ಬೆಂಗಳೂರು,ಜು,16,2019(www.justkannada.in): ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೆ ಮುಂಬೈಗೆ ತೆರಳಿ ಬಿಜೆಪಿಗೆ ಬೆಂಬಲ ನೀಡಿರುವ ರಾಣಿಬೆನ್ನೂರು ಪಕ್ಷೇತರ ಶಾಸಕ ಆರ್ .ಶಂಕರ್ ವಿರುದ್ಧ ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ.
ಪಕ್ಷದ ನಿಯಮ ಉಲ್ಲಂಘಿಸಿದ್ದರ ವಿರುದ್ಧ ಕೆಪಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಸಂಸ್ಥಾಪಕ ಮಹೇಶ್ ಗೌಡ ಅವರು, ಇಂದು ಸ್ಪೀಕರ್ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಈ ವೇಳೆ ಮಾತನಾಡಿದ ಮಹೇಶ್ ಗೌಡ, ಪಕ್ಷದ ಗಮನಕ್ಕೆ ತರದೆ ಶಂಕರ್ ಅವರು ಕಾಂಗ್ರೆಸ್ ಜತೆ ಪಕ್ಷ ವಿಲೀನ ಮಾಡಿದ್ದಾರೆ. ವೀಲಿನ ಕುರಿತಂತೆ ಸ್ಪೀಕರ್ ಗೆ ಪತ್ರ ಬರೆದಿರೋದು ಸರಿಯಲ್ಲ. ಇದನ್ನು ಮಾನ್ಯ ಮಾಡಬಾರದೆಂದು ಸ್ಪೀಕರ್ ಕಚೇರಿಗೆ ದೂರು ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾ, ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚಿಸಿ ಆನಂತರ ವಿಲೀನ ಮಾಡಬೇಕು. ಆದರೆ ಆರ್. ಶಂಕರ್ ಯಾವುದೇ ರೀತಿ ಚರ್ಚೆ ನಡೆಸದೇ ವಿಲೀನ ಮಾಡಲು ಮುಂದಾಗಿರೋದು ಸರಿಯಲ್ಲ. ಹಾಗಾಗಿ, ವಿಲೀನದ ಬಗ್ಗೆ ಶಂಕರ್ ಅವರು ಕೊಟ್ಟಿರುವ ಪತ್ರವನ್ನು ಮಾನ್ಯ ಮಾಡಬಾರದು ಎಂದು ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.
ಶಂಕರ್ ಬಾಹ್ಯ ಬೆಂಬಲ ನೀಡಿದ್ದರೂ ಅದು ಅವರ ವೈಯುಕ್ತಿಕ ವಿಚಾರ. ವಿಲೀನ ಕುರಿತಂತೆ ಪಕ್ಷ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ. ನಾಳೆ ಸಂಜೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಹೇಶ್ ಗೌಡ ತಿಳಿಸಿದರು. ಕೆಪಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
Key words: Complaint -against –idependent MLA- R Shankar- Speaker