ಮೈಸೂರು,ಏಪ್ರಿಲ್,6, 2024 (www.justkannada.in): ಬಡವರು ಹಾಗೂ ಜನಸಾಮಾನ್ಯರ ಪರ ಕೆಲಸ ಮಾಡಿ ಅವರ ಕುಂದು ಕೊರತೆಗಳಿಗೆ ಸ್ಪಂದಿಸುವಂತಹ ಕಾಂಗ್ರೆಸ್ ಪಕ್ಷಕ್ಕೆ ಇದೇ ಏಪ್ರಿಲ್ 26ರಂದು ಮತದಾನ ಮಾಡಿ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರು ತಿಳಿಸಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಸವನಪುರ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಈ ಬಾರಿ ಏಪ್ರಿಲ್ 26 ರಂದು ಮೈಸೂರು ಮತ್ತು ಕೊಡಗು ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಎಂ.ಲಕ್ಷ್ಮಣ್ ಅವರಿಗೆ, ಹಸ್ತದ ಗುರುತಿಗೆ ಮತ ನೀಡಿ ಅವರನ್ನು ಜಯಶೀಲರನ್ನಾಗಿ ಮಾಡಿ ಎಂದು ಹೇಳಿದರು.
ಯಾವ ಪಕ್ಷಕ್ಕೆ ಮತದಾನ ಮಾಡಬೇಕು ಎಂಬುದನ್ನು ಜನರು ನಿರ್ಧರಿಸಬೇಕು. ಯಾವ ಪಕ್ಷ ಹೆಚ್ಚು ಬಡವರ ಪರವಾಗಿ ಕೆಲಸ ಮಾಡಿದೆ ಅವರಿಗೆ ಮತದಾನ ಮಾಡಿ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ 10 ವರ್ಷದಿಂದ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಮತ ನೀಡಿ ಎಂದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ರೈತರಿಗೆ ಭರವಸೆಯನ್ನು ನೀಡಿದ್ದರು. ರೈತರ ಆದಾಯ ಹೆಚ್ಚು ಆಗಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಬಿಜೆಪಿ ವಿರುದ್ದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದರು.
ಕಾಂಗ್ರೆಸ್ ಪಕ್ಷ 2013ರಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತು 158 ಭರವಸೆಗಳನ್ನು ಈಡೇರಿಸಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂ ಭಾಗ್ಯ, ರೈತರ ಸಾಲ ಮನ್ನಾ, ಇಂದಿರಾ ಕ್ಯಾಂಟೀನ್ ಹಾಗೂ ವಿದ್ಯಾಸಿರಿ ಯೋಜನೆಗಳನ್ನು ಈಡೇರಿಸಿದೆ ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳ ಒಳಗೆ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸಿದೆ. ಪ್ರತಿಯೊಂದು ಕುಟುಂಬಗಳಿಗೆ ನಾಲ್ಕರಿಂದ ಐದು ಸಾವಿರ ಹಣ ಉಳಿತಾಯವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿಯೊಂದು ಮನೆಯ ಗೃಹಿಣಿಯರು 2000 ಪಡೆದುಕೊಳ್ಳುತ್ತಿದ್ದಾರೆ. ವಿದ್ಯುತ್ ಅನ್ನು ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡುತ್ತಿದ್ದಾರೆ. ಅನ್ನಭಾಗ್ಯದಲ್ಲಿ 5 ಕೆಜಿ ಅಕ್ಕಿ 5 ಕೆ.ಜಿ ಗೆ ಹಣವನ್ನು ಪಡೆಯುತ್ತಿದ್ದಾರೆ ಎಂದರು.
ಯುವನಿಧಿ ಕಾರ್ಯಕ್ರಮದಲ್ಲಿ ನಿರುದ್ಯೋಗಿಗಳಿಗೆ ಹಣವನ್ನು ನೀಡಲಾಗುತ್ತಿದೆ. ಎಲ್ಲ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನಪ್ರಿಯವಾಗಿದೆ. ಜನರಿಗೆ ಅನುಕೂಲವಾಗುವಂತಹ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಕಾಂಗ್ರೆಸ್ ಪಕ್ಷದಿಂದ ನೀಡಲಾಗುತ್ತಿದೆ ಎಂದರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಮಾತನಾಡಿ ಹಿಂದಿನ ಸಂಸದ ಪ್ರತಾಪ್ ಸಿಂಹ ಬಸವನಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಕುಂದು ಕೊರತೆಗಳನ್ನು ಕೇಳಿ ಬಗೆಹರಿಸುವ ಕೆಲಸವನ್ನೂ ಮಾಡಿಲ್ಲ. ಕೇವಲ ಸುಳ್ಳು ಹೇಳಿಕೊಂಡು 10 ವರ್ಷಗಳ ಕಾಲ ಸಂಸದರಾಗಿ ಇದ್ದಾರೆ ಎಂದರು.
ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಜನರ ನಡುವೆ ಇರುತ್ತೇನೆ ತಮ್ಮೆಲ್ಲರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರವನ್ನು ಕೊಡುವಂತಹ ಕೆಲಸವನ್ನು ಮಾಡುತ್ತೇನೆ ತಮ್ಮೆಲ್ಲರ ಸೇವೆಗಾಗಿ ನನಗೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಇದೇ ವೇಳೆ ಬಸವನಪುರದ ಮನೆ ಮನೆಗೆ ಭೇಟಿ ನೀಡಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಮತ ಯಾಚನೆ ಮಾಡಲಾಯಿತು.
ಸಭೆಯಲ್ಲಿ ಮಾವನಹಳ್ಳಿ ಸಿದ್ದೇಗೌಡ, ಮಾಜಿ ಜಿ.ಪಂ. ಸದಸ್ಯರಾದ ರಾಕೇಶ್ ಪಾಪಣ್ಣ, ಬೀರಿಹುಂಡಿ ಬಸವಣ್ಣ, ಬ್ಲಾಕ್ ಅಧ್ಯಕ್ಷೆ ಲೋಕೇಶ್, ಮಹದೇವ ರವಿಕುಮಾರ್, ಗುರುಸ್ವಾಮಿ ಸೇರಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಉಪಸ್ಥಿತರಿದ್ದರು.
Key words: Congress, Yatindra Siddaramaiah, mysore