ಬೆಂಗಳೂರು, ಜುಲೈ,6, 2022 (www.justkannada.in): ಕರ್ನಾಟಕ ಸರ್ಕಾರದ ಇತ್ತೀಚಿನ ಪಠ್ಯಪುಸ್ತಕ ಪರಿಷ್ಕರಣೆ ವಿದ್ಯಾರ್ಥಿಗಳ ಅತ್ಯಮೂಲ್ಯ ಶೈಕ್ಷಣಿಕ ಸಮಯವನ್ನೇ ತಿಂದು ಹಾಕಿದೆ. ಜೊತೆಗೆ ಬೆಂಗಳೂರಿನಲ್ಲಿ ಅನುದಾನರಹಿತ ಶಾಲೆಗಳಿಗೆ ಇದು ದುಬಾರಿ ವ್ಯವಹಾರವಾಗಿಯೂ ಪರಿಣಮಿಸಿದೆ.
ಬೆಂಗಳೂರು ನಗರದ ಶಾಲೆಗಳ ಅಧಿಕಾರಿಗಳು ಮಾಧ್ಯಮದೊಂದಿಗೆ ಮಾತನಾಡಿ, ಪರಿಷ್ಕೃತ ಪಠ್ಯಪುಸ್ತಕಗಳ ಇನ್ನೂ ಒಂದು ಭಾಗ ಬರಬೇಕಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಕಳೆದ ಶೈಕ್ಷಣಿಕ ವರ್ಷದಲ್ಲಿ ಅವರು ಖರೀದಿಸಿದ್ದಂತಹ ಹಳೆಯ ಪಠ್ಯಪುಸ್ತಕಗಳ ಹೆಚ್ಚುವರಿ ಪ್ರತಿಗಳು ಈಗ ಹಳೆಯದಾಗಿದೆಯಂತೆ.
“ನಮಗೆ ಕಳೆದ ವರ್ಷ ಪಠ್ಯಪುಸ್ತಕಗಳ ಪರಿಷ್ಕರಣೆ ಕುರಿತು ಯಾವುದೇ ಮಾಹಿತಿ ನೀಡಿರಲಿಲ್ಲ. ಹಾಗಾಗಿ ನಾವು ಸಮಾಜ ವಿಜ್ಞಾನ ಹಾಗೂ ಕನ್ನಡ ಪಠ್ಯಪುಸ್ತಕಗಳನ್ನು ೫೦೦ ಹೆಚ್ಚುವರಿ ಪ್ರತಿಗಳನ್ನು ಖರೀದಿಸದ್ದೆವು. ಆದರೆ ಅವು ಈಗ ನಿರುಪಯುಕ್ತವಾಗಿವೆ,” ಎಂದು ಗುರುಕುಲ್ ಇಂಟರ್ ನ್ಯಾಷನಲ್ ಶಾಲೆಯ ಪ್ರಾಂಶುಪಾಲ ಎಂ.ಎನ್. ನಟೇಶ್ ಕುಮಾರ್ ತಿಳಿಸಿದ್ದಾರೆ.
ಶಾಲೆಗಳಲ್ಲಿ ಪರಿಷ್ಕೃತ ಪಠ್ಯ ಪುಸ್ತಕಗಳ ಹೆಚ್ಚಿನ ಪ್ರತಿಗಳ ಬೇಡಿಕೆ ಸೃಷ್ಟಿಯಾದರೆ, ಆನ್ ಲೈನ್ನಲ್ಲಿ ಬೇಡಿಕೆಗಳನ್ನು ಮಾಡಲು ಆನ್ ಲೈನ್ ಪೋರ್ಟಲ್ ಕಾರ್ಯನಿರ್ವಹಿಸುತ್ತಿಲ್ಲ. ಇಲಾಖೆ ನವೆಂಬರ್/ಡಿಸೆಂಬರ್ ನಲ್ಲಿ ಇಂಡೆಂಟ್ ಪಡೆಯುತ್ತವೆ ಎಂದಿದ್ದಾರೆ.
“ಕಳೆದ ವರ್ಷ ನವೆಂಬರ್ ನಲ್ಲಿ ನಾವು ಬೇಡಿಕೆ ನೀಡಿದಾಗ ನಮಗೆ ಈ ಪರಿಷ್ಕರಣೆಯ ಕುರಿತು ಮಾಹಿತಿ ನೀಡಲಿಲ್ಲ. ಹಾಗಾಗಿ ಕಳೆದ ವರ್ಷ ನಮ್ಮಲ್ಲಿ ಉಳಿದುಕೊಂಡಿದ್ದಂತಹ ಹೆಚ್ಚಿನ ಪ್ರತಿಗಳನ್ನು ಗಮನದಲ್ಲಿಟ್ಟುಕೊಂಡು ಈ ವರ್ಷ ಕಡಿಮೆ ಪ್ರತಿಗಳಿಗೆ ಬೇಡಿಕೆ ನೀಡಿದೆವು,” ಎನ್ನುತ್ತಾರೆ ನಗರದ ಮತ್ತೊಂದು ಶಾಲೆಯ ಪ್ರಾಂಶುಪಾಲರು.
ರಾಜ್ಯ ಶಿಕ್ಷಣ ಮಂಡಳಿಯಡಿ ಬರುವ ಅನುದಾನರಹಿತ ಹಾಗೂ ಅನುದಾನ ಸಹಿತ ಖಾಶಗಿ ಶಾಲೆಗಳಿಗೆ ಈ ಪಠ್ಯಪುಸ್ತಕಗಳನ್ನು ಕರ್ನಾಟಕ ಪಠ್ಯಪುಸ್ತಕಗಳ ಸಮಾಜ (ಕೆಟಿಬಿಎಸ್) ಮುದ್ರಿಸಿ ಕೊಡುತ್ತದೆ. ಅನುದಾನಸಹಿತ ಹಾಗೂ ಸರ್ಕಾರಿ ಶಾಲೆಗಳಿಗೆ ಪಠ್ಯಪುಸ್ತಕಗಳನ್ನು ಉಚಿತವಾಗಿ ಒದಗಿಸಲಾಗುತ್ತದೆ. ಆದರೆ ಅನುದಾನರಹಿತ ಶಾಲೆಗಳು ಅಗತ್ಯ ಪ್ರತಿಗಳ ಸಂಖ್ಯೆಯನ್ನು ಆಧರಿಸಿ, ಶೇ.೧೦ರಷ್ಟು ಮುಂಗಡ ಹಣವನ್ನು ಪಾವತಿಸಿ ಪುಸ್ತಕಗಳನ್ನು ಖರೀದಿಸಬೇಕಾಗುತ್ತದೆ. ಮೇಲಾಗಿ ತರಗತಿಗಳು ಆರಂಭವಾಗುವುದಕ್ಕೆ ಮುಂಚೆ ಉಳಿದ ಪೂರ್ತಿ ಹಣವನ್ನು ಪಾವತಿಸಬೇಕಾಗುತ್ತದೆ. ಬಹುಪಾಲು ಶಾಲೆಗಳು ಈಗಾಗಲೇ ಸಂಪೂರ್ಣ ಹಣವನ್ನು ಪಾವತಿಸಿವೆ.
ಒಂದು ವೇಳೆ ಕೆಟಿಬಿಎಸ್ ಹಳೆಯ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆದು ಅವುಗಳ ಸ್ಥಾನದಲ್ಲಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ನೀಡದಿದ್ದರೆ ನಮಗೆ ಬಹಳ ನಷ್ಟ ಉಂಟಾಗುತ್ತದೆ ಎನ್ನುವುದು ಅನೇಕ ಶಾಲೆಗಳ ಅಭಿಪ್ರಾಯವಾಗಿದೆ.
“ನಮಗೆ ಇದರಿಂದ ಸುಮಾರು ರೂ.೫೦,೦೦೦ ನಷ್ಟವುಂಟಾಗುತ್ತದೆ. ಹಾಗಾಗಿ ನಾವು ಹಳೆಯ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆದುಕೊಂಡು ಪರಿಷ್ಕೃತ ಪಠ್ಯವಿರುವ ಪುಸ್ತಕಗಳನ್ನು ನೀಡುವಂತೆ ಕೋರುತ್ತಿದ್ದೇವೆ. ಒಂದು ವೇಳೆ ಹಣ ವ್ಯತ್ಯಾಸ ಉಂಟಾದರೆ ಅದನ್ನು ಭರಿಸಲು ನಾವು ಸಿದ್ಧರಿದ್ದೇವೆ. ಆದರೆ ಸಂಪೂರ್ಣ ಹಣವನ್ನು ಪಾವತಿಸುವಂತೆ ನಮಗೆ ಬಲವಂತ ಮಾಡಬಾರದು. ಏಕೆಂದರೆ ಇದು ಸರ್ಕಾರದ ಲೋಪ. ಪಠ್ಯ ಪರಿಷ್ಕರಣೆಯ ಕುರಿತು ನಮಗೆ ಮೊದಲೇ ಮಾಹಿತಿ ನೀಡಿದ್ದರೆ ನಾವು ಬೇಡಿಕೆಗಳ ಕುರಿತು ಎಚ್ಚರಿಕೆ ವಹಿಸುತ್ತಿದ್ದೆವು,” ಎನ್ನುವುದು ನಗರದ ಮತ್ತೊಂದು ಅನುದಾನರಹಿತ ಶಾಲೆಯ ಪ್ರಾಂಶುಪಾಲರ ಅನಿಸಿಕೆಯಾಗಿದೆ.
ಕರ್ನಾಟಕ ಪ್ರಾಥಮಿಕ ಹಾಗೂ ಮಾಧ್ಯಮಿಕ ಖಾಸಗಿ ಶಾಲೆಗಳ ಸಂಘವು ಆನ್ ಲೈನ್ ಪೋರ್ಟಲ್ ಅನ್ನು ಪುನರಾರಂಭಿಸಿ, ಹಳೆಯ ಪಠ್ಯಪುಸ್ತಕಗಳ ಸ್ಥಾನದಲ್ಲಿ ಪರಿಷ್ಕೃತ ಪಠ್ಯಪುಸ್ತಕಗಳನ್ನು ಪಡೆಯಲು ನೆರವಾಗುವಂತೆ ಇಲಾಖೆಯನ್ನು ಕೋರಿದೆ. “ನಾವು ಹಳೆಯ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆದುಕೊಂಡು ಹೊಸ ಪರಿಷ್ಕೃತ ಪಠ್ಯಪುಸ್ತಕಗಳನ್ನು ಒದಗಿಸುವಂತೆ ಕೋರಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದೇವೆ. ಅನೇಕ ಶಾಲೆಗಳಿಗೆ ಈ ಬಾರಿ ಕಡಿಮೆ ಸಂಖ್ಯೆಯ ಪಠ್ಯಪುಸ್ತಕಗಳನ್ನು ಖರೀದಿಸದ್ದವು. ಆದರೆ ಈಗ ಹೆಚ್ಚಿನ ಪ್ರತಿಗಳ ಅವಶ್ಯಕತೆ ಬಿದ್ದಿದೆ.
ಮೇಲಾಗಿ, ಶಾಲೆಗಳು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿಯೂ ಸಹ ಏರಿಳಿತವನ್ನು ಎದುರಿಸುತ್ತದೆ. ಕೆಲವು ತರಗತಿಗಳಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ನಿರೀಕ್ಷೆಗಿಂತಲೂ ಕಡಿಮೆಯಾಗಿದ್ದರೆ, ಇತರೆ ತರಗತಿಗಳಲ್ಲಿ ಹೆಚ್ಚಾಗಿದೆ. ನರ್ಸರಿ ಹಾಗೂ ಪ್ರಾಥಮಿಕ ತರಗತಿಗಳ ಪ್ರವೇಶಾತಿಗಳು ಕಡಿಮೆಯಾಗಿವೆ. ಆದರೆ ಉನ್ನತ ತರಗತಿಗಳಿಗೆ ಪ್ರವೇಶಾತಿ ಸಂಖ್ಯೆ ನಿರೀಕ್ಷೆಗಿಂತ ಹೆಚ್ಚಾಗಿದೆ. ಹಳೆಯ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆದುಕೊಂಡು ಹೊಸ ಪರಿಷ್ಕೃತ ಪಠ್ಯಪುಸ್ತಕಗಳನ್ನು ನೀಡುವ ಅವಕಾಶವನ್ನು ಕಲ್ಪಿಸಿ ಪೋರ್ಟಲ್ ಅನ್ನು ಆರಂಭಿಸುವಂತೆಯೂ ಇಲಾಖೆಯನ್ನು ಕೋರಿದ್ದೇವೆ. ಈ ಸಂಬಂಧ ಹತ್ತು ದಿನಗಳ ಹಿಂದೆಯೇ ಸಂಪರ್ಕಿಸಿದ್ದೆವು, ಆದರೆ ಇನ್ನೂ ಯಾವುದೇ ಸರಿಯಾದ ಪ್ರತಿಕ್ರಿಯೆ ಲಭಿಸಿಲ್ಲ,” ಎನ್ನುತ್ತಾರೆ ಸಂಘದ ಕಾರ್ಯದರ್ಶಿ ಡಿ. ಶಶಿ ಕುಮಾರ್.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Confusion -school –textbooks-students.