ಚಾಮರಾಜನಗರ,ನವೆಂಬರ್,12,2020(www.justkannada.in) : ಆದಿವಾಸಿಗಳ ನಿರುದ್ಯೋಗಿ ಯುವಕ ಯುವತಿಯರಿಗೆ ಸೂಕ್ತ ತರಬೇತಿ ಇಲ್ಲದೇ ಸರ್ಕಾರಿ ಉದ್ಯೋಗಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನೆರವಾಗುವ ನಿಟ್ಟಿನಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ಎಸ್ಪಿ ದಿವ್ಯಾಸಾರಾ ಥಾಮಸ್ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಆಯೋಜಿಸಿರುವ ಆದಿವಾಸಿ ಯುವಜನರಿಗೆ 1 ವಾರ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಆದಿವಾಸಿ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ನೆರವಾಗುವ ನಿಟ್ಟಿನಲ್ಲಿ ಇಲಾಖೆ ವತಿಯಿಂದ ಏಳು ದಿನಗಳ ಉಚಿತ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದನ್ನು ಸದಪಯೋಗಪಡಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
ಕೊಳ್ಳೇಗಾಲದ ಡಿವೈಎಸ್ಪಿ ಜಿ.ನಾಗರಾಜು ಮಾತನಾಡಿ, ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಆದಿವಾಸಿ ಸಮುದಾಯದ ನಿರುದ್ಯೋಗಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡುತ್ತಿರುವುದು ಒಂದು ಉತ್ತಮ ಬೆಳವಣಿಗೆಯಾಗಿದೆ. ಆದಿವಾಸಿ ಯುವ ಸಮುದಾಯ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
key words : Competitive-Exam-Training-Adivasi-Unemployed-Youth-Young-Women