ಮೈಸೂರು,ಏಪ್ರಿಲ್,25,2023(www.justkannada.in): ರಾಜ್ಯ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು ಮೂರು ಪಕ್ಷಗಳಲ್ಲೂ ಪ್ರಚಾರದ ಭರಾಟೆ ಜೋರಾಗಿದೆ. ಈ ಮಧ್ಯೆ ಇಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಮೈಸೂರು ಜಿಲ್ಲೆ, ಚಾಮರಾಜನಗರ ಜಿಲ್ಲೆಗೆ ಎಂಟ್ರಿಕೊಟ್ಟಿ ಅಭ್ಯರ್ಥಿಗಳ ಪರ ಮತಬೇಟೆಗಿಳಿದರು.
ಇಂದು ಮೈಸೂರಿನ ಟಿ.ನರಸೀಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಸಿ ಮಹದೇವಪ್ಪ ಪರ ಮತಯಾಚನೆ ಮಾಡಿದರು. ಇದೇವೇಳೆ ಮಾತನಾಡಿದ ಅವರು. ಜನರ ಸಂಕಷ್ಟಗಳಿಗೆ ಸ್ಪಂದಿಸುವ, ಜನರ ದನಿಯಾಗುವ ಸರ್ಕಾರವಿರಬೇಕು. ದೇಶದ ವಿಕಾಸ ಮಾಡುವುದು ಹಾಗೂ ಜನ ಸಂಸ್ಕೃತಿ ಕಾಪಾಡುವುದು ಸರ್ಕಾರದ ಧರ್ಮ. ಆದರೆ, ಅಪ್ರಾಮಾಣಿಕವಾದ ಸರ್ಕಾರ ಆಳುತ್ತಿದೆ. ಅದಕ್ಕೆ ಜನರ ಕಷ್ಟಗಳು ಬೇಕಿಲ್ಲ. ಲೂಟಿ ಹೊಡೆಯುವುದೇ ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದು ಕಿಡಿಕಾರಿದರು.
ಹಾಗೆಯೇ ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ಮಹಿಳೆಯರ ಜೊತೆ ಪ್ರಿಯಾಂಕಾಗಾಂಧಿ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ವೇಳೆ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಸಂಘರ್ಷದ ಬದುಕು ಅಂದ್ರೆ ಹೆಣ್ಣು ಮಕ್ಕಳ ಬದುಕು. ಪುರುಷರಿಗಿಂತ ಮಹಿಳೆಯರು ಕಷ್ಟ ಬಿಳುತ್ತಾರೆ. ಹೆಣ್ಣುಮಕ್ಕಳ ಕಷ್ಟಕ್ಕೆ ಬೆಲೆನೇ ಸಿಗಲ್ಲ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಪ್ರತಿ ತಿಂಗಳು ಹೆಣ್ಣು ಮಕ್ಕಳಿಗೆ 2ಸಾವಿರ ರೂ. ನೇರವಾಗಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ ಎಂದರು.
Key words: Congress leader -Priyanka Gandhi- campaign – T. Narasipur- Hanur