ಮಧ್ಯಪ್ರದೇಶ, ಮಾರ್ಚ್ 11, 2020 (www.juskannada.in): ಮಧ್ಯಪ್ರದೇಶ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಶಾಸಕ ರಕ್ಷಣೆಗೆ ಕಾಂಗ್ರೆಸ್-ಬಿಜೆಪಿ ತಂತ್ರ-ಪ್ರತಿತಂತ್ರ ರೂಪಿಸುತ್ತಿವೆ.
ಕಾಂಗ್ರೆಸ್ನ ಪ್ರಭಾವಿ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಪಕ್ಷದ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ಉದ್ಭವಿಸಿರುವ ರಾಜಕೀಯ ಅನಿಶ್ಚಿತತೆ ಹಿನ್ನೆಲೆಯಲ್ಲಿ ಮಧ್ಯರಾತ್ರಿಯಿಂದ ಹೊಸ ಬೆಳವಣಿಗೆಗಳು ಕಂಡು ಬಂದಿವೆ.
ಪಕ್ಷಾಂತರ ಭೀತಿ ಮತ್ತು ಕುದುರೆ ವ್ಯಾಪಾರ ಸಾಧ್ಯತೆ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಶಾಸಕರನ್ನು ಭೋಪಾಲ್ನಿಂದ ದೆಹಲಿ ಮತ್ತು ಹರಿಯಾಣದ ಗುರುಗಾಮ್ಗೆ ಕಳುಹಿಸಿದೆ. ತಡರಾತ್ರಿ ಬಿಜೆಪಿ ಶಾಸಕರು ಭೋಪಾಲ್ ವಿಮಾನ ನಿಲ್ದಾಣದಿಂದ ದೆಹಲಿ ಮತ್ತು ಗುರುಗ್ರಾಮ್ ಗೆ ಪ್ರಯಾಣ ಬೆಳೆಸಿದರು.
ಇನ್ನೊಂದೆಡೆ ಕಾಂಗ್ರೆಸ್ ಕೂಡ ತನ್ನ ಶಾಸಕರ ರಕ್ಷಣೆಗೆ ಕ್ರಮ ಕೈಗೊಂಡಿದೆ. ಕೈ ಶಾಸಕರು ಜೈಪುರಕ್ಕೆ ಇಂದು ಬೆಳಗ್ಗೆ ತೆರಳಿದ್ದಾರೆ. ಕಾಂಗ್ರೆಸ್ನ ಇಬ್ಬರು ಹಿರಿಯ ನಾಯಕರಾದ ಸಜ್ಜನ್ ಸಿಂಗ್ ವರ್ಮ ಮತ್ತು ಗೋವಿಂದ್ ಸಿಂಗ್ ಬೆಂಗಳೂರಿನಲ್ಲಿದ್ದು ಕೆಲವು ಬಂಡಾಯ ಶಾಸಕರ ಮನವೊಲಿಸಿ ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನ ಮುಂದುವರೆಸಿದ್ದಾರೆ.