ಬೆಂಗಳೂರು,ಏಪ್ರಿಲ್,27,2023(www.justkannada.in): ಕೇಂದ್ರ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪ ಮಾಡಿ ಕಾಂಗ್ರೆಸ್ ಮತದಾರರಿಗೆ ಬೆದರಿಕೆ ಹೀಗಾಗಿ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಅಧ್ಯಕ್ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಅವರ ವಿರುದ್ಧ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್ , ಇದು ಅತ್ಯಂತ ಗಂಭೀರವಾದ ಪ್ರಕರಣ. ಕರ್ನಾಟಕ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ಇದು ಕರ್ನಾಟಕದ ಬದ್ಧತೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೋಮು ಸಂಘರ್ಷ, ಗಲಭೆಗಳಾಗುತ್ತವೆ ಎಂದು ಕೇಂದ್ರ ಸಚಿವ ಅಮಿತ್ ಶಾ ಆಧಾರರಹಿತ ಆರೋಪ ಮಾಡಿ, ಕಾಂಗ್ರೆಸ್ ಗೆ ಯಾರೂ ಮತ ಹಾಕಬಾರದು ಎಂದು ಹೆದರಿಸುವ ಪ್ರಯತ್ನ ಮಾಡಲಾಗಿದೆ. ಅಮಿತ್ ಶಾ ಅವರು ದೇಶದ ಅತ್ಯುನ್ನತ ಸ್ಥಾನದಲ್ಲಿದ್ದು, ಒಂದು ರಾಜ್ಯದ ಜನರಿಗೆ ಈ ರೀತಿ ಬೆದರಿಕೆ ಹಾಕುವುದು ಎಷ್ಟು ಸರಿ? ಇದು ಯಾವ ರೀತಿಯ ಪ್ರಜಾಪ್ರಭುತ್ವ? ಹೀಗಾಗಿ ಅವರ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 171ಜಿ, 505, 120ಬಿ, 123 ಅಡಿಯಲ್ಲಿ ದೂರು ದಾಖಲಿಸಿದ್ದೇವೆ ಎಂದರು.
ಇದೊಂದು ದೊಡ್ಡ ಪಿತೂರಿಯಾಗಿದ್ದು, ಚುನಾವಣಾ ಆಯೋಗ ರಾಜ್ಯ ಚುನಾವಣಾ ಪ್ರಕ್ರಿಯೆಯಲ್ಲಿ ಅಮಿತ್ ಶಾ ಭಾಗವಹಿಸದಂತೆ ನಿಷೇಧ ಹೇರಬೇಕು. ಈ ವಿಚಾರವಾಗಿ ಎಐಸಿಸಿ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಜನಸಾಮಾನ್ಯರು ಸಾಮಾಜಿಕ ಜಾಲತಾಣಗಳಲ್ಲಿ ಒಂದು ಸಣ್ಣ ಪೋಸ್ಟ್ ಹಾಕಿದ್ದರೆ ಬಂಧಿಸಲಾಗುತ್ತಿತ್ತು. ನಾವು ಪೇಸಿಎಂ ಪೋಸ್ಟರ್ ಅಂಟಿಸಲು ಮುಂದಾದರೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದರು. ಆದರೆ ದೇಶದ ಗೃಹ ಸಚಿವರು ರಾಜ್ಯದ ಕಾಂಗ್ರೆಸ್ ಮತದಾರರಿಗೆ ಬೆದರಿಕೆ ಹಾಕಿದರೆ ಯಾಕೆ ಪ್ರಕರಣ ದಾಖಲಿಸಬಾರದು? ಎಂದು ಪ್ರಶ್ನಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಭಾಷಣಗಳಿಗೆ ಅವಕಾಶವಿಲ್ಲ. ಇದು ದೊಡ್ಡ ಪ್ರಕರಣವಾಗಿದ್ದು, ಇದಕ್ಕೆ ಸಂಬಂಧಿಸಿದ ಸಾಕ್ಷಿಗಳು ಮಾಧ್ಯಮಗಳಲ್ಲಿದ್ದು, ಈ ನೆಲದ ಕಾನೂನಿನಂತೆ ಈ ಪ್ರಕರಣದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ದೂರು ದಾಖಲಿಸಿದ ನಂತರ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಪಕ್ಷ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಸಂಬಂಧ ಕಾಂಗ್ರೆಸ್ ಪಕ್ಷದ ನಿಯೋಗವು ಇಂದು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜಾತಿ ಧರ್ಮಗಳ ಹೆಸರಿನಲ್ಲಿ ದ್ವೇಷ ಹರಡಿ ಕರ್ನಾಟಕ ರಾಜ್ಯದ ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಆಧಾರರಹಿತ ಆರೋಪ ಮಾಡಲಾಗಿದೆ.
ಏಪ್ರಿಲ್ 26ರಂದು ಕೇಂದ್ರ ಸಚಿವ ಅಮಿತ್ ಶಾ ಅವರು ಬಿಜೆಪಿ ಪ್ರಚಾರ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮು ಗಲಭೆಗಳು ಹೆಚ್ಚಲಿವೆ ಎಂಬ ಸುಳ್ಳು ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪಿಎಫ್ಐ ಮೇಲಿನ ನಿಷೇಧ ಹಿಂಪಡೆಯಲಿದೆ ಎಂಬ ಆಧಾರರಹಿತ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳು ದ್ವೇಷ ಹರಡಿ ಕೋಮು ಸೌಹಾರ್ದತೆಗೆ ಧಕ್ಕೆ ತಂದು ಚುನಾವಣೆಯಲ್ಲಿ ಅಕ್ರಮಕ್ಕೆ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಮಿತ್ ಶಾ ಅವರ ಸುಳ್ಳು ಆರೋಪಗಳು ಉದ್ದೇಶಪೂರ್ವಕವಾಗಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಅನೇಕ ತಿಂಗಳುಗಳ ಕಾಲ ಪಿಎಫ್ಐ ನಿಷೇಧಕ್ಕೆ ಆಗ್ರಹ ಮಾಡಿದರೂ ಬೊಮ್ಮಾಯಿ ಸರ್ಕಾರ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ದಶಕಗಳ ಕಾಲ ರಾಜ್ಯವನ್ನು ಆಳಿದೆ. 2013ರಿಂದ 2018ರ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಕೋಮುಗಲಭೆಗೆ ಆಸ್ಪದ ನೀಡಿರಲಿಲ್ಲ. ಕಾಂಗ್ರೆಸ್ ಪಿಎಫ್ಐ ನಿಷೇಧಕ್ಕೆ ಆಗ್ರಹಿಸಿತ್ತೇ ಹೊರತು, ಪಿಎಫ್ಐ ನಿಷೇಧ ಹಿಂಪಡೆಯುವ ಭರವಸೆ ನೀಡಿಲ್ಲ. ಬಿಜೆಪಿ ಸೋಲುವ ಭಯದಲ್ಲಿ, 40ಕ್ಕಿಂತ ಕಡಿಮೆ ಸೀಟು ಸಿಗುವ ಕಾರಣ ಅಮಿತ್ ಶಾ, ಜೆ.ಪಿ ನಡ್ಡಾ, ಯೋಗಿ ಆದಿತ್ಯನಾಥ್ ಅವರು ಹತಾಶರಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ.
ಕೇಂದ್ರ ಗೃಹ ಸಚಿವರು ಇಂತಹ ಷಡ್ಯಂತ್ರಗಳನ್ನು ಬೇರೆ ರಾಜ್ಯಗಳಲ್ಲಿ ಪ್ರಯೋಗಿಸಬಹುದು. ಆದರೆ ಕರ್ನಾಟಕದಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಕಾನೂನಿನ ಅರಿವಿದೆ. ಅಮಿತ್ ಶಾ ಹಾಗೂ ಬಿಜೆಪಿಯ ನಾಯಕರ ಸುಳ್ಳು ಹಾಗೂ ಆಧಾರರಹಿತ ಆರೋಪ ಹಾಗೂ ದ್ವೇಷ ಭಾಷಣದ ವಿರುದ್ಧ ಐಪಿಸಿ ಸೆಕ್ಷನ್ 153, 153ಎ, 171ಜಿ, 505, 120ಬಿ, 123 ಅಡಿಯಲ್ಲಿ ಎಫ್ಐಆರ್ ದಾಖಲಿಸಬೇಕು ಎಂದು ದೂರು ನೀಡಿದ್ದೇವೆ. ಅಮಿತ್ ಶಾ ಅವರ ಬಂಧನವಾಗಬೇಕು ಎಂದು ಆಗ್ರಹಿಸಿದ್ದೇವೆ.
ನಾವು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಮುಖ್ಯಚುನಾವಣಾಧಿಕಾರಿಗಳು ನನಗೆ ಪತ್ರ ಬರೆದಿದ್ದು, ನಾಳೆ ಸಂಜೆ 4 ಗಂಟೆಗೆ ಈ ವಿಚಾರವಾಗಿ ವಿಚಾರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಹಾಗೂ ಅಕ್ರಮದ ಪ್ರಕರಣವಾಗಿರುವುದರಿಂದ ಅಮಿತ್ ಶಾ ಅವರು ರಾಜ್ಯ ಚುನಾವಣಾ ಪ್ರಕ್ರಿಯೆಯಿಂದ ನಿಷೇಧಿಸಬೇಕು ಎಂದು ಆಗ್ರಹಿಸಿದರು.
Key words: complaint-Amith sha-DK Shivakumar