ಬೆಂಗಳೂರು: ಜುಲೈ-9: ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಹಂತದಲ್ಲಿ ನಡೆಯುವ ಅಕ್ರಮಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಭಾರಿ ಬದಲಾವಣೆ ತರಲು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆಗಳ ಹಂಚಿಕೆಗೆ ಕಂಪ್ಯೂಟರ್ ಬಳಸಿಕೊಳ್ಳಲಾಗುತ್ತಿದೆ.
ಈ ವ್ಯವಸ್ಥೆಯಲ್ಲಿ ಯಾವ ವಿದ್ಯಾರ್ಥಿಯ ಉತ್ತರಪತ್ರಿಕೆ ಯಾವ ಮೌಲ್ಯಮಾಪಕರಿಗೆ ಹೋಗಲಿದೆ ಎಂದು ತಿಳಿಯವುದಿಲ್ಲ. ಈ ಕ್ರಮದಿಂದಾಗಿ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ನಡೆಯುವ ಅಕ್ರಮಗಳಿಗೆ ಸುಲಭವಾಗಿ ಬ್ರೇಕ್ ಹಾಕಬಹುದು.
ಇಷ್ಟು ದಿನ ವಿದ್ಯಾರ್ಥಿಗಳ ವಿವರ ಇರುವ ಉತ್ತರಪತ್ರಿಕೆಯನ್ನು ಮೌಲ್ಯಮಾಪಕರಿಗೆ ನೀಡಲಾಗುತ್ತಿತ್ತು. ಇದರಲ್ಲಿ ವಿದ್ಯಾರ್ಥಿಯ ಹೆಸರು, ನೋಂದಣಿ ಸಂಖ್ಯೆ ಎಲ್ಲವೂ ಇರುತ್ತಿತ್ತು. ಇದರಿಂದಾಗಿ ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಮೌಲ್ಯ ಮಾಪಕರನ್ನು ಸಂರ್ಪಸಿ ಹೆಚ್ಚಿನ ಅಂಕಗಳನ್ನು ಹಾಕಿಸಿಕೊಳ್ಳುವ ಸಾಧ್ಯತೆ ಇತ್ತು. ಆದರೆ, ಇನ್ನು ಮುಂದೆ ಇದು ಸಾಧ್ಯವಿಲ್ಲ. ಉತ್ತರ ಪತ್ರಿಕೆಯ ಮುಖಪುಟ ಹರಿದು ಆನಂತರ ಮೌಲ್ಯಮಾಪನಕ್ಕೆ ಕಳುಹಿಸಲಾಗುತ್ತದೆ. ಈ ಉತ್ತರ ಪತ್ರಿಕೆಗಳ ಗೌಪ್ಯತೆ ಕಾಯ್ದುಕೊಳ್ಳಲು ಗಣಕೀಕೃತ ವ್ಯವಸ್ಥೆ ಅಳವಡಿಸಿಕೊಳ್ಳಲಾಗುತ್ತಿದೆ.
ಕಾರ್ಯ ವಿಧಾನ: ವಿದ್ಯಾರ್ಥಿಯಿಂದ ಪಡೆದ ಉತ್ತರ ಪತ್ರಿಕೆಯನ್ನು ನೇರವಾಗಿ ಮೌಲ್ಯಮಾಪನಕ್ಕೆ ಕಳುಹಿಸುವ ಬದಲು ಎರಡು ಡಮ್ಮಿ ನಂಬರ್ಗಳನ್ನು ಸೃಷ್ಟಿಸಲಾಗುತ್ತದೆ.
ಒಂದು ಸಂಖ್ಯೆಯನ್ನು ಮುಖಪುಟಕ್ಕೆ ಮತ್ತೊಂದನ್ನು ಉತ್ತರಪತ್ರಿಕೆಗೆ ಅಂಟಿಸಲಾಗುತ್ತದೆ. ಮುಖಪುಟ ಹೊರತಾದ ಉತ್ತರಪತ್ರಿಕೆಯನ್ನು ಮೌಲ್ಯಮಾಪನಕ್ಕೆ ಕಳುಹಿಸಲಾಗುತ್ತದೆ. ಇದರಿಂದಾಗಿ ಮೌಲ್ಯಮಾಪಕರಿಗೆ ಯಾವ ವಿದ್ಯಾರ್ಥಿಯ ಪತ್ರಿಕೆ ಎಂಬುದು ತಿಳಿಯುವುದಿಲ್ಲ. ಮೌಲ್ಯಮಾಪನವಾದ ನಂತರ ಡಮ್ಮಿ ನಂಬರ್ ತಾಳೆ ಹಾಕಿ ಉತ್ತರಪತ್ರಿಕೆ ಜೋಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಜಾರಿಗೆ ತರಲು ಮುಂದಾಗಿರುವ ಈ ಗಣಕಾಧಾರಿತ ಹಂಚಿಕೆಯನ್ನು ಈಗಾಗಲೇ ಬೆಂಗಳೂರು ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಅನುಷ್ಠಾನಗೊಳಿಸಿ ಯಶಸ್ವಿಯಾಗಿವೆ. ಈ ಹೊಸ ಪದ್ಧತಿಯನ್ನು 2020ರ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪ್ರಕ್ರಿಯೆಯಿಂದಲೇ ಜಾರಿಗೊಳಿಸಲು ಮಂಡಳಿ ಸಕಲ ಸಿದ್ಧತೆ ನಡೆಸುತ್ತಿದೆ.
ಸರಳೀಕೃತ ವ್ಯವಸ್ಥೆ: ಉತ್ತರಪತ್ರಿಕೆಗಳ ಸಂಗ್ರಹಕ್ಕೂ ಸರಳೀಕೃತ ವ್ಯವಸ್ಥೆ ಜಾರಿಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದೆ. ಉತ್ತರ ಪತ್ರಿಕೆ ನಿರ್ವಹಣೆ ಹಾಗೂ ದಾಸ್ತಾನಿನಲ್ಲೂ ತಂತ್ರಜ್ಞಾನ ಅಳವಡಿಸಿಕೊಳ್ಳುವ ಜತೆಗೆ ವರ್ಟಿಕಲ್ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಜೋಡಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಮಂಡಳಿ ಲೋಕೋಪಯೋಗಿ ಇಲಾಖೆಯಿಂದ ವಿಸõತ ಯೋಜನಾ ವರದಿ ಪಡೆಯಲು ತೀರ್ವನಿಸಿದೆ. ಪ್ರತಿ ವರ್ಷ 3 ಸಾವಿರ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯತ್ತಿದ್ದು, 8 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಇವರಿಂದ ಅಂದಾಜು 48 ಲಕ್ಷ ಉತ್ತರ ಪತ್ರಿಕೆಗಳು ಸಂಗ್ರಹವಾಗುತ್ತವೆ.
| ದೇವರಾಜ್. ಎಲ್.
ಮೌಲ್ಯಮಾಪನ ಸುಧಾರಣೆಗೆ ಹಲವು ಕ್ರಮವಹಿಸಲು ಮಂಡಳಿ ಮುಂದಾಗಿದೆ. ಇವೆಲ್ಲವೂ ಇನ್ನೂ ಪ್ರಾಥಮಿಕ ಹಂತದಲ್ಲಿರುವುದರಿಂದ ಹೆಚ್ಚಿನ ವಿಚಾರಗಳನ್ನು ಹೇಳಲು ಸಾಧ್ಯವಿಲ್ಲ.
| ವಿ. ಸುಮಂಗಲಾ, ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ
ಕೃಪೆ:ವಿಜಯವಾಣಿ