ಬೆಂಗಳೂರು,ಫೆಬ್ರವರಿ,2,2023(www.justkannada.in): 2013-2018 ರ ವರೆಗಿನ ಸಿದ್ಧರಾಮಯ್ಯನವರ ಆಡಳಿತದ ಅವಧಿಯಲ್ಲಿ ನಡೆದಿರುವ 10 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಒಟ್ಟು 3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತವಾಗಿ 10 ಪ್ರತ್ಯೇಕ ದೂರುಗಳನ್ನು ಲೋಕಾಯುಕ್ತದಲ್ಲಿ ದಾಖಲಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್ ರಮೇಶ್ ತಿಳಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎನ್.ಆರ್ ರಮೇಶ್ ಹೇಳಿರುವುದಿಷ್ಟು.
ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ 10 ವಿವಿಧ ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ, ಪ್ರತ್ಯೇಕವಾದ 10 ದೂರುಗಳನ್ನು ಒಂದೇ ಬಾರಿಗೆ ಲೋಕಾಯುಕ್ತದಲ್ಲಿ ದಾಖಲಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಮಾಜಿ ಸಚಿವ ಕೆ. ಜೆ. ಜಾರ್ಜ್, ಕೃಷ್ಣ ಭೈರೇಗೌಡ, ಯು. ಟಿ. ಖಾದರ್, ಎಂ. ಬಿ. ಪಾಟೀಲ್, ಜ಼ಮೀರ್ ಅಹಮದ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ ಹಾಗೂ ಶಾಸಕರಾದ ಎನ್. ಎ. ಹ್ಯಾರೀಸ್, ಮಾಜಿ ಶಾಸಕ ಪ್ರಿಯಾ ಕೃಷ್ಣ ಸೇರಿದಂತೆ ಹಲವು ಭ್ರಷ್ಟ ರಾಜಕಾರಣಿಗಳ ವಿರುದ್ಧ ಹಾಗೂ ಹಿರಿಯ IAS ಅಧಿಕಾರಿಗಳಾದ ಪಾಂಡುರಂಗ ಬಿ. ನಾಯಕ್, ಜಿ. ಸತೀಶ್, ಅತುಲ್ ಕುಮಾರ್ ತಿವಾರಿ, ವಸ್ತ್ರದ್, ವಿ. ಶಂಕರ್, ಮನೋಜ್ ರಾಜನ್, ಹಾಗೂ ಡಾ. ಪಿ. ಬೋರೇಗೌಡ, ಡಾ. ಲೀಲಾ ಸಂಪಿಗೆ, ಚಲುವರಾಜು ಮತ್ತು ಕೃಷ್ಣಮೂರ್ತಿ ಅವರ ವಿರುದ್ಧ ದೂರುಗಳು ದಾಖಲಾಗಿವೆ. ಇದಲ್ಲದೇ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರ ವಿರುದ್ಧವೂ ಸಹ ಸರ್ಕಾರಿ ಭೂ ಕಬಳಿಕೆ ಪ್ರಕರಣದ ದೂರು ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಹಗರಣಗಳ ವಿವರ
- ಬಿಬಿಎಂಪಿ ವ್ಯಾಪ್ತಿಯ 189 ಇಂದಿರಾ ಕ್ಯಾಂಟೀನ್ ಗಳ ಗ್ರಾಹಕರ ಹೆಸರಿನಲ್ಲಿ ಪ್ರತೀ ತಿಂಗಳು 11,52,74,273/- ರೂಪಾಯಿಗಳಂತೆ 560 ಕೋಟಿ ರೂಪಾಯಿ ಹಣ ಕಬಳಿಸಿರುವ ಹಗರಣ
2017-18 ಮತ್ತು 2018-19 ರ 17 ತಿಂಗಳ ಅವಧಿಯಲ್ಲಿ 189 ಇಂದಿರಾ ಕ್ಯಾಂಟೀನ್ ಗಳಲ್ಲಿ ಪ್ರತೀ ತಿಂಗಳು ಸರಾಸರಿ 27,03,200 ಮಂದಿ ಬೆಳಗಿನ ಉಪಹಾರವನ್ನು, 24,11,800 ಮಂದಿ ಮಧ್ಯಾಹ್ನದ ಊಟವನ್ನು ಮತ್ತು 11,55,500 ಮಂದಿ ರಾತ್ರಿಯ ಊಟವನ್ನು ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಗಳನ್ನು ನೀಡಿ, ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ 17 ತಿಂಗಳ ಅವಧಿಯಲ್ಲಿ 560 ಕೋಟಿ ರೂಪಾಯಿ ಹಣವನ್ನು ಕಬಳಿಸಲಾಗಿದೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವ ಕೆ. ಜೆ. ಜಾರ್ಜ್, ಪಾಲಿಕೆಯ ಹಣಕಾಸು ವಿಭಾಗದ ಹಿಂದಿನ ಜಂಟಿ ಆಯುಕ್ತರಾಗಿದ್ದ ಮನೋಜ್ ರಾಜನ್ ಎಂಬ IFS ಅಧಿಕಾರಿ, M/s Cheftalk ಮತ್ತು M/s Rewards ಸಂಸ್ಥೆಗಳು
2.ಬಿಬಿಎಂಪಿ ವ್ಯಾಪ್ತಿಯ 439 ಬಸ್ ತಂಗುದಾಣಗಳಲ್ಲಿ ಕಾನೂನು ಬಾಹಿರವಾಗಿ ಮತ್ತು ಪಾಲಿಕೆಗೆ ನಿಯಮಾನುಸಾರ ಪಾವತಿಸಬೇಕಾಗಿದ್ದ 68.15 ಕೋಟಿ ರೂಪಾಯಿಗಳಷ್ಟು ಜಾಹೀರಾತು ಶುಲ್ಕವನ್ನು ಪಾವತಿಸದೇ ತಮ್ಮ ಸರ್ಕಾರದ ಸಾಧನೆಗಳ ಪ್ರಚಾರ ಕಾರ್ಯಗಳಿಗೆ ಬಳಸಿಕೊಂಡಿದ್ದ 68.15 ಕೋಟಿ ಜಾಹಿರಾತು ಶುಲ್ಕ ವಂಚನೆ ಹಗರಣ.
2015-16 ರಿಂದ 2016-17 ರವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಪಾಲಿಕೆ ವ್ಯಾಪ್ತಿಯ ಒಟ್ಟು 439 ಬಸ್ ತಂಗುದಾಣಗಳನ್ನು ತನ್ನ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುವ ಸಲುವಾಗಿ ಬಳಸಿಕೊಂಡಿರುವ ಸಿದ್ಧರಾಮಯ್ಯ ನೇತೃತ್ವದ ಅಂದಿನ ರಾಜ್ಯ ಸರ್ಕಾರವು ನಿಯಮಾನುಸಾರ ಪಾಲಿಕೆಗೆ ಪಾವತಿಸಬೇಕಿದ್ದ 68.15 ಕೋಟಿ ಜಾಹಿರಾತು ಶುಲ್ಕವನ್ನು ವಂಚಿಸಲಾಗಿದೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ K. J. ಜಾರ್ಜ್, 2015-16 ಮತ್ತು 2016-17 ರ ಸಾಲುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು
3.ದೇಶದ ಬೆನ್ನೆಲುಬು ಎಂದೇ ಕರೆಯಲಾಗುವ ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಳೆ ಆಧಾರಿತ ಕೃಷಿ ಭೂಮಿಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿ ರೈತರಿಗೆ ಸಹಾಯ ಮಾಡುವ “ಕೃಷಿ ಭಾಗ್ಯ” ಯೋಜನೆಯ ಹೆಸರಿನಲ್ಲಿ ನಡೆದಿರುವ 800 ಕೋಟಿ ರೂಪಾಯಿಗಳ ಹಗರಣ.
“ಕೃಷಿ ಭಾಗ್ಯ” ಯೋಜನೆಯಲ್ಲಿ 2014-15 ರಿಂದ 2017-18 ರ 04 ವರ್ಷಗಳ ಅವಧಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಉಚಿತವಾಗಿ ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 2,15,130 ಕ್ಕೆ “ಕೃಷಿ ಹೊಂಡ”ಗಳ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದಂತೆ “ಪಾಲಿಥೀನ್ ಹೊದಿಕೆ”, “ಡೀಸಲ್ ಪಂಪ್ ಸೆಟ್”ಗಳ ಅಳವಡಿಕೆ, “ಲಘು ನೀರಾವರಿ” ಕಾರ್ಯ, “ಕೃಷಿ ಹೊಂಡದ ಸುತ್ತಲೂ ನೆರಳು ಪರದೆ”ಗಳ ನಿರ್ಮಾಣ ಕಾರ್ಯಗಳ ಅನುಷ್ಠಾನದ ಹೆಸರಿನಲ್ಲಿ 800 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಕೃಷಿ ಸಚಿವ ಕೃಷ್ಣ ಭೈರೇಗೌಡ, ಕೃಷಿ ಇಲಾಖೆಯ ಆಯುಕ್ತರುಗಳಾಗಿದ್ದ ಪಾಂಡುರಂಗ ಬಿ. ನಾಯಕ್ ಮತ್ತು ಜಿ. ಸತೀಶ್ ಹಾಗೂ ಜಿಲ್ಲಾವಾರು ಉಸ್ತುವಾರಿ ಹೊಂದಿದ್ದ ಜಂಟಿ ನಿರ್ದೇಶಕರುಗಳು
4.ಬಿಬಿಎಂಪಿ ವ್ಯಾಪ್ತಿಯಲ್ಲಿ LED ಬೀದಿ ದೀಪಗಳ ಅಳವಡಿಕೆ ಯೋಜನೆಯ ಹೆಸರಿನಲ್ಲಿ ನಡೆದಿರುವ 1,600 ಕೋಟಿ ರೂಪಾಯಿಗಳ ಹಗರಣ
ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್ ಗಳ ವ್ಯಾಪ್ತಿಯಲ್ಲಿರುವ ಎಲ್ಲಾ ವಿಧದ ರಸ್ತೆಗಳಲ್ಲಿರುವ ಒಟ್ಟು 5,30,000 ಬೀದಿ ದೀಪಗಳನ್ನು ಬದಲಿಸಿ LED ಬೀದಿ ದೀಪಗಳನ್ನು ಅಳವಡಿಸುವ ಯೋಜನೆಯ ಹೆಸರಿನಲ್ಲಿ ಈ ಯೋಜನೆಗೆ ಸಂಬಂಧವೇ ಇಲ್ಲದ ಸಂಸ್ಥೆಗೆ ಗುತ್ತಿಗೆ ನೀಡುವ ಮೂಲಕ 1,600 ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವ ಕೆ. ಜೆ. ಜಾರ್ಜ್,
5.Karnataka State AIDS Prevention Society (KSAPS) ಯ ಮೂಲಕ ನಡೆದಿರುವ ನೂರಾರು ಕೋಟಿ ಮೊತ್ತದ ಹಣ ದುರ್ಬಳಕೆ ಹಗರಣ
2014-15 ಮತ್ತು 2015-16 ರ ಅವಧಿಯಲ್ಲಿ KSAPS ಮೂಲಕ AIDS ಪೀಡಿತ ಬಾಲಕ / ಬಾಲಕಿಯರು, ಮಹಿಳೆಯರು, ಪುರುಷರು, ಮಂಗಳಮುಖಿಯರನ್ನು Rehabilitation ಕೇಂದ್ರಗಳಿಗೆ ಸೇರಿಸಿ, ಅವರಿಗೆ ಸೂಕ್ತ ಚಿಕಿತ್ಸೆ – ಔಷಧಿಗಳನ್ನು ಒದಗಿಸುವುದಲ್ಲದೇ ತಜ್ಞ ವೈದ್ಯರುಗಳಿಂದ / ಮಾನಸಿಕ ತಜ್ಞ ರಿಂದ Counseling ಮಾಡಿಸಿ ಅವರೆಲ್ಲರನ್ನು ಲೈಂಗಿಕ ಚಟುವಟಿಕೆಗಳಿಂದ ಸಾಧ್ಯವಿದ್ದಷ್ಟೂ ದೂರವಿಡುವ ಯೋಜನೆಯ ಹೆಸರಿನಲ್ಲಿ ನೂರಾರು ಕೋಟಿ ಮೊತ್ತದ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಆರೋಗ್ಯ ಸಚಿವ ಯು. ಟಿ. ಖಾದರ್, KSAPS ಸಂಸ್ಥೆಯ ಜಂಟಿ ನಿರ್ದೇಶಕರಾಗಿದ್ದ ಡಾ|| ಲೀಲಾ ಸಂಪಿಗೆ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು
6.ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಹೆಸರಿನಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ನಡೆದಿರುವ ನೂರಾರು ಕೋಟಿ ರೂಪಾಯಿಗಳ ಹಗರಣ
2013-14 ರಿಂದ 2016-17 ರ ಅವಧಿಯಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಮೂಲಕ ದುಬಾರಿ ವೆಚ್ಚದ ಚಿಕಿತ್ಸೆಗಳು ಅಗತ್ಯವಿರುವಂತಹ ಮಾರಣಾಂತಿಕ ಖಾಯಿಲೆಗಳಾದ a) ಹೃದಯ ರೋಗ b) ಕ್ಯಾನ್ಸರ್ c) ಮೂತ್ರ ಪಿಂಡ ವೈಫಲ್ಯ d) ನರ ರೋಗ e) ಗಂಭೀರ ಅಪಘಾತ f) ಸುಟ್ಟಗಾಯಗಳು ಮತ್ತು g) ನವಜಾತ ಶಿಶುಗಳ ಖಾಯಿಲೆಗಳಂತಹ ಒಟ್ಟು ಏಳು ವಿಧವಾದ ಚಿಕಿತ್ಸೆಗಳನ್ನು Super Speciality Hospital ಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ನೀಡುವ ಸಲುವಾಗಿ ಒಟ್ಟು ನಾಲ್ಕು ರೀತಿಯ ವಿವಿಧ ಯೋಜನೆಗಳಾದ ‘ವಾಜಪೇಯಿ ಆರೋಗ್ಯ ಶ್ರೀ’ ಯೋಜನೆ, ‘ರಾಜೀವ್ ಆರೋಗ್ಯ ಭಾಗ್ಯ’ ಯೋಜನೆ, ‘ಜ್ಯೋತಿ ಸಂಜೀವಿನಿ’ ಯೋಜನೆ, ‘ರಾಷ್ಟ್ರೀಯ ಬಾಲ ಸ್ವಾಸ್ತ್ಯ ಕಾರ್ಯಕ್ರಮ’ ಯೋಜನೆಗಳ ಅನುನಷ್ಠಾನದ ಹೆಸರಿನಲ್ಲಿ ನೂರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಲಾಗಿದೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಸಚಿವ ಯು. ಟಿ. ಖಾದರ್, 2013-14 ರಿಂದ 2016-14 ರವರೆಗೆ ಕಾರ್ಯಕಾರಿ ನಿರ್ದೇಶಕರಾಗಿದ್ದ ಡಾ|| ಪಿ. ಬೋರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ IAS ಅಧಿಕಾರಿ ಅತುಲ್ ಕುಮಾರ್ ತಿವಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಮತ್ತು ಟ್ರಸ್ಟ್ ನ Executive Trustee ಆಗಿದ್ದ ಮಾಜಿ IAS ಅಧಿಕಾರಿ ವಸ್ತ್ರದ್ ಸೇರಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿದ್ದ ಭ್ರಷ್ಟ ಅಧಿಕಾರಿಗಳು
7.ಬಿಬಿಎಂಪಿ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಆಯ್ದ 200 ಪ್ರಮುಖ ಸ್ಥಳಗಳಲ್ಲಿ ತಲಾ 02 ರಂತೆ Under Ground Dust Bin ಗಳನ್ನು ಅಳವಡಿಸುವ ಯೋಜನೆಯ ಹೆಸರಿನಲ್ಲಿ ನಡೆದಿರುವ 40 ಕೋಟಿ ರೂಪಾಯಿಗಳಷ್ಟು ಲೂಟಿ ಮಾಡಿರುವ ಹಗರಣ
2015-16 ಮತ್ತು 2016-17 ರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಆಯ್ದ 200 ಪ್ರಮುಖ ಸ್ಥಳಗಳಲ್ಲಿ ತಲಾ 02 ರಂತೆ Under Ground Dust Bin ಗಳನ್ನು ಅಳವಡಿಸಿ, ಈ ಡಬ್ಬಗಳಲ್ಲಿ ಸಂಗ್ರಹವಾಗುವ ತ್ಯಾಜ್ಯಗಳನ್ನು ಹೊತ್ತೊಯ್ಯುವಂತಹ ಕ್ರೇನ್ ಗಳನ್ನು ಒಳಗೊಂಡಂತಹ 08 ಟ್ರಕ್ ಗಳು, ಕಸದ ಡಬ್ಬಗಳ ಕಾರ್ಯ ಮತ್ತು ನಿರ್ವಹಣೆ, ಸಂಗ್ರಹವಾದ ತ್ಯಾಜ್ಯಗಳನ್ನು ಖಾಲಿ ಮಾಡಿ ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಸಾಗಣೆ ಹೆಸರಿನಲ್ಲಿ 60 ತಿಂಗಳಲ್ಲಿ ಈ 200 ಡಬ್ಬಗಳಲ್ಲಿ 5,40,200 ಮೆಟ್ರಿಕ್ ಟನ್ ಗಳಷ್ಟು ತ್ಯಾಜ್ಯ ಸಂಗ್ರಹವಾಗುತ್ತದೆ ಹಾಗೂ ಪ್ರತೀ ನಿತ್ಯ ಕೇವಲ ಈ 200 ಡಬ್ಬಗಳಿಂದ ಮಾತ್ರವೇ ಸರಾಸರಿ 296 ಮೆಟ್ರಿಕ್ ಟನ್ಗಘಳಷ್ಟು ತ್ಯಾಜ್ಯವನ್ನು ಸಾಗಿಸಲಾಗುತ್ತದೆ ಎಂಬ ನಂಬಲಸಾಧ್ಯವಾದ ಅಂಕಿ ಅಂಶಗಳನ್ನು ನೀಡಿ 40 ಕೋಟಿ ರೂಪಾಯಿಗಳಷ್ಟು ಹಣವನ್ನು ಲೂಟಿ ಮಾಡಲಾಗಿದೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಸಚಿವ K. J. ಜಾರ್ಜ್, ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಇಲಾಖೆಯ ಅಂದಿನ ಕಾರ್ಯಪಾಲಕ ಅಭಿಯಂತರರು, M/s Zonta Infratech Pvt. Ltd. ಸಂಸ್ಥೆಯ ಮುಖ್ಯಸ್ಥರು
- ಪ್ರಧಾನ ಮಂತ್ರಿ ನರೇಂದ್ರ ಮೋದಿರವರ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನದ ಹೆಸರಿನಲ್ಲಿ ಕಾನೂನುಬಾಹಿರವಾಗಿ ಅನುದಾನದ ದುರ್ಬಳಕೆ ಮಾಡಿಕೊಂಡಿರುವ ನೂರಾರು ಕೋಟಿ ರೂಪಾಯಿಗಳ ಹಗರಣ.
“ಸ್ವಚ್ಛ ಭಾರತ ಅಭಿಯಾನದ ಅನುದಾನವನ್ನು ಶೌಚಾಲಯಗಳ ನಿರ್ಮಾಣ, ಜೈವಿಕ ಅನಿಲ ಘಟಕಗಳ ನಿರ್ವಹಣೆ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳ ಸುತ್ತಲಿನ ಪ್ರದೇಶಗಳ ಮೂಲಭೂತ ಸೌಕರ್ಯಗಳ ಕಾರ್ಯಗಳಿಗೆಂದು ಮಾತ್ರ ಬಳಸಿಕೊಳ್ಳಬೇಕಿರುವ ಅನುದಾನವನ್ನು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ – ರಸ್ತೆಗಳ ಅಭಿವೃದ್ಧಿ ಕಾರ್ಯಗಳು, ಪಾದಚಾರಿ ಮಾರ್ಗಗಳ ಅಭಿವೃದ್ಧಿ ಕಾರ್ಯಗಳು, ಚರಂಡಿ ಅಭಿವೃದ್ಧಿ ಕಾರ್ಯಗಳು, ವ್ಯಾಯಾಮ ಸಲಕರಣೆಗಳ ಅಳವಡಿಕೆ, ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಪೂರೈಕೆ, ವಿದ್ಯುತ್ ದೀಪಗಳ ಅಳವಡಿಕೆ, ಉದ್ಯಾನವನಗಳ ಅಭಿವೃದ್ಧಿ ಮತ್ತು ಕಟ್ಟಡಗಳ ನಿರ್ಮಾಣ ಕಾರ್ಯಗಳಿಗೆಂದು ಬಿಡುಗಡೆ ಮಾಡುವ ಮೂಲಕ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಅನುದಾನವನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಸಚಿವರಾದ ಕೃಷ್ಣ ಭೈರೇಗೌಡ, ಎಂ. ಕೃಷ್ಣಪ್ಪ ಮತ್ತು ಅಂದಿನ ಶಾಸಕರುಗಳಾದ ಪ್ರಿಯಾ ಕೃಷ್ಣ, ಎನ್. ಎ. ಹ್ಯಾರೀಸ್, ದಿನೇಶ್ ಗುಂಡೂರಾವ್, ಜ಼ಮೀರ್ ಅಹಮದ್, 2016-17 ಮತ್ತು 2017-18 ರ ಸಾಲುಗಳಲ್ಲಿ ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸಿರುವ ಜಂಟಿ ಆಯುಕ್ತರು (ಆರೋಗ್ಯ), ಮುಖ್ಯ ಅಭಿಯಂತರರು (SWM) ಹಾಗೂ ಪಾಲಿಕೆಯ ಘನತ್ಯಾಜ್ಯ ವಿಲೇವಾರಿ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು
9.ವಿಶ್ವೇಶ್ವರಯ್ಯ ಜಲ ನಿಗಮದ ಕಾಮಗಾರಿಯೊಂದರ ಹೆಸರಿನಲ್ಲಿ ನಕಲಿ Work Done Certificate ಗಳನ್ನು ಪಡೆದು ಪೂರ್ವ ನಿಗದಿತ ಗುತ್ತಿಗೆದಾರರಿಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಿರುವ 158 ಕೋಟಿ ಮೊತ್ತದ ಹಗರಣ
ವಿಶ್ವೇಶ್ವರಯ್ಯ ಜಲ ನಿಗಮವು 2017-18 ರಲ್ಲಿ “2.9 ಕಿ. ಮೀ. ಉದ್ದದ ಚಿತ್ರದುರ್ಗ ಶಾಖಾ ನಾಲೆಯ ನಿರ್ಮಾಣದ ಹೆಸರಿನಲ್ಲಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೆಯಲ್ಲಿ ಕೇವಲ 02 ಗುತ್ತಿಗೆದಾರ ಸಂಸ್ಥೆಗಳು ಮಾತ್ರ ಭಾಗವಹಿಸುವ ಅವಕಾಶವನ್ನು ಒದಗಿಸಲಾಗಿರುತ್ತದೆ.
ಈ ಎರಡೂ ಸಂಸ್ಥೆಗಳು ಲಗತ್ತಿಸಿರುವ Work Done Certificate ಗಳು ನಕಲಿ Certificate ಗಳಾಗಿದ್ದು, ಪರಸ್ಪರ 628 ಕಿ. ಮಿ. ಅಂತರವಿರುವ ತ್ರಿಪುರ ಮತ್ತು ಮಣಿಪುರ ರಾಜ್ಯಗಳ ವಿವಿಧ ಸಂಸ್ಥೆಗಳ ಹೆಸರಿನಲ್ಲಿ ಸಲ್ಲಿಸಲಾಗಿರುವ ಈ ಎರಡೂ ಸಂಸ್ಥೆಗಳ Work Done Certificate ಗಳಲ್ಲಿ ಸಹಿ ಮಾಡಿರುವ ಕಾರ್ಯಪಾಲಕ ಅಭಿಯಂತರರು (Executive Engineer) ಗಳ ಸಹಿ ಒಂದೇ ಆಗಿದೆ.
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಜಲ ಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ್, 2017-18 ರ ಸಾಲಿನಲ್ಲಿ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಾಗಿದ್ದ ಚೆಲುವರಾಜು ಮತ್ತು ಕೃಷ್ಣಮೂರ್ತಿ, ಗುತ್ತಿಗೆದಾರರಾದ M/s. National Projects Construction Corporation Limited ಸಂಸ್ಥೆಯ ಮುಖ್ಯಸ್ಥರು ಮತ್ತು ಇತರೆ ಕಾಮಗಾರಿಗಳ ಹೊಣೆಯನ್ನು ಹೊತ್ತಿರುವ ಗುತ್ತಿಗೆದಾರರು
10.ರಾಬರ್ಟ್ ವಾದ್ರಾ ಪಾಲುದಾರಿಕೆಯ DLF ಸಂಸ್ಥೆಯು ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಗಂಗೇನಹಳ್ಳಿ ಗ್ರಾಮದ ಸರ್ವೆ ನಂಬರ್ 01 ರಿಂದ 99, ವರ್ತೂರು ಗ್ರಾಮದ ಸರ್ವೆ ನಂಬರ್ 07, 08, 09, 10, ವರ್ತೂರು ನರಸೀಪುರ ಗ್ರಾಮದ ಸರ್ವೆ ನಂಬರ್ 01 ರಿಂದ 35 ಮತ್ತು ಪೆದ್ದನಪಾಳ್ಯ ಗ್ರಾಮದ ಸರ್ವೆ ನಂಬರ್ 17, 18, 19, 20 ರಲ್ಲಿರುವ ಸುಮಾರು ₹. 9,600 ಕೋಟಿ ರೂಪಾಯಿಗಳಿಗೂ ಹೆಚ್ಚು ಬೆಲೆಬಾಳುವ 1,100 ಎಕರೆ ಸರ್ಕಾರೀ ಸ್ವತ್ತುಗಳನ್ನು ಕಬಳಿಸಿರುವ ಬೆಂಗಳೂರಿನ ಬೃಹತ್ ಭೂ ಕಬಳಿಕೆ ಹಗರಣ
ಹಗರಣದಲ್ಲಿ ಭಾಗಿಯಾಗಿರುವವರ ವಿವರ
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಬರ್ಟ್ ವಾದ್ರಾ ಸೇರಿದಂತೆ DLF ಸಂಸ್ಥೆಯ ಮುಖ್ಯಸ್ಥರು / ನಿರ್ದೇಶಕರು / ಸದಸ್ಯರು / ಪಾಲುದಾರರು, 2013 ರಿಂದ 2018 ರ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾಗಿದ್ದ ವಿ. ಶಂಕರ್ ಸೇರಿದಂತೆ ಅಪರ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಸೀಲ್ದಾರ್ ಗಳು, ಉಪ ತಹಸೀಲ್ದಾರ್ ಗಳು, ಕಂದಾಯ ಅಧಿಕಾರಿಗಳು, ನಾಲ್ಕು ಗ್ರಾಮಗಳ ಲೆಕ್ಕಿಗರುಗಳು ಹಾಗೂ ತಾವರೆಕೆರೆ ಉಪ ನೊಂದಣಾಧಿಕಾರಿಗಳು
ಈ ಎಲ್ಲಾ ಹಗರಣಗಳಿಗೆ ಸಂಬಂಧಿಸಿದಂತೆ 3,728 ಪುಟಗಳ ಸಂಪೂರ್ಣ ದಾಖಲೆಗಳ ಸಹಿತವಾಗಿ ಲೋಕಾಯುಕ್ತದಲ್ಲಿ 10 ದೂರುಗಳನ್ನು ಎಲ್ಲ ಭ್ರಷ್ಟ ರಾಜಕಾರಣಿಗಳು ಮತ್ತು ವಂಚಕ ಅಧಿಕಾರಿಗಳ ವಿರುದ್ಧ ದಾಖಲಿಸಲಾಗಿದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ 07 ಪ್ರಕರಣಗಳು, ಮಾಜಿ ಸಚಿವ ಕೆ. ಜೆ. ಜಾರ್ಜ್ ವಿರುದ್ಧ 04 ದೂರುಗಳು, ಮಾಜಿ ಸಚಿವ ಯು. ಟಿ. ಖಾದರ್, ಜ಼ಮೀರ್ ಅಹಮದ್ ಹಾಗೂ ಕೃಷ್ಣ ಭೈರೇಗೌಡ ವಿರುದ್ಧ ತಲಾ 02 ದೂರುಗಳು ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ್, ದಿನೇಶ್ ಗುಂಡೂರಾವ್, ಎಂ. ಕೃಷ್ಣಪ್ಪ, ಶಾಸಕರಾದ ಎನ್. ಎ. ಹ್ಯಾರೀಸ್ ಹಾಗೂ ಮಾಜಿ ಶಾಸಕ ಪ್ರಿಯಾ ಕೃಷ್ಣ ರವರುಗಳ ವಿರುದ್ಧ ತಲಾ 01 ದೂರುಗಳನ್ನು ದಾಖಲಿಸಲಾಗಿದೆ ಎಂದು ಎನ್ ಆರ್ ರಮೇಶ್ ಹೇಳಿದ್ದಾರೆ.
ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ನಕಲಿ ದಾಖಲೆ ತಯಾರಿಕೆ ಮತ್ತು ಸರ್ಕಾರಿ ಭೂ ಕಬಳಿಕೆ ಪ್ರಕರಣಗಳು ದಾಖಲಾಗಿದೆ. ಮುಖ್ಯಮಂತ್ರಿಗಳಿಗೆ ಖುದ್ದಾಗಿ ಎಲ್ಲಾ 10 ಹಗರಣಗಳ ಬಗ್ಗೆ ಸಂಪೂರ್ಣ ದಾಖಲೆಗಳ ಸಹಿತ ದೂರು ನೀಡಿ, ಎಲ್ಲಾ 10 ಹಗರಣಗಳ ತನಿಖೆಯನ್ನು CID ತನಿಖೆಗೆ ಅಥವಾ ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ವಹಿಸಬೇಕೆಂದು ಎನ್ .ಆರ್ ರಮೇಶ್ ಆಗ್ರಹಿಸಿದ್ದಾರೆ.
Key words: Complaint – Lokayukta – 10 scams – Siddaramaiah’s- tenure – NR Ramesh.