ಬೆಂಗಳೂರು, ಜನವರಿ,12,2024(www.justkannada.in): ಮೂರು ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಠಿಗೆ ಆಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿರುದ್ದ ಪಕ್ಷದ ಹೈಕಮಾಂಡ್ ಗೆ ಕಾರ್ಯಕರ್ತರು ದೂರು ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರಿಗೆ ಸ್ವಪಕ್ಷದ ಕಾರ್ಯಕರ್ತರೇ ದೂರು ನೀಡಿದ್ದಾರೆ. ಅಲ್ಲದೇ ಸಚಿವ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಸಚಿವ ಕೆ. ಎನ್ ರಾಜಣ್ಣ ಅವರು ಪದೇ ಪದೇ ಎಐಸಿಸಿ ಅಧ್ಯಕ್ಷ, ಕೆಪಿಸಿಸಿ ಅಧ್ಯಕ್ಷರ ಆದೇಶದ ವಿರುದ್ಧ ಮಾತಾಡುತ್ತಿದ್ದಾರೆ. ಸಚಿವ ಕೆಎನ್ ರಾಜಣ್ಣ ಅನವಶ್ಯಕವಾಗಿ ಡಿಸಿಎಂ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಕೆ.ಎನ್.ರಾಜಣ್ಣ ಹೇಳಿಕೆ ಬೇಜವಾಬ್ದಾರಿಯಿಂದ ಕೂಡಿದೆ. ಸಚಿವರ ಡಿನ್ನರ್ ಮೀಟಿಂಗ್ ಬಗ್ಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಚಟುವಟಿಕೆಗಳನ್ನು ಸಹಿಸಬಾರದು. ಸಂಪುಟದಿಂದ ಸಚಿವ ಕೆ.ಎನ್.ರಾಜಣ್ಣರನ್ನು ಕೈಬಿಡುವಂತೆ ಕಾಂಗ್ರೆಸ್ ನ 10 ಕಾರ್ಯಕರ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
Key words: Complaint – Congress- High Command- against- Minister- KN Rajanna