ವಿಜಯಪುರ,ಅಕ್ಟೋಬರ್,20,2021(www.justkannada.in): ದೇಶ ಹಾಗೂ ರಾಜ್ಯಗಳಲ್ಲಿ ಇಂದು ಜನಸಾಮಾನ್ಯರ ಸ್ಥಿತಿ ಶೋಚನೀಯವಾಗಿದೆ. ಬೆಲೆ ಏರಿಕೆ ಪರಿಣಾಮವಾಗಿ ಜನ ದಿನಬೆಳಗಾದರೆ ದೇವರ ಜತೆಗೆ ಅಡುಗೆ ಸಿಲಿಂಡರ್, ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಆರತಿ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಕಿಡಿಕಾರಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಎಚ್.ಕೆ ಪಾಟೀಲ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಿಷ್ಟು.
ದೇಶ ಹಾಗೂ ರಾಜ್ಯಗಳಲ್ಲಿ ಒಂದೇ ಪರಿಸ್ಥಿತಿ. ಇಂದು ಜನಸಾಮಾನ್ಯರ ಸ್ಥಿತಿ ಶೋಚನೀಯವಾಗಿದೆ. ಕರ್ನಾಟಕದ ಬಡವರು, ದಲಿತರು, ಯುವಕರು, ಮಹಿಳೆಯರು ಇಂದು ಅತ್ಯಂತ ಸಂಕಷ್ಟದ ಸ್ಥಿತಿಗೆ ಸಿಲುಕಿದ್ದಾರೆ. ಜನರ ಆದಾಯ ಕಡಿಮೆಯಾಗಿದ್ದು, ವೆಚ್ಚ ಹೆಚ್ಚಾಗಿದೆ. ವ್ಯವಸಾಯ ಮಾಡುವವರ ಆದಾಯ ಅರ್ಧಕ್ಕೆ ಕುಸಿದಿದೆ. ವೆಚ್ಚ ದುಪ್ಪಟ್ಟಾಗಿದೆ. ಬೆಲೆ ಏರಿಕೆ ಪರಿಣಾಮವಾಗಿ ಜನ ದಿನಬೆಳಗಾದರೆ ದೇವರ ಜತೆಗೆ ಅಡುಗೆ ಸಿಲಿಂಡರ್, ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಆರತಿ ಎತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪೆಟ್ರೋಲ್ ಬೆಲೆ 110 ರೂ. ಆಗಿದೆ. ಡೀಸೆಲ್ ಬೆಲೆ 101.30 ರೂ. ಆಗಿದೆ. ಅಡುಗೆ ಅನಿಲ ಸಿಲಿಂಡರ್ ಬೆಲೆ 925 ರೂ. ಆಗಿದೆ. ಕಬ್ಬಿಣ, ಸೀಮೆಂಟ್, ಮರಳು, ಅಡುಗೆ ಎಣ್ಣೆ, ಬೇಳೆ ಕಾಳುಗಳು, ಯೂರಿಯಾ ಗೊಬ್ಬರ ಎಲ್ಲವೂ ದುಬಾರಿಯಾಗಿವೆ. ಸ್ವಾತಂತ್ರ್ಯ ಭಾರತದ 75 ವರ್ಷಗಳ ಇತಿಹಾಸದಲ್ಲಿ ಇದೇ ಗರಿಷ್ಠ.
ಮೋದಿ ಅವರು ಮಾತೆತ್ತಿದರೆ 75 ವರ್ಷಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಕರ್ನಾಟಕ ಸೇರಿ ಇಡೀ ದೇಶ ಬೆಲೆ ಏರಿಕೆಯಿಂದ ತತ್ತರಿಸಿದೆ. ಬಿಜೆಪಿಗೆ ಯಾಕೆ ಮತ ಹಾಕಬೇಕು? ಬೆಲೆ ಏರಿಕೆಗಾ? ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಳಕ್ಕಾ? ಯಾತಕ್ಕೆ ಹಾಕಬೇಕು ಮತ?
ಬೊಮ್ಮಾಯಿ ಅವರಾಗಲಿ, ಮೋದಿ ಅವರಾಗಲಿ, ಜೆ.ಪಿ ನಡ್ಡಾ ಅವರಾಗಲಿ ದಿನಸಿ ತರಲು ಅಂಗಡಿಗೆ ತೆರಳುತ್ತಾರಾ? ಅವರು ಹೋಗಿದ್ದರೆ ಜನಸಾಮಾನ್ಯರ ಕಷ್ಟ ಏನು ಎಂಬುದು ಅರ್ಥವಾಗುತ್ತಿತ್ತು. ಹೀಗಾಗಿ ಮೋದಿ ಹಾಗೂ ಬೆಲೆ ಏರಿಕೆ ಎರಡೂ ದೇಶಕ್ಕೆ ಹಾನಿಕಾರಕವಾಗಿವೆ. ಕಟ್ಟಡ ನಿರ್ಮಾಣ ವೆಚ್ಚ ಶೇ. 40ರಷ್ಟು ಹೆಚ್ಚಳವಾಗಿದ್ದು, ಕಳೆದ 7 ವರ್ಷಗಳ ಹಿಂದೆ ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿದಾಗ ಕಚ್ಚಾತೈಲ ಬೆಲೆ ಬ್ಯಾರಲ್ ಗೆ 108 ಅಮೆರಿಕನ್ ಡಾಲರ್ ಇತ್ತು. ಆಗ ಪೆಟ್ರೋಲ್ ಬೆಲೆ ಸುಮಾರು 70 ರೂ. ಇದ್ದರೆ, ಡೀಸೆಲ್ ಬೆಲೆ 54 ರೂ ಇತ್ತು. ಇಂದು ಕಚ್ಚಾ ತೈಲಬೆಲೆ ಬ್ಯಾರೆಲ್ ಗೆ ಸುಮಾರು 70-80 ಡಾಲರ್ ಮಧ್ಯೆ ಇದೆ. ಆದರೂ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿರುವುದೇಕೆ? ಕಾರಣ ಇದರ ಮೇಲೆ ಮೋದಿ ಹಾಗೂ ಬೊಮ್ಮಾಯಿ ಅವರ ತೆರಿಗೆ ಬಿದ್ದಿದೆ.
7 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕೇವಲ ಪೆಟ್ರೋಲ್ ಹಾಗೂ ಡೀಸೆಲ್ ಮೂಲಕ ಜನರ ಜೇಬಿಗೆ ಕತ್ತರಿ ಹಾಕಿ 18 ಲಕ್ಷ ಕೋಟಿ ಹಣ ಸಂಪಾದಿಸಿದೆ. ರಾಜ್ಯ ಸರ್ಕಾರ ಕಳೆದ 20 ತಿಂಗಳಲ್ಲಿ 7 ಸಾವಿರ ಕೋಟಿ ಹಣವನ್ನು ಸುಲಿಗೆ ಮಾಡಿದೆ. ಸರ್ಕಾರ ಈ ರೀತಿ ನಡೆದುಕೊಂಡರೆ ಜನಸಾಮಾನ್ಯರ ಪಾಡೇನು? ಈ ವಿಚಾರ ಇಷ್ಟಕ್ಕೆ ನಿಲ್ಲುವುದಿಲ್ಲ.
ಕೋವಿಡ್ ಸಮಯದಲ್ಲಿ ಸರ್ಕಾರ ಎಲ್ಲ ಜವಾಬ್ದಾರಿಯನ್ನು ಜನರ ಮೇಲೆ ಹಾಕಿ ನುಣುಚಿಕೊಂಡಿತು. ಜನರನ್ನು ರಕ್ಷಿಸಲಾಗದೆ ಮನೆ ಸೇರಿಕೊಂಡಿತ್ತು. ಯಾವುದೇ ಬಿಜೆಪಿ ನಾಯಕರು ನಿಮ್ಮ ಸಹಾಯಕ್ಕೆ ಬರಲಿಲ್ಲ. ಆದರೆ ಯುವ ನಾಯಕರಾದ ಮಾನೆ ಅವರು ಜನರ ಕಷ್ಟಕ್ಕೆ ಧಾವಿಸಿದ್ದಾರೆ. ಬಡವರಿಗೆ ಆರ್ಥಿಕ ನೆರವು ನೀಡಿ ಅವರ ಬೆನ್ನಿಗೆ ನಿಂತರು. ಆಕ್ಸಿಜನ್ ಕೊರತೆಯಿಂದ ಜನ ಉಸಿರುಗಟ್ಟಿ ಸಾಯುವಾಗ ಸಂಸದರಾಗಲಿ, ನಾಯಕರಾಗಲಿ, ಶಾಸಕ ಸ್ಥಾನಕ್ಕೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಯಾಗಲಿ ಯಾರೂ ನೆರವಿಗೆ ಬರಲಿಲ್ಲ. ಮಾನೆಯವರು ತಮ್ಮ ಯುವ ಕಾರ್ಯಕರ್ತರ ಜತೆ ಸೇರಿಕೊಂಡು ಆಕ್ಸಿಜನ್, ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ವ್ಯವಸ್ಥೆ ಕಲ್ಪಿಸಿದ್ದರು. ಹೀಗಾಗಿ ಅವರಿಗೆ ಆಪದ್ಭಾಂದವ ಎಂಬ ಬಿರುದನ್ನು ಜನರೇ ಕೊಟ್ಟಿದ್ದಾರೆ.
ನಾನು ಕುರುಕ್ಷೇತ್ರ ನಡೆದ ನೆಲದಿಂದ ಬಂದಿದ್ದೇನೆ. ನನ್ನ ನೆಲ ಎಷ್ಟು ಪವಿತ್ರವೋ ಈ ಸ್ಥಳವೂ ಅಷ್ಟೇ ಪವಿತ್ರವಾದುದು. ಹೀಗಾಗಿ ನನಗೆ ಇದು ತವರಿನಂತೆ ಭಾಸವಾಗುತ್ತದೆ. ಇಲ್ಲಿನ ಜನ ವರ್ಷಗಟ್ಟಲೇ ನಾಯಕರನ್ನಾಗಿ ಬೆಳೆಸಿ ಆರಿಸಿದವರು ಏನು ಮಾಡಿದ್ದಾರೆ? ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ. ಆ ಕಾರ್ಖಾನೆ ನಡೆಯುತ್ತಿದ್ದರೆ ಇಲ್ಲಿನ ಕಬ್ಬು ಬೆಳೆಗಾರರಿಗೆ ಆಸರೆಯಾಗುತ್ತಿತ್ತು. ಪಂಜಾಬ್ ನಲ್ಲಿ ಪ್ರತಿ ಟನ್ ಕಬ್ಬಿಗೆ 4 ಸಾವಿರ ನೀಡುತ್ತಿದೆ. ಅಂತಹ ಸಣ್ಣ ರಾಜ್ಯವೇ 4 ಸಾವಿರ ನೀಡುತ್ತಿರುವಾಗ ಕರ್ನಾಟಕದಂತಹ ದೊಡ್ಡ ರಾಜ್ಯಗಳು ನೀಡಲು ಸಾಧ್ಯವಾಗುತ್ತಿಲ್ಲ ಏಕೆ?
ರೈತರು, ಬಡವರು, ಕಾರ್ಮಿಕರು, ದಲಿತರ ಜೀವನಕ್ಕೆ ಸಮರ್ಪಕ ಆರ್ಥಿಕ ನೆರವು ಸಿಕ್ಕಿದಾಗ ಮಾತ್ರ ದೇಶದ ಅರ್ಥವ್ಯವಸ್ಥೆ ಸರಿ ದಾರಿಯಲ್ಲಿ ಸಾಗುತ್ತದೆ. ಆಗ ಉದ್ಯೋಗ ಸೃಷ್ಟಿಯಾಗುತ್ತದೆ.
ಹಾನಗಲ್ ಕರ್ನಾಟಕದ ಅತ್ಯಂತ ಯುವ ವಿಧಾನಸಭಾ ಕ್ಷೇತ್ರವಾಗಿದ್ದು, ಇಲ್ಲಿ ಹೆಚ್ಚಿನ ಪ್ರಮಾಣದ ಮತದಾರರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಮೋದಿ ಅವರು ಪ್ರಧಾನಿಯಾಗುವ ಮುನ್ನ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇಂದು ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ದೇಶದ ಇತಿಹಾಸದಲ್ಲಿ ಗರಿಷ್ಠ ಶೇ. 7-8 ರಷ್ಟು ನಿರುದ್ಯೋಗ ಪ್ರಮಾಣವಿದೆ. ಇದರಲ್ಲಿ ಕರ್ನಾಟಕ ಪ್ರಮುಖ ಸ್ಥಾನದಲ್ಲಿದೆ.
ರೈತರ ಬೆಳೆಗೆ ಉತ್ತಮ ಬೆಲೆ ನೀಡುತ್ತಿಲ್ಲ. ಕಾರ್ಮಿಕರಿಗೆ ವೇತನವಿಲ್ಲ. ನರೇಗಾ ಯೋಜನೆಗೆ ಹಣ ನೀಡುತ್ತಿಲ್ಲ. ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡುತ್ತಿಲ್ಲ. ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಉದ್ಯೋಗಗಳಿಲ್ಲ. ಸರ್ಕಾರದ ಬಳಿಯೇ ಆಡಳಿತ ನಡೆಸಲು ಹಣವಿಲ್ಲ. ಸರ್ಕಾರ ಹಾಗೂ ಇಡೀ ಆಡಳಿತ ವ್ಯವಸ್ಥೆ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇದೇ ಕಾರಣಕ್ಕೆ ಬಿಜೆಪಿಯನ್ನು ಸುಳ್ಳು ಹಾಗೂ ಭ್ರಷ್ಟಾಚಾರದ ಪಕ್ಷ ಎಂದು ಕರೆಯಲಾಗುತ್ತಿದೆ. ಹೀಗಾಗಿ ಜನರಿಗೆ ಬದಲಾವಣೆ ತರಲು ಈಗ ಒಂದು ಅಮೂಲ್ಯ ಅವಕಾಶ ಸಿಕ್ಕಿದೆ. ನಮ್ಮ ಯುವ ನಾಯಕ ನಿಮ್ಮ ಪರವಾಗಿ ಧ್ವನಿ ಎತ್ತಿ ಈ ಕ್ಷೇತ್ರದ ಪರಿಸ್ಥಿತಿ ಬದಲಾಯಿಸುವ ಶಕ್ತಿ ಹೊಂದಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಮೂಲಕ ಬಿಜೆಪಿ ಸರ್ಕಾರದ ಪತನಕ್ಕೆ ನಾಂದಿ ಹಾಡಬೇಕು ಎಂದು ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.
ಬೆಲೆ ಏರಿಕೆ ವಿಚಾರವಾಗಿ ಸುಬ್ರಹ್ಮಣ್ಯನ್ ಸ್ವಾಮಿ ಅವರು ಈ ಹಿಂದೆ ಮಾಡಿದ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನಮ್ಮ ಹರಿಯಾಣದ ಕಡೆ ಒಂದು ಮಾತಿದೆ. ತಮ್ಮ ಮನೆಯಲ್ಲಿ ಸರಿಯಾಗಿ ಮನ್ನಣೆ ಸಿಗದ ವ್ಯಕ್ತಿ, ತನ್ನತ್ತ ಗಮನ ಸೆಳೆಯಲು ಬೀದಿಗೆ ಬಂದು ಬಟ್ಟೆ ಹರಿದುಕೊಂಡು ಬಾಯಿ ಬಡಿದುಕೊಂಡನಂತೆ’. ಅದೇ ರೀತಿ ಈ ಬಿಜೆಪಿ ನಾಯಕನನ್ನು ಅವರದೇ ಪಕ್ಷದ ನಾಯಕರು ಲೆಕ್ಕಕ್ಕೆ ಇಟ್ಟುಕೊಂಡಿಲ್ಲ. ಹೀಗಾಗಿ ಆತ ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಮಾತನಾಡುತ್ತಿದ್ದಾರೆ. ಅವರನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸುವುದು ಉತ್ತಮ. ಸುಬ್ರಹ್ಮಣ್ಯನ್ ಸ್ವಾಮಿ ಅವರು ಮೋದಿ ಅವರಿಗೆ ಸರಿಯಾಗಿ ದೇಶವನ್ನು ನಡೆಸುವ ಸಾಮರ್ಥ್ಯವಿಲ್ಲ ಎಂದೂ ಹೇಳಿದ್ದಾರೆ. ಅದನ್ನು ನೀವು ಗಮನಿಸಬೇಕು’ ಎಂದರು.
ಆ ( ರಾಹುಲ್ ಗಾಂಧಿ) ಕುಟುಂಬದ ತ್ಯಾಗದ ಮುಂದೆ ಇಡೀ ಬಿಜೆಪಿ ಪಕ್ಷ ಶೇ.1ರಷ್ಟು ಸಮಕ್ಕೂ ನಿಲ್ಲುವುದಿಲ್ಲ-ಡಿ.ಕೆ. ಶಿವಕುಮಾರ್:
ಇದೇ ವೇಳೆ ಮಾತನಾಡಿದ ಡಿ.ಕೆ ಶಿವಕುಮಾರ್, ಈ ಉಪಚುನಾವಣೆ ಸಂದರ್ಭದಲ್ಲಿ ಬಿಜೆಪಿ ನಾಯಕರು ಅನ್ಯ ಪಕ್ಷಗಳ ನಾಯಕರ ಬಗ್ಗೆ ಯಾಕೆ ಅವಹೇಳನ ಮಾಡುತ್ತಿದ್ದಾರೆ ಎಂಬುದನ್ನು ನೀವು ವಿಮರ್ಶೆ ಮಾಡಬೇಕು. ಜನರ ಬಳಿ ಮತ ಕೇಳಲು ಅವರಿಗೆ ಯಾವುದೇ ಸಾಧನೆ, ಅದನ್ನು ಹೇಳುವ ಶಬ್ಧಗಳಿಲ್ಲ. ಏಕೆಂದರೆ ಅವರು ಸಾಧನೆಯನ್ನೇ ಮಾಡಿಲ್ಲ. ಜನರ ನೋವು ಮರೆಸಲು ಮಾಧ್ಯಮಗಳ ಮೂಲಕ ಇಂತಹ ಹೇಳಿಕೆ ನೀಡುತ್ತಿದ್ದಾರೆ. ನೀವು ಯಾಕೆ ಸುಮ್ಮನಿದ್ದೀರಿ ಎಂದು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದೀರಿ. ನಾವು ಚುನಾವಣೆ ಮುಗಿಯಲಿ ಎಂದು ತಾಳ್ಮೆ ವಹಿಸಿದ್ದೇವೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಾಂಗ್ರೆಸ್ ಪಕ್ಷದ ಸೈನ್ಯವೇ ಇದೆ. ಇದು ಕೇವಲ ಚುನಾವಣೆ ವಿಚಾರ ಮಾತ್ರವಲ್ಲ. ಆ ( ರಾಹುಲ್ ಗಾಂಧಿ) ಕುಟುಂಬದ ತ್ಯಾಗದ ಮುಂದೆ ಇಡೀ ಬಿಜೆಪಿ ಪಕ್ಷ ಶೇ.1ರಷ್ಟು ಸಮಕ್ಕೂ ನಿಲ್ಲುವುದಿಲ್ಲ ಎಂದು ಟಾಂಗ್ ನೀಡಿದರು.
ನಮ್ಮ ಪಕ್ಷ ಬದುಕಿದೆ. ಈ ದೇಶದ ಇತಿಹಾಸದ ಪಕ್ಷ ಇದಾಗಿದೆ. ನಮಗೂ ಕೇಸರಿ ಬಣ್ಣದ ಮೇಲೆ ಗೌರವವಿದೆ. ಅದು ನಮ್ಮ ರಷ್ಟ್ರಧ್ವಜದ ಭಾಗ. ಚುನಾವಣೆ ಮುಗಿದ ಮೇಲೆ ಈ ವಿಚಾರವಾಗಿ ನಾವು ಮಾತಾಡುತ್ತೇವೆ. ಈ ಮಾನಸಿಕ ಅಸ್ವಸ್ಥರಿಗೆ ಯಾವ ರೀತಿ ಉತ್ತರ ಕೊಡಬೇಕೋ ಅದಕ್ಕೂ ಸಮಯ ನಿಗದಿ ಮಾಡುತ್ತೇವೆ. ಚುನಾವಣೆ ಸಮಯದಲ್ಲಿ ಜನರ ನೋವು, ಬದುಕಿನ ಬಗ್ಗೆ ಮಾತನಾಡಲಿ. ಪ್ರತಿ ವ್ಯಕ್ತಿಯ ಬದುಕಿನಲ್ಲಿ ಬಿಜೆಪಿ ಏನಾದರೂ ಬದಲಾವಣೆ ತಂದಿದೆಯಾ? ಇಲ್ಲವೇ..? ಎಂಬುದಷ್ಟೇ ನಮ್ಮ ಪ್ರಶ್ನೆ. ಇದಕ್ಕೆ ಅವರು ಉತ್ತರ ನೀಡಿ, ಚುನಾವಣೆ ಎದುರಿಸಲಿ. ಜನರು ಇದಕ್ಕೆಲ್ಲ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ. ನೋಂದ ಜನ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲಿದ್ದಾರೆ. ಇದು ಮುಖ್ಯಮಂತ್ರಿಗಳ ಜಿಲ್ಲೆಯ ಕ್ಷೇತ್ರವಾಗಿದ್ದು, ಅವರಿಗೆ ಸೋಲಿನ ಭಯ ಕಾಡುತ್ತಿದೆ. ಹೀಗಾಗಿ ಜನರ ಸಮಸ್ಯೆಗಳ ವಿಚಾರ ಮರೆಮಾಚಲು ವೈಯಕ್ತಿಕ ಟೀಕೆಗೆ ನಿಂತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಕೆ ಪಾಟೀಲ್, ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಾವ ವಿಚಾರವಾಗಿ ಮಾತನಾಡಬೇಕು ಎಂಬ ಅರಿವು ಇಲ್ಲದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಬಯ್ಯುವ ತವಕದಲ್ಲಿ ಗಂಗೋತ್ರಿ ನದಿಗೆ ಅಪಮಾನ ಮಾಡುವಂತೆ ಮಾತನಾಡುತ್ತಿದ್ದಾರೆ. ಗಂಗೋತ್ರಿ ಎಂದರೆ ಪಾಪವನ್ನು ತೊಳೆಯುವ ಪವಿತ್ರ ನದಿ. ಅವರು ಹೇಳಿದಂತೆ ಕಾಂಗ್ರೆಸ್ ಗಂಗೋತ್ರಿಯಾಗಿದೆ. ಅವರು ಮಾಡಿರುವ ಪಾಪವನ್ನು ತೊಳೆದು ಜನರ ಬದುಕು ಹಸನ ಮಾಡುವ ಕೆಲಸ ಮಾಡುತ್ತಿದೆ. ಅವರು ಜನರ ಜತೆ ಸರಿಯಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ಹೇಳಿದರು.
ಕಟೀಲ್ ಅವರು ನಮ್ಮ ಪಕ್ಷದ ರಾಷ್ಟ್ರಾಧ್ಯಕ್ಷರಾಗಿ ಕೆಲಸ ಮಾಡಿದ ಯುವ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅತಿಯಾಗಿ, ಲಘುವಾಗಿ ಮಾತನಾಡಿದ್ದಾರೆ. ಇದು ಬಿಜೆಪಿಯವರಿಗೆ ಬೌದ್ಧಿಕ ದಿವಾಳಿತನ ಬಂದಿರುವುದನ್ನು ತೋರುತ್ತದೆ. ಕಟೀಲ್ ಅವರು ಆ ಮಾತು ಆಡಲು ಅವರ ವಿಕೃತ ಮನಸ್ಸು ಕಾರಣ. ಅವರು ಆ ಶಬ್ಧ ಬಳಸುವ ಮೂಲಕ ತಮ್ಮ ಸಾರ್ವಜನಿಕ ಬದುಕಿನಲ್ಲಿ ತೀವ್ರ ಅಸಡ್ಡೆ ತೋರುತ್ತಿದ್ದಾರೆ. ನಾನು ಅದನ್ನು ಖಂಡಿಸುತ್ತೇನೆ. ಶ್ರೀನಿವಾಸ ಮಾನೆ ಅವರನ್ನು ಜನ ಆಪದ್ಬಾಂಧವ ಎಂದು ಕರೆಯುತ್ತಿದ್ದು, ಇದು ಚುನಾವಣೆಯಲ್ಲಿ ಪಕ್ಷಕ್ಕೆ ಶಕ್ತಿ ತುಂಬಲಿದೆ ಎಂದರು.
Key words: Congress leaders -against – central – state government – price rise.