ರಾಜ್ಯದಲ್ಲಿ ಮೈತ್ರಿ ಸಾಕು ದೋಸ್ತಿ ಬೇಕು

ಬೆಂಗಳೂರು:ಜುಲೈ-25: ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಂತರ ಕಾಯ್ದುಕೊಳ್ಳಲು ಉತ್ಸುಕವಾಗಿವೆ. ಈ ಹಂತದಲ್ಲೇ ಮೈತ್ರಿ ಸಾಕು, ದೋಸ್ತಿ ಮಾತ್ರ ಮುಂದುವರಿಯಲಿ ಎಂಬ ಸೂತ್ರವನ್ನು ಗುಟ್ಟಾಗಿ ಪಾಲಿಸಲು ಎರಡೂ ಪಕ್ಷದ ಪ್ರಮುಖರು ಆಸಕ್ತಿ ತೋರಿದ್ದಾರೆ.

ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡ ಕಾಂಗ್ರೆಸ್, ಮೈತ್ರಿ ಸರ್ಕಾರದಲ್ಲಿ ಜೆಡಿಎಸ್​ಗೆ ಬೆಂಬಲವಾಗಿ ನಿಂತಿತ್ತು. 78 ಶಾಸಕರಿದ್ದರೂ ಮುಖ್ಯಮಂತ್ರಿ ಪದವಿ ಬಿಟ್ಟುಕೊಟ್ಟು, ಜೆಡಿಎಸ್ ತೀರ್ವನಗಳನ್ನು ಬೆನ್ನು ಬಗ್ಗಿಸಿ ಒಪ್ಪಿಕೊಂಡಿದ್ದು ಈಗ ಇತಿಹಾಸ. ಮುಂದಿನ ರಾಜಕೀಯ ಸನ್ನಿವೇಶವನ್ನು ಗಮನದಲ್ಲಿರಿಸಿಕೊಂಡು ಎರಡು ಪ್ರಮುಖ ಉದ್ದೇಶಗಳಿಗೆ ಮೈತ್ರಿ ಸಾಕು ಮಾಡಿದರೂ ಅನೌಪಚಾರಿಕ ದೋಸ್ತಿ ಮುಂದುವರಿಸಲು ತೀರ್ವನಿಸಿದ್ದಾರೆಂದು ಕಾಂಗ್ರೆಸ್​ನ ಉನ್ನತ ಮೂಲಗಳು ತಿಳಿಸಿವೆ.

ಏಕೆ ಸಾಕು?: ಮೈತ್ರಿ ಉದ್ದೇಶ ಲಾಭವಾದರೂ ಕಾಂಗ್ರೆಸ್​ಗೆ ನಷ್ಟವೇ ಹೆಚ್ಚಾಯಿತು ಎಂಬುದು ಸ್ಪಷ್ಟವಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ನೆಲಕಚ್ಚಿದವು. ಪ್ರತ್ಯೇಕವಾಗಿ ಸ್ಪರ್ಧಿಸಿದ್ದರೆ ಇನ್ನೊಂದಿಷ್ಟು ಸ್ಥಾನ ಗಳಿಸಬಹುದಿತ್ತು ಎಂಬ ಮಾತು ಉಭಯ ಪಕ್ಷಗಳ ನಾಯಕರಲ್ಲಿದೆ. ಇನ್ನೊಂದು ಬೆಳವಣಿಗೆಯಲ್ಲಿ ಎರಡೂ ಪಕ್ಷದ ನಾಯಕರು ಊಹಿಸಲು ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಮತ ವರ್ಗಾವಣೆ ಬಿಜೆಪಿಗಾಗಿದೆ. ಇದಕ್ಕೆ ಮೋದಿ ಅಲೆ ಎಂಬುದು ಎಷ್ಟು ಕಾರಣವೋ ಮೈತ್ರಿಯೂ ಅಷ್ಟೇ ಕಾರಣ. ಇದನ್ನು ಈಗಲೂ ಮೈತ್ರಿ ನಾಯಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಲೋಕಸಭಾ ಚುನಾವಣೆಗೆ ಮುನ್ನವೇ ಜೆಡಿಎಸ್ ಜತೆ ಒಟ್ಟಿಗೆ ಹೆಜ್ಜೆ ಹಾಕಲು ಕಾಂಗ್ರೆಸ್ ಜಿಲ್ಲಾ ಮಟ್ಟದ ನಾಯಕರು ತೀವ್ರ ಆಕ್ಷೇಪ ಎತ್ತಿದ್ದರು. ಆ ಸಂದರ್ಭದಲ್ಲಿ ಹೈಕಮಾಂಡ್ ಕಡೆ ಬೊಟ್ಟು ಮಾಡಿದ್ದ ರಾಜ್ಯ ನಾಯಕರು ಲೋಕಸಭಾ ಚುನಾವಣೆವರೆಗೆ ಮಾತ್ರ ಮೈತ್ರಿ ಎಂದು ಮಾತುಕೊಟ್ಟಿದ್ದರು. ಜತೆಗೆ, ಮೈತ್ರಿಯಾದರೆ ಪಕ್ಷಕ್ಕೇ ನಷ್ಟ ಎಂಬ ಪಕ್ಷದ ಜಿಲ್ಲಾ ಮಟ್ಟದ ನಾಯಕರ ಸಕಾಲಿಕ ಅಭಿಪ್ರಾಯ ಕೇಳಿಸಿಕೊಳ್ಳದಾದರು. ಒಂದು ವೇಳೆ, ಮೈತ್ರಿ ಮುಂದುವರಿದಿದ್ದೇ ಆದರೆ ಕಾಂಗ್ರೆಸ್​ಗೆ ಹೆಚ್ಚು ಹಾನಿ. ರಾಜ್ಯದಲ್ಲಿ ಕಾಂಗ್ರೆಸ್​ನ ನೇರ ಎದುರಾಳಿ ಬಿಜೆಪಿಯಾದರೂ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್​ಗೆ ಜೆಡಿಎಸ್ ಸ್ಪಷ್ಟ ಎದುರಾಳಿ. ಇನ್ನೂ ಮೈತ್ರಿ ಕಡಿದುಕೊಳ್ಳದೆ ಹೋದರೆ ಪಕ್ಷದ ಮತಗಳು, ಮುಖಂಡರು, ಕಾರ್ಯಕರ್ತರು ಕೈತಪ್ಪಿ, ಬಿಜೆಪಿ ಪ್ರವೇಶಕ್ಕೆ ಸುಲಭವಾಗಿ ಲಾಭ ಮಾಡಿಕೊಳ್ಳುತ್ತದೆ ಎಂಬ ಸರಳ ಲೆಕ್ಕಾಚಾರ ಕೈ ನಾಯಕರ ಬೆರಳ ತುದಿಯಲ್ಲಿದೆ. ಇನ್ನೂ ಮೈತ್ರಿ ಎಂದು ಹೋದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ನೆಲ ಕಚ್ಚಬೇಕಾಗುತ್ತದೆ, ಪೂರ್ಣ ಬಹುಮತ ಪಡೆದುಕೊಳ್ಳದಷ್ಟು ಸ್ಥಾನ ಬರುವುದೂ ಇಲ್ಲ ಎಂಬುದು ನಾಯಕರಿಗೆ ಸ್ಪಷ್ಟವಾಗಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಎಂಬಂತೆ ಸರ್ಕಾರ ಕಳೆದುಕೊಂಡ ಬಳಿಕ ಜೆಡಿಎಸ್​ನಿಂದ ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್ ನಾಯಕರು ಶುರು ಮಾಡಿದ್ದಾರೆ.

ದೋಸ್ತಿ ಏಕೆ?

ಅಧಿಕೃತ ಮೈತ್ರಿ ಮುರಿದುಕೊಂಡರೂ ಎರಡೂ ಪಕ್ಷದ ರಾಜ್ಯ ನಾಯಕರು ‘ರಾಜಕೀಯ ಸ್ನೇಹ’ ಉಳಿಸಿಕೊಳ್ಳಲು ಬಹುವಾಗಿ ಇಚ್ಛೆಪಟ್ಟಿದ್ದಾರೆ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ.
ಸರ್ಕಾರ ಬೀಳಿಸಿದ ಅತೃಪ್ತ ಶಾಸಕರಿಗೆ ಪಾಠ ಕಲಿಸಲು ಕಾಂಗ್ರೆಸ್​ಗೆ ಜೆಡಿಎಸ್ ದೋಸ್ತಿ ಅನಿವಾರ್ಯ. ಹೀಗಾಗಿ ಮುಂದಿನ ಆರು ತಿಂಗಳೊಳಗೆ ಬರಬಹುದಾದ ಉಪಚುನಾವಣೆಯಲ್ಲಿ ಫ್ರೆಂಡ್ಲಿ ಫೈಟ್ ಮೂಲಕ ಬಿಜೆಪಿಯನ್ನು ಸೋಲಿಸುವುದಕ್ಕಾಗಿ ಅನೌಪಚಾರಿಕ ಮೈತ್ರಿ ಮುಂದುವರಿಯುವುದು ನಿಶ್ಚಿತ.
ಉಪಚುನಾವಣೆಗಳಲ್ಲಿ ಜೆಡಿಎಸ್ ಪ್ರಾಬಲ್ಯ ಇರುವ ಕಡೆ ಕಾಂಗ್ರೆಸ್​ನಿಂದ ಸಾಮಾನ್ಯ ಅಭ್ಯರ್ಥಿ ಕಣಕ್ಕಿಳಿಸುವುದು ಮತ್ತು ಕಾಂಗ್ರೆಸ್ ಪ್ರಭಾವ ಇರುವ ಕಡೆ ಬಿಜೆಪಿ ಮತ ವಿಭಜಿಸುವಂಥ ಅಭ್ಯರ್ಥಿಯನ್ನು ಜೆಡಿಎಸ್​ನಿಂದ ಕಣಕ್ಕಿಳಿಸುವ ಲೆಕ್ಕಾಚಾರವಿದೆ.
ಬಿಜೆಪಿ ಸರ್ಕಾರ ಸುಲಲಿತವಾಗಿ ನಡೆಯಲು ಬಿಟ್ಟರೆ ಭವಿಷ್ಯದಲ್ಲಿ ನೆಲೆ ಉಳಿಸಿಕೊಳ್ಳುವುದು ಕಷ್ಟವಾಗಬಹುದು. ಹೀಗಾಗಿ ಜಂಟಿಯಾಗಿಯೇ ಸರ್ಕಾರದ ಮೇಲೆ ಮುಗಿಬೀಳುವುದು. ಇಮೇಜ್ ಹೆಚ್ಚಿಸಿಕೊಳ್ಳದಂತೆ ಕಾಯುವುದು.
ಸರ್ಕಾರದ ಹೊರತಾಗಿ ರಾಜ್ಯದಲ್ಲಿ ಬಿಜೆಪಿ ನೆಲೆ ವಿಸ್ತರಿಸುವುದನ್ನು ತಡೆಯಲು ಜಂಟಿಯಾಗಿಯೇ ತಂತ್ರ ರೂಪಿಸುವುದು.
ಉಪಚುನಾವಣೆ ನಡೆದರೆ ಸಂಭಾವ್ಯರು?

ಮಹಾಲಕ್ಷಿ್ಮೕ ಲೇಔಟ್- ಪಾಲಿಕೆ ಸದಸ್ಯ ಶಿವರಾಜ್
ಕೆ.ಆರ್.ಪುರ- ಪಾಲಿಕೆ ಸದಸ್ಯ ಉದಯ್ಕುಮಾರ್/ನಾರಾಯಣ ಸ್ವಾಮಿ
ಹುಣಸೂರು- ಮಂಜುನಾಥ್/ ವಿಜಯಶಂಕರ್
ಕೆ.ಆರ್.ಪೇಟೆ- ನಿಖಿಲ್ ಕುಮಾರಸ್ವಾಮಿ /ಕೆ.ಬಿ.ಚಂದ್ರಶೇಖರ್
ಗೋಕಾಕ್- ಲಖನ್ ಜಾರಕಿಹೊಳಿ
ಅಥಣಿ- ಗಜಾನನ ಮಂಗ್ಸೂಳಿ
ಶಿವಾಜಿನಗರ- ರಿಜ್ವಾನ್
ಯಶವಂತಪುರ- ಜವರಾಯೀಗೌಡ
ಆರ್​ಆರ್ ನಗರ- ನಿಖಿಲ್ ಕುಮಾರಸ್ವಾಮಿ
ವಿಜಯನಗರ- ಸಂತೋಷ್ ಲಾಡ್
ಹಿರೆಕೆರೂರ್- ಎಸ್.ಎಂ.ಕರಿಯಣ್ಣವರ್/ ಪ್ರಕಾಶ್ ಬನ್ನಿಕೋಡ್
ಕಾಗವಾಡ- ಪ್ರಕಾಶ್ ಹುಕ್ಕೇರಿ/ರಾಜು ಕಾಗೆ (ಕರೆತರಲು ಪ್ರಯತ್ನ)
ಟಾರ್ಗೆಟ್6 ಫಿಕ್ಸ್…

ಪಕ್ಷದಲ್ಲೇ ಉಳಿಯುತ್ತೇವೆಂದು ಮಾತುಕೊಟ್ಟು ಬಳಿಕ ಮುಂಬೈಗೆ ಹಾರಿದವರ ಪೈಕಿ ಐದು ಮಂದಿಯನ್ನು ಎರಡೂ ಪಕ್ಷದ ನಾಯಕರು ಒಟ್ಟಾಗಿ ಗುರಿಯಾಗಿಸಿಕೊಂಡಿದ್ದಾರೆ. ಅವರನ್ನು ರಾಜಕೀಯವಾಗಿ ಹೆಣೆಯಲು ಒಂದು ಸುತ್ತಿನಲ್ಲಿ ಚರ್ಚೆಯನ್ನೂ ನಡೆಸಿದ್ದಾರೆ. 1. ಹೊಸಕೋಟೆ- ಎಂ.ಟಿ.ಬಿ. ನಾಗರಾಜ್, 2. ಹುಣಸೂರು- ಎಚ್.ವಿಶ್ವನಾಥ್, 3.ಕೆ.ಆರ್.ಪುರ- ಬೈರತಿ ಬಸವರಾಜು, 4. ಮಹಾಲಕ್ಷಿ್ಮೕಪುರ- ಗೋಪಾಲಯ್ಯ, 5. ಕೆ.ಆರ್.ಪೇಟೆ- ನಾರಾಯಣ ಗೌಡ, 6. ಗೋಕಾಕ್- ರಮೇಶ್ ಜಾರಕಿಹೊಳಿ ಅವರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಎಚ್.ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಜಂಟಿಯಾಗಿ ತಂತ್ರ ರೂಪಿಸುತ್ತಾರೆಂಬ ಮಾಹಿತಿ ಇದೆ.

ದಂಗಲ್ ಸುಳಿವು

ಬೆಂಗಳೂರು: ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ ಎಂಬ ಸುಳಿವನ್ನು ಹಂಗಾಮಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸೂಚ್ಯವಾಗಿ ಹೊರಹಾಕಿದ್ದಾರೆ. ಸಿಎಂ ಸ್ಥಾನದಿಂದ ನಿರ್ಗಮಿಸುತ್ತಿರುವ ಹಿನ್ನೆಲೆ ಮುಖ್ಯಕಾರ್ಯದರ್ಶಿ ಆದಿಯಾಗಿ ಇಲಾಖೆ ಮುಖ್ಯಸ್ಥ ಅಧಿಕಾರಿಗಳಿಗೆ ಧನ್ಯವಾದ ಅರ್ಪಿಸಲು ಗೃಹ ಕಚೇರಿಗೆ ಕರೆಸಿಕೊಂಡಿದ್ದ ವೇಳೆ ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ. ಬಳಿಕ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುವಾಗಲೂ, ‘ಯಾವಾಗ ಏನು ಬೇಕಾದರೂ ಆಗಬಹುದು. ಯಾರೂ ಊಹಿಸಲಾಗದಂತಹ ಬೆಳವಣಿಗೆಗಳು ನಡೆಯಲಿವೆ’ ಎಂದರು. ಜನಪ್ರತಿನಿಧಿಗಳಿಗಿಂತ ಅಧಿಕಾರಿಗಳ ಜವಾಬ್ದಾರಿ ದೊಡ್ಡದು. ಈ 14 ತಿಂಗಳಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡುವ ಬೆಳವಣಿಗೆ ನಡೆದಾಗಲೂ ಅಧಿಕಾರಿಗಳು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದ್ದಾರೆ. ಗೊಂದಲಗಳ ನಡುವೆಯೂ ಕೆಲಸ ಮಾಡಿದ್ದಾರೆ. ಮುಂದೆ ಕೂಡ ಇದೇ ರೀತಿ ಕಾರ್ಯನಿರ್ವಹಿಸಬೇಕಾಗಬಹುದೆಂದು ತಿಳಿಸಿದ್ದೇನೆ ಎಂದರು. ಶುಕ್ರವಾರದ ವಿಧಾನಸಭೆ ಕಲಾಪದಲ್ಲೂ ಕುಮಾರಸ್ವಾಮಿ ಗೂಡಾರ್ಥವನ್ನೊಳಗೊಂಡ ಮಾತನ್ನಾಡಿದ್ದರು. ‘ಅಧಿಕಾರ ಯಾರಿಗೂ ಶಾಶ್ವತವಲ್ಲ, ನೀವೆಷ್ಟು ದಿನ ಈ ಸ್ಥಾನದಲ್ಲಿ (ಆಡಳಿತ ಪಕ್ಷದ ಸಾಲು) ಕುಳಿತು ಅಧಿಕಾರ ನಡೆಸುತ್ತೀರಿ ಎಂಬುದನ್ನು ನೋಡುತ್ತೇನೆ’ ಎಂದಿದ್ದರು.

14 ತಿಂಗಳ ಆಡಳಿತದ ಬಗ್ಗೆ ತೃಪ್ತಿಇದೆ. ರಾಜ್ಯದ ಜನರ ಸಮಸ್ಯೆ ಬಗೆಹರಿಸುವ, ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನ ಜಾರಿಗೊಳಿಸಿದ್ದೇವೆ. ಸರ್ಕಾರದ ಕಾರ್ಯಕ್ರಮಗಳನ್ನ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇವೆ.

| ಎಚ್.ಡಿ.ಕುಮಾರಸ್ವಾಮಿ, ಹಂಗಾಮಿ ಮುಖ್ಯಮಂತ್ರಿ

ಬಜೆಟ್ ಅಂಗೀಕಾರ ಹೇಗೆ?

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆ ವಿಳಂಬವಾಗುತ್ತಿರುವುದರಿಂದ ಬಜೆಟ್ ಅಂಗೀಕಾರ ಹೇಗೆ ಎಂಬ ಪ್ರಶ್ನೆ ಈಗ ಮೂಡಿದೆ. ಕುಮಾರಸ್ವಾಮಿ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್​ನಲ್ಲಿ ನಾಲ್ಕು ತಿಂಗಳ ಅವಧಿಗೆ ಸದನದ ಒಪ್ಪಿಗೆ ಪಡೆದಿದ್ದರು. ಉಳಿದ ಎಂಟು ತಿಂಗಳ ಅವಧಿಗೆ ಧನ ವಿನಿಯೋಗ ವಿಧೇಯಕಕ್ಕೆ ಒಪ್ಪಿಗೆ ಪಡೆಯಬೇಕಾಗಿದೆ. ಅಂದರೆ ಜುಲೈ ಅಂತ್ಯದೊಳಗೆ ಬಜೆಟ್​ಗೆ ಸದನದ ಒಪ್ಪಿಗೆ ಬೇಕಾಗಿದೆ. ಇಲ್ಲದಿದ್ದರೆ, ಒಂದು ಪೈಸೆಯನ್ನೂ ಖರ್ಚು ಮಾಡಲು ಸಾಧ್ಯವಿಲ್ಲ. ನೌಕರರ ಸಂಬಳಕ್ಕೂ ತೊಂದರೆಯಾಗುತ್ತದೆ. ಹೊಸ ಸರ್ಕಾರ ರಚನೆಯಾಗಿ, ಬಹುಮತ ಸಾಬೀತು, ರಾಜ್ಯಪಾಲರ ಭಾಷಣ ಪ್ರಕ್ರಿಯೆ ಮುಗಿಸಿಯೇ ಬಜೆಟ್ ಅಂಗೀಕಾರ ಕೈಗೆತ್ತಿಕೊಳ್ಳಬೇಕು. ಆದರೆ, ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಮುಂದಿನ ಬುಧವಾರದೊಳಗೆ ಇಷ್ಟೂ ಪ್ರಕ್ರಿಯೆ ನಡೆಯುವ ಸಾಧ್ಯತೆಗಳು ಕಡಿಮೆ.

ಒಂದು ವೇಳೆ ಹೊಸ ಸರ್ಕಾರ ರಚನೆಯಾಗದಿದ್ದರೆ ಹೇಗಿದ್ದರೂ ಲೋಕಸಭಾ ಕಲಾಪ ನಡೆಯುತ್ತಿರುವುದರಿಂದ ಅಲ್ಲಿಗೆ ಕೊಂಡೊಯ್ದು ಅಂಗೀಕಾರ ಪಡೆಯಬಹುದಾಗಿದೆ. ಲೋಕಸಭೆ ಅಧಿವೇಶನ ಇಲ್ಲದೆ ಇದ್ದ ಸಂದರ್ಭದಲ್ಲಿ ರಾಷ್ಟ್ರಪತಿ ಅವರಿಂದ ಒಪ್ಪಿಗೆ ಪಡೆದು ಬಜೆಟ್ ಅನುಷ್ಠಾನಗೊಳಿಸಲಾಗುತ್ತದೆ. ಆದ್ದರಿಂದ ಸಂಬಳ ಅಥವಾ ಇನ್ನಾವುದೆ ವೆಚ್ಚಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ, ಸರ್ಕಾರ ಇಲ್ಲದೆ ಇರುವುದರಿಂದ ಇಲಾಖಾವಾರು ಬೇಡಿಕೆಗಳ ಮೇಲೆ ಚರ್ಚೆ ನಡೆಯುವುದಿಲ್ಲ ಅಷ್ಟೇ.
ಕೃಪೆ:ವಿಜಯವಾಣಿ

ರಾಜ್ಯದಲ್ಲಿ ಮೈತ್ರಿ ಸಾಕು ದೋಸ್ತಿ ಬೇಕು
congress-and-jds-leaders-thinking-to-break-coalition