ನವದೆಹಲಿ,ಏಪ್ರಿಲ್,5,2024 (www.justkannada.in): ಲೋಕಸಭಾ ಚುನಾವಣಾ ಕಣ ರಂಗೇರಿದ್ದು ಈ ಬಾರಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೇರಬೇಕೆಂಬ ಗುರಿಯೊಂದಿಗೆ ಕಣಕ್ಕಿಳಿದಿರುವ ಕಾಂಗ್ರೆಸ್ ಇಂದು ತನ್ನ ಪ್ರಣಾಳಿಕೆಯನ್ನ ಬಿಡುಗಡೆ ಮಾಡಿದೆ.
ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ವೇಳೆ ಪಕ್ಷದ ನಾಯಕಿ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಉಪಸ್ಥಿತರಿದ್ದರು.
‘ನ್ಯಾಯಪತ್ರ’ ಎಂಬ ಹೆಸರಿನಲ್ಲಿ 48 ಪುಟಗಳ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು ಒಟ್ಟು 25 ಗ್ಯಾರಂಟಿಗಳನ್ನ ಕಾಂಗ್ರೆಸ್ ಘೋಷಣೆ ಮಾಡಿದೆ. ಅದನ್ನು ಅದು ‘ಪಂಚ ನ್ಯಾಯ್’ ಅಥವಾ ನ್ಯಾಯದ ಐದು ಸ್ತಂಭಗಳು ಎಂದು ಕರೆಯುತ್ತದೆ. ಐದು ಆಧಾರ ಸ್ತಂಭಗಳೆಂದರೆ ‘ಯುವ ನ್ಯಾಯ್’ (ಯುವಕರಿಗೆ), ‘ನಾರಿ ನ್ಯಾಯ್’ (ಮಹಿಳೆಯರಿಗೆ), ‘ಕಿಸಾನ್ ನ್ಯಾಯ್’ (ರೈತರಿಗೆ), ‘ಶ್ರಮಿಕ್ ನ್ಯಾಯ್’ (ಕಾರ್ಮಿಕರಿಗೆ) ಮತ್ತು ‘ಭಾಗೀದಾರಿ ನ್ಯಾಯ್’ (ಜನಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಅವಕಾಶಗಳು).
ಪ್ರಣಾಳಿಕೆ ಅಂಶಗಳು ಹೀಗಿವೆ..
ಪ್ರಣಾಳಿಕೆಯಲ್ಲಿ ನಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ, ಜಾತಿಗಳು ಮತ್ತು ಉಪಜಾತಿಗಳು ಹಾಗೂ ಅವರ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಗುರುತಿಸಲು ರಾಷ್ಟ್ರವ್ಯಾಪಿ ಜಾತಿ ಗಣತಿಯನ್ನು ನಡೆಸಲಿದೆ ಎಂದು ಹೇಳಿದೆ. ಅಲ್ಲದೆ, ಜಾತಿ ಗಣತಿಯ ಅಂಕಿ-ಅಂಶಗಳ ಆಧಾರದ ಮೇಲೆ, ದೃಢೀಕರಣದ ಅಗತ್ಯವಿರುವ ಜಾತಿಗಳಿಗೆ ಕಾರ್ಯಸೂಚಿಯನ್ನು ಬಲಪಡಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ನರೇಗಾ ಕಾರ್ಮಿಕರಿಗೆ 400 ರೂ ಕನಿಷ್ಟ ವೇತನ ಯುವಕರಿಗೆ ಕೆಲಸ ಸಹಿತ 1 ಲಕ್ಷ ವೇತನ
ದೇಶಾದ್ಯಂತ ಜಾತಿ ಗಣತಿ ಭರವಸೆ. ದೇಶಾದ್ಯಂತ ರೈತರ ಸಾಲಮನ್ನಾ, ರೈತರ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವುದು.
ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆ ಜಾರಿ. ಕುಟುಂಬದ ಓರ್ವ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ಭರವಸೆಯನ್ನ ನೀಡಿದೆ.
ಮೀಸಲಾತಿಯ ಮೇಲೆ ಶೇಕಡಾ 50 ರಷ್ಟು ಮಿತಿಯನ್ನು ಹೆಚ್ಚಿಸಲು ಸಾಂವಿಧಾನಿಕ ತಿದ್ದುಪಡಿಯನ್ನು ಅಂಗೀಕರಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ
Key words: Congress, manifesto, Loksabha, elections