನಾಡಿ, ತರಬೇತಿ ಕೇಂದ್ರಕ್ಕೀಗ ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ಮೂರು ತಿಂಗಳಲ್ಲಿ ವಿವಿಯಿಂದ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆ ಅಲಂಕರಿಸುವವರನ್ನು ಒಳಗೊಂಡ ಸಾಧಕರ ಪುಸ್ತಕ ಬಿಡುಗಡೆಗೊಳಿಸಲಾಗುವುದು. ಆಶಾ ಕಾರ್ಯಕರ್ತೆಯರ ಮೂಲಕ ಪ್ರತಿಯೊಂದು ಮನೆಗಳಿಗೂ ತಲುಪುವಂತೆ ಮಾಡಿ ಸಾಧನೆಗೆ ಪ್ರೇರೆಪಿಸುವ ಕೆಲಸವನ್ನು ಮುಕ್ತ ವಿಶ್ವ ವಿದ್ಯಾನಿಲಯ ಮಾಡಲಿದೆ ವಿದ್ಯಾನಿಲಯದ ತರಬೇತಿ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆಯುತ್ತಿದೆ ಎಂದರು.
ಕುಲಸಚಿವ ಪ್ರೊ. ಲಿಂಗರಾಜಗಾಂಧಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಐಎಎಸ್ ಕೆಎಎಸ್ 60 ದಿನಗಳ ಆನ್ಲೈನ್ ತರಬೇತಿ ಶಿಬಿರದಲ್ಲಿ ಐಎಎಸ್ ಕೆಎಎಸ್ ಅಧಿಕಾರಿಗಳು, ಪ್ರಾಧ್ಯಾಪಕರುಗಳು, ವಿವಿಧ ಕ್ಷೇತ್ರದ ವಿಷಯ ತಜ್ಞರುಗಳು ತರಬೇತಿ ನೀಡಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 1300ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಇದರ ಉಪಯೋಗ ಪಡೆಯುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಹಣಕಾಸು ಅಧಿಕಾರಿ ಡಾ. ಎ. ಖಾದಾರ್ ಪಾಷ, ಪರೀಕ್ಷಾಂಗ ಕುಲಸಚಿವ ಡಾ, ಕೆ.ಎಂ ಮಹದೇವನ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ. ಆರ್ .ಹೆಚ್. ಪವಿತ್ರ ಇನ್ನಿತರರು ಉಪಸ್ಥಿತರಿದ್ದರು.
Key words: Competitive exam-training center – all district -centers -Dr. Shalini Rajneesh-KSOU