ಮೈತ್ರಿ ಕೋಲಾಹಲ ಖಾಕಿಗೂ ತಳಮಳ: ವರ್ಗಾವಣೆಗೆ ತಡೆ, ಹಣ, ಪ್ರಭಾವ ಬಳಸಿದ ಅಧಿಕಾರಿಗಳಿಗೆ ತಲೆಬಿಸಿ

ಬೆಂಗಳೂರು:ಜುಲೈ-18: ಮೈತ್ರಿ ಸರ್ಕಾರ ಉಳಿಯುತ್ತೋ ಬೀಳುತ್ತೋ ಎಂಬ ಆತಂಕ ರಾಜಕೀಯ ಪಕ್ಷಗಳಿಗೆ ಮಾತ್ರವಲ್ಲದೆ, 131 ಪೊಲೀಸ್ ಅಧಿಕಾರಿಗಳಿಗೂ ಕಾಡಿದೆ.

ವರ್ಗಾವಣೆ ವಿಚಾರದಲ್ಲಿ ಹಣಬಲ, ತೋಳ್ಬಲ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂಬುದು ಜಗಜ್ಜಾಹೀರು. ಇಲಾಖೆಯಲ್ಲಿ ಆಯಕಟ್ಟಿನ ಸ್ಥಳಗಳಿಗೆ ಸೇರಲು ಇನ್ನಿಲ್ಲದ ಡಿಮ್ಯಾಂಡ್. ಕೆಲ ಠಾಣೆ ಅಥವಾ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿಸಿಕೊಳ್ಳಲು 25ರಿಂದ 30 ಲಕ್ಷ ರೂ. ಕೊಡಬೇಕಾಗುತ್ತದೆ ಎಂದು ಪೊಲೀಸ್ ಮೂಲಗಳೇ ಮಾಹಿತಿ ನೀಡುತ್ತವೆ. ಇದೇ ರೀತಿ, ಲಕ್ಷಾಂತರ ರೂ. ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿದ್ದ ಕೆಲ ಅಧಿಕಾರಿಗಳಿಗೆ ಈಗ ಸರ್ಕಾರ ಪತನದ ಭೀತಿ ಕಾಡಿದೆ. ಜು.12ರಂದು ಬೆಂಗಳೂರಿನ 3 ಡಿವೈಎಸ್​ಪಿ ಹಾಗೂ 38 ಇನ್​ಸ್ಪೆಕ್ಟರ್​ಗಳು ಸೇರಿ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 21 ಡಿವೈಎಸ್​ಪಿ ಮತ್ತು 110 ಇನ್​ಸ್ಪೆಕ್ಟರ್​ಗಳನ್ನು ವರ್ಗಾವಣೆ ಮಾಡಲಾಗಿತ್ತು. ಅಧಿಕೃತ ಆದೇಶ ಹೊರಬಿದ್ದ ಕೆಲ ನಿಮಿಷಗಳಲ್ಲೇ ಖುದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಮಣಿ ಎನ್.ರಾಜು ಅವರೇ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದರು.

ಸರ್ಕಾರವೇ ಅತಂತ್ರದಲ್ಲಿದ್ದಾಗ ವರ್ಗಾವಣೆ ಮಾಡುವ ಅಗತ್ಯವಾದರೂ ಏನಿತ್ತು ಎಂದು ರಾಜ್ಯ ಪಾಲರು ಪ್ರಶ್ನಿಸಿದ್ದರು ಎನ್ನಲಾಗಿದೆ. ಅಲ್ಲದೆ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಸಂರ್ಪಸಿ ಈ ಬಗ್ಗೆ ರಾಜ್ಯಪಾಲರು ವಿವರಣೆ ಕೇಳಿದ್ದರು. ಈ ಬೆಳವಣಿಗೆ ನಂತರ ಡಿಜಿಪಿ ವರ್ಗಾವಣೆ ಪಟ್ಟಿಗೆ ತಡೆವೊಡ್ಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೈತ್ರಿ ಸರ್ಕಾರ ಉಳಿದರಷ್ಟೇ ವರ್ಗಾವಣೆ ಪಟ್ಟಿ ಜಾರಿಯಾಗುತ್ತದೆ. ಒಂದು ವೇಳೆ ಪತನವಾದರೆ ಅದರೊಂದಿಗೆ ವರ್ಗಾವಣೆ ಕನಸೂ ಕಮರಿ ಹೋಗುತ್ತದೆ. ಬಯಸಿದ ಹುದ್ದೆಯೂ ಸಿಗಲಿಲ್ಲ, ಇದ್ದ ಹಣವೂ ಹೋಯ್ತು ಎನ್ನುವ ಸ್ಥಿತಿ ಬರುತ್ತದೇನೋ ಎಂದು ಆತಂಕಕ್ಕೆ ಒಳಗಾಗಿದ್ದಾರೆ.

ಹುದ್ದೆಗೆ ತಕ್ಕ ರೇಟ್ ಫಿಕ್ಸ್

ಕಾನ್ಸ್​ಟೇಬಲ್, ಹೆಡ್ ಕಾನ್ಸ್​ಟೇಬಲ್, ಎಸ್​ಐ, ಇನ್​ಸ್ಪೆಕ್ಟರ್ ಹಾಗೂ ಎಸಿಪಿ/ಡಿವೈಎಸ್ಪಿ ಹೀಗೆ ಒಂದೊಂದು ಹುದ್ದೆಗೂ ಇಂತಿಷ್ಟು ಎಂದು ರೇಟ್ ಫಿಕ್ಸ್ ಮಾಡಲಾಗುತ್ತದೆ. ಇನ್​ಸ್ಪೆಕ್ಟರ್ ಹುದ್ದೆಗೆ ಜಾಸ್ತಿ; 25ರಿಂದ 30 ಲಕ್ಷ ರೂ.ವರೆಗೆ ಚಾಲ್ತಿಯಲ್ಲಿದೆ ಎಂದು ಅಧಿಕಾರಿಗಳೇ ಹೇಳುತ್ತಾರೆ.

ಐಷಾರಾಮಿ ಡೀಲ್

ವರ್ಗಾವಣೆ ಬಯಸುವ ಪೊಲೀಸರ ಜತೆ ಸರ್ಕಾರದ ಮಟ್ಟದಲ್ಲಿ ಅತ್ಯಾಪ್ತರಾಗಿರುವ ವ್ಯಕ್ತಿಯೊಬ್ಬರು ಮಾತುಕತೆ ನಡೆಸುತ್ತಾರೆ. ನಿಗದಿ ಮಾಡಿರುವಷ್ಟು ಹಣ ಕೊಟ್ಟರೆ, ಅವರು ಕೇಳಿದ ಸ್ಥಳಕ್ಕೆ ವರ್ಗಾವಣೆ ಮಾಡಿಕೊಡುತ್ತಾರೆ. ಐಷಾರಾಮಿ ಹೋಟೆಲ್​ಗಳಲ್ಲಿ ಈ ಡೀಲ್ ನಡೆಯುತ್ತದೆ. ಅತ್ಯಾಪ್ತರ ಭೇಟಿ ಬಳಿಕ ಅವರು ಹೇಳುವ ಮಧ್ಯವರ್ತಿಯನ್ನು ಸಂರ್ಪಸಬೇಕು. ಹಣದ ವ್ಯವಹಾರವೆಲ್ಲ ಆ ಮಧ್ಯವರ್ತಿಗಳೇ ನಡೆಸುತ್ತಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೃಪೆ:ವಿಜಯವಾಣಿ

ಮೈತ್ರಿ ಕೋಲಾಹಲ ಖಾಕಿಗೂ ತಳಮಳ: ವರ್ಗಾವಣೆಗೆ ತಡೆ, ಹಣ, ಪ್ರಭಾವ ಬಳಸಿದ ಅಧಿಕಾರಿಗಳಿಗೆ ತಲೆಬಿಸಿ
congress-jds-alliance-police-transfer-mla-resignation-police-dept-state-govt