ಬೆಂಗಳೂರು,ಜುಲೈ,14,2021(www.justkannada.in) ರಾಜ್ಯದ ಎಲ್ಲಾ ಕೆರೆಗಳು ಮತ್ತು ಬಫರ್ ಝೋನ್ ಗಳ ಸರ್ವೆ ನಡೆಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಹೈಕೋರ್ಟ್ ನಿರ್ದೇಶನ ನೀಡಿದೆ.
ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್. ಒಕಾ ಮತ್ತು ಜಸ್ಟೀಸ್ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಇದೇ ವೇಳೆ, ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರಕ್ಕೂ ನೋಟಿಸ್ ಜಾರಿ ಮಾಡಿದೆ.
ಕೆರೆ ಸುತ್ತ 30 ಮೀಟರ್ ಬಫರ್ ಝೋನ್ ನಿಗದಿಪಡಿಸಲಾಗಿದೆ. ರಾಜ್ಯಗಳ ಕೆರೆಗಳ ರಕ್ಷಣೆ ಸರ್ಕಾರದ ಹೊಣೆ. ಕೆರೆಗಳ ಒತ್ತುವರಿಯಾಗಿದ್ದರೆ ತೆರವುಗೊಳಿಸಬೇಕು. ಬಫರ್ ಝೋನ್ ನಲ್ಲಿನ ನಿರ್ಮಾಣಗಳನ್ನು ತೆರವುಗೊಳಿಸಬೇಕು ಎಂದು ಆದೇಶಿಸಿರುವ ಹೈಕೋರ್ಟ್, ಈ ಬಗ್ಗೆ ನಿರ್ದೇಶನ ನೀಡಲು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.
ಹಾಗೆಯೇ ಭೂ ಕಂದಾಯ ಕಾಯ್ದೆಯಡಿ ನಿರ್ದೇಶನಕ್ಕೆ ಆದೇಶಿಸಿರುವ ಹೈಕೋರ್ಟ್, ಅಕ್ರಮ ನಿರ್ಮಾಣಗಳ ತೆರವಿಗೆ ಪಾಲಿಕೆಗಳಿಗೂ ನಿರ್ದೇಶನ ನೀಡಿದೆ. ಮಾಲಿನ್ಯ ರಹಿತ ವಾತಾವರಣದಲ್ಲಿ ಬದುಕುವುದು ಹಕ್ಕು. ಕೆರೆಗಳು ನಮ್ಮ ಪರಿಸರದ ಒಂದು ಪ್ರಮುಖ ಭಾಗ . ಕೆರೆ ಪುನರುಜ್ಜೀವನ ಗೊಳಿಸದಿದ್ದರೆ ಈ ಹಕ್ಕು ಹರಣವಾದಂತೆ . ಹಾಗಾಗಿ ಕೆರೆಗಳನ್ನು ರಕ್ಷಿಸುವುದೂ ಎಲ್ಲರ ಕರ್ತವ್ಯ ಎಂದು ಕೋರ್ಟ್ ತಿಳಿಸಿದೆ.
Key words: Conduct -surveys – state – all -lakes – buffer zones- High Court –Direction