ಖ್ಯಾತ ಇತಿಹಾಸಕಾರ, ಹಿರಿಯ ಪತ್ರಕರ್ತ ಈಚನೂರು ಕುಮಾರ್ ನಿಧನಕ್ಕೆ ಗಣ್ಯರ ಸಂತಾಪ

ಮೈಸೂರು,ಜುಲೈ,20,2024 (www.justkannada.in): ಖ್ಯಾತ ಇತಿಹಾಸಕಾರ, ಹಿರಿಯ ಪತ್ರಕರ್ತ ಈಚನೂರು ಕುಮಾರ್ ಅವರು ಇಂದು ನಿಧನರಾಗಿದ್ದು, ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈಚನೂರು ಕುಮಾರ್  ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಮಾಧ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕಳೆದ ಕೆಲ ಸಮಯದಿಂದ ವಯೋಸಹಜ ಆರೋಗ್ಯ ಸಮಸ್ಯೆ ಎದುರಾಗಿತ್ತು. ಈಚನೂರು ಕುಮಾರ್ ಅವರಿಗೆ ಅಕ್ಷರಾ ಹಾಗೂ ಅಜಿತ್ ಇಬ್ಬರು ಮಕ್ಕಳು. ಇವರಿಬ್ಬರು ಸಹ ಪತ್ರಕರ್ತರಾಗಿ ತಂದೆ ಹಾದಿಯಲ್ಲೇ ಸಾಗುತ್ತಿದ್ದಾರೆ.

ಪತ್ರಿಕಾರಂಗಕ್ಕೆ  ಕ್ಷೇತ್ರಕ್ಕೆ ತುಂಬಲಾರದ ನಷ್ಟ- ಶಾಸಕ ಜಿಟಿ ದೇವೇಗೌಡ

ಈಚನೂರು ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಶಾಸಕ ಜಿ.ಟಿ ದೇವೇಗೌಡ, ಮೈಸೂರು ಜಿಲ್ಲೆಯ ಖ್ಯಾತ ಇತಿಹಾಸಕಾರ, ಹಿರಿಯ ಪತ್ರಕರ್ತರಾದ ಈಚನೂರು ಕುಮಾರ್ ರವರ ನಿಧನ  ಪತ್ರಿಕಾರಂಗಕ್ಕೆ  ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಭಾರತ ಸಂವಿಧಾನ ಕುರಿತು ವಿಶೇಷ ಲೇಖನಗಳು ರಚಿಸಿದ ಇವರು ಪ್ರಜಾವಾಣಿ, ನವಧ್ವನಿ, ಮೈಸೂರು ಮಿತ್ರ, ಸ್ಟಾರ್ ಆಫ್ ಮೈಸೂರ್, ಕನ್ನಡ ಪ್ರಭ, ಮಹಾನಂದಿ, ಮೈಸೂರು ಪತ್ರಿಕೆ, ಪ್ರಜಾನುಡಿ, ಡೆಕ್ಕನ್ ನ್ಯೂಸ್ ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ, ಇವರು ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.  ಶ್ರೀಯುತರು ಸಮಾಜಕ್ಕೆ ಸಲ್ಲಿಸಿದ ಸೇವೆ ಪ್ರಶಂಸನೀಯ,  ಇವರ ನಿಧನ, ಅವರ ಕುಟುಂಬ ವರ್ಗಕ್ಕಷ್ಟೆ ಅಲ್ಲ, ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಮೈಸೂರು ರಾಜಮನೆತನದ ಇತಿಹಾಸವನ್ನು ಜನತೆ ತಿಳಿಸಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ.  ಪರಂಪರೆ, ಸಂಸ್ಕೃತಿ ಉಳಿವಿಗಾಗಿ ಹೋರಾಡಿದ ಇತಿಹಾಸಕಾರರಾದ ಈಚನೂರು ಕುಮಾರ್‌ ರವರ ನಿಧನದಿಂದ ಅವರ ಕುಟುಂಬ ವರ್ಗದವರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಆಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

   ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಸಂತಾಪ

ಮೈಸೂರಿನ ಪ್ರಾಚೀನ ಇತಿಹಾಸ, ಸಂಸ್ಕೃತಿಯ ಬಗ್ಗೆ ಆಳವಾದ ಅಧ್ಯಯನ, ಮಾಹಿತಿಯನ್ನೂ ಹೊಂದಿದ್ದ ಹಿರಿಯ ಪತ್ರಕರ್ತರಾಗಿದ್ದ ಈಚನೂರು ಕುಮಾರ್ ರವರ ನಿಧನಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯರಾದ ಡಾ.ಈ.ಸಿ.ನಿಂಗರಾಜ್ ಗೌಡರವರು ಸಂತಾಪ ಸೂಚಿಸಿದ್ದಾರೆ.

ಈಚನೂರು ಕುಮಾರ್ ರವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರಾಗಿದ್ದರು.  ಮೈಸೂರಿನ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆ ಬಗ್ಗೆ ತುಂಬಾ ಆಳವಾದ ತಿಳುವಳಿಕೆಯನ್ನೂ ಹೊಂದಿದ್ದರು.. ಹಲವೂ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸಿ, ಯುವ ಪತ್ರಕರ್ತರಿಗೆ ಮಾರ್ಗದರ್ಶಿಯಾಗಿದ್ದರು.

ಅವರ ಆತ್ಮಕ್ಕೆ ಭಗವಂತನೂ ಶಾಂತಿಯನ್ನೂ ನೀಡಲಿ ಮತ್ತು ಅವರ ಕುಟುಂಬ ವರ್ಗದವರಿಗೆ ಸಾವಿನ ನೋವನ್ನೂ ಭರಿಸುವ ಶಕ್ತಿಯನ್ನೂ ನೀಡಲೇಂದೂ ಡಾ.ಈ.ಸಿ. ನಿಂಗರಾಜ್ ಗೌಡ ಅವರು ಪ್ರಾರ್ಥಿಸಿದ್ದಾರೆ.

ಈಚನೂರು ಕುಮಾರ್ ಸಾಮಾಜಿಕ ಕಳಕಳಿಯ ಒಬ್ಬ ನಿಸ್ಪೃಹ ವ್ಯಕ್ತಿ- ದತ್ತಾತ್ರೇಯ ಹೊಸಬಾಳೆ

ನನ್ನ ಬಹುಕಾಲದ ಮಿತ್ರ, ಸಂಘಟನೆಯ ಸಹಯಾತ್ರಿ ಈಚನೂರು ಕುಮಾರ್ ಅವರ ನಿಧನದ ವಾರ್ತೆ ಕೇಳಿ ಅತೀವ ಆಘಾತವಾಯಿತು. ನಂಬಲಾಗದಂತಹ ಸುದ್ದಿ. ಅವರ ಕುಟುಂಬದ ಎಲ್ಲರಿಗೂ ತೀವ್ರ ಸಂತಾಪಗಳು. ಕುಮಾರ್ ಸಾಮಾಜಿಕ ಕಳಕಳಿಯ ಒಬ್ಬ ನಿಸ್ಪೃಹ ವ್ಯಕ್ತಿ. ಪ್ರಖರ ವೈಚಾರಿಕ ನಿಷ್ಠೆಯಿದ್ದೂ ತನ್ನ ಮತವನ್ನು ಹಾಗೂ ಮನದ ಇಂಗಿತವನ್ನು ಮೆಲುದನಿಯಲ್ಲಿ, ಸ್ಪಷ್ಟವಾಗಿ ಮುಂದಿಡುತ್ತಿದ್ದರು. ಬರಹವನ್ನೇ ಕಾಯಕವಾಗಿಸಿಕೊಂಡು ಅದರ ಮೂಲಕವೇ ಜ್ಞಾನ ಪ್ರಸಾರ, ವೈಚಾರಿಕತೆ, ಸಮಾಜ ಸಂವೇದನೆಗಳನ್ನು ಬಿತ್ತರಿಸಿದ ಅವರು ಒಬ್ಬ ಕರ್ಮಯೋಗಿ. ಈಚನೂರು ಕುಮಾರ್ ಅವರಿಲ್ಲವಾದುದು ನನಗೆ ಒಬ್ಬ ಹಿತೈಷಿ, ಸ್ನೇಹಿತ, ವಿಚಾರಯಾತ್ರೆಯ ಸಹಯಾತ್ರಿಯನ್ನು ಕಳೆದುಕೊಂಡಂತಾಗಿದೆ.

ಅವರ ಸ್ಮೃತಿಗೆ ನಮನಗಳು. ದೇವರು ಅವರ ಕುಟುಂಬಕ್ಕೆ ಈ ವಿಯೋಗದ ದುಃಖವನ್ನು ಭರಿಸುವ ಶಕ್ತಿಯನ್ನೂ ಕುಮಾರರ ಆತ್ಮಕ್ಕೆ ಸದ್ಗತಿಯನ್ನೂ ನೀಡಲಿ ಎಂದು ದತ್ತಾತ್ರೇಯ ಹೊಸಬಾಳೆ ಕಂಬನಿ ಮಿಡಿದಿದ್ದಾರೆ.

Key words: condolence, senior journalist, Echanur Kumar, death