ಸುರಂಗದಲ್ಲಿ ನಿಲ್ದಾಣ ನಿರ್ಮಾಣ ಆರಂಭ

ಬೆಂಗಳೂರು:ಜುಲೈ-12: ‘ನಮ್ಮ ಮೆಟ್ರೋ’ ಎರಡನೇ ಹಂತದ ಸುರಂಗದಲ್ಲಿ ನಿಲ್ದಾಣಗಳ ನಿರ್ಮಾಣ ಕಾಮಗಾರಿಗೆ ತಾಂತ್ರಿಕವಾಗಿ ಚಾಲನೆ ದೊರಕಿದ್ದು, 2022ರ ಆಗಸ್ಟ್‌ನಲ್ಲಿ ಈ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಹೊಂದಿದೆ.

ಎರಡು ಮಾರ್ಗಗಳು ಕೂಡುವ ಎಂ.ಜಿ. ರಸ್ತೆ ಸೇರಿದಂತೆ ಶಿವಾಜಿನಗರ, ವೆಲ್ಲಾರ ಜಂಕ್ಷನ್‌, ಕಂಟೋನ್‌ಮೆಂಟ್, ಪಾಟರಿ ಟೌನ್‌ಗಳಲ್ಲಿ ಸುರಂಗದಲ್ಲಿ ಮೆಟ್ರೋ ನಿಲ್ದಾಣಗಳನ್ನು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದರೊಂದಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ಮಾರ್ಗದ ಬಹುತೇಕ ಎಲ್ಲ ನಿಲ್ದಾಣಗಳ ನಿರ್ಮಾಣ ಕಾರ್ಯ ಆರಂಭಗೊಂಡಂತಾಗಿದೆ (ಡೈರಿ ವೃತ್ತ-ವೆಲ್ಲಾರ ಮತ್ತು ಪಾಟರಿ ಟೌನ್‌-ನಾಗವಾರ ಇನ್ನೂ ಟೆಂಡರ್‌ ಪ್ರಕ್ರಿಯೆ ನಡೆದಿದೆ). ಆದರೆ, ಪೂರ್ವಸಿದ್ಧತೆಗಳು ಮಾತ್ರ ಇನ್ನೂ ಪೂರ್ಣಗೊಂಡಿಲ್ಲ!

ಡೈರಿ ವೃತ್ತದಿಂದ ನಾಗವಾರದವರೆಗೆ ಸಾಗುವ ಉದ್ದೇಶಿತ ಸುರಂಗ ಮಾರ್ಗದಲ್ಲಿ ಒಟ್ಟಾರೆ 12 ನಿಲ್ದಾಣಗಳು ಬರುತ್ತವೆ. ಈ ಪೈಕಿ ಕಂಟೋನ್‌ಮೆಂಟ್ ಮತ್ತು ಪಾಟರಿಟೌನ್‌ ನಿಲ್ದಾಣಕ್ಕೆ ಸಂಬಂಧಿಸಿದ ಕಾಮಗಾರಿ ಈ ಮೊದಲೇ ಶುರುವಾಗಿದ್ದರೂ, ಅದು ತಾಂತ್ರಿಕವಾಗಿ ಆರಂಭಗೊಂಡಿರಲಿಲ್ಲ. ಈಗ ಎಲ್ಲ ಕಡೆಗೂ ಚಾಲನೆ ದೊರಕಿದೆ. ಆದರೆ, ಉದ್ದೇಶಿತ ನಿಲ್ದಾಣ ವ್ಯಾಪ್ತಿಯಲ್ಲಿ ಬರುವ ನೂರಾರು ಮರಗಳ ತೆರವು, ವಾಣಿಜ್ಯ ಮಳಿಗೆಗಳು ಖಾಲಿ ಮಾಡಬೇಕು. ರಕ್ಷಣಾ ಇಲಾಖೆ ಭೂಮಿಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಇದಾವುದೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ಮರಗಳು, ಕಟ್ಟಡಗಳ ತೆರವು ಬಾಕಿ: ಎಂ.ಜಿ. ರಸ್ತೆಯೊಂದರಲ್ಲೇ 8ರಿಂದ 9 ಮರಗಳಿವೆ. ಜತೆಗೆ ಪಕ್ಕದಲ್ಲಿರುವ ಮಾಣೆಕ್‌ಷಾ ಪರೇಡ್‌ ಮೈದಾನ ಮತ್ತು ಮೈದಾನದ ಎದುರು ಇರುವ ರಕ್ಷಣಾ ಇಲಾಖೆ ಜಾಗವನ್ನು ಬಿಎಂಆರ್‌ಸಿಎಲ್ ಕೇಳಿದೆ. ಇದಕ್ಕೆ ಅನುಮತಿಯೂ ದೊರಕಿದೆ. ಆದರೆ, ಈ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಮರಗಳು ಬರುತ್ತವೆ. ಅದೇ ರೀತಿ, ವೆಲ್ಲಾರ ಜಂಕ್ಷನ್‌ನಲ್ಲಿ ಇರುವ ರಕ್ಷಣಾ ಇಲಾಖೆಗೆ ಸೇರಿದ ಭೂಮಿಯಲ್ಲೂ ನೀಲಗಿರಿ ಮರಗಳು ಬರುತ್ತವೆ. ಜತೆಗೆ ಆಲ್ ಸೆಂಟ್ಸ್‌ ಚರ್ಚ್‌ ಆವರಣದೊಳಗೂ 50ಕ್ಕೂ ಹೆಚ್ಚು ಹಳೆಯ ಮರಗಳು ಇವೆ. ಈ ಜಾಗ ವಿವಾದದ ಕೇಂದ್ರಬಿಂದು ಆಗಿದೆ.

ಮರಗಳ ತೆರವಿಗೆ ಸಂಬಂಧಿಸಿದಂತೆ ಸಮಿತಿಗಳನ್ನು ರಚಿಸಿಯೇ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದೆ. ಈ ನಿಟ್ಟಿನಲ್ಲಿ ನಿಗಮವು ಸಿದ್ಧತೆ ನಡೆಸಿದೆ. ಇದಲ್ಲದೆ, ಶಿವಾಜಿನಗರದಲ್ಲಿ ಕೆಲ ವ್ಯಾಪಾರಿಗಳು ಪರ್ಯಾಯ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಡುವಂತೆ ಪಟ್ಟುಹಿಡಿದಿದ್ದಾರೆ. ಈ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. ಇದೆಲ್ಲವು ಕಾಮಗಾರಿ ಪ್ರಗತಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಇನ್ನು ಸುರಂಗ ಮಾರ್ಗ ಕೊರೆಯುವ ಟನಲ್ ಬೋರಿಂಗ್‌ ಮಷಿನ್‌ (ಟಿಬಿಎಂ)ಗಳು ಈಗಷ್ಟೇ ಕಾರ್ಯಾಚರಣೆಗಿಳಿಯಬೇಕಿದೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ನಡೆದಿದ್ದು, ಮರಗಳ ತೆರವು ಸೇರಿದಂತೆ ಮೇಲಿನ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಯಂತ್ರಗಳ ಕೆಲಸ ಆರಂಭಗೊಳ್ಳಲಿದೆ.

ಎಚ್ಚರಿಕೆ ಹೆಜ್ಜೆ: ಮೊದಲ ಹಂತದಲ್ಲಿ ಸುರಂಗ ಮಾರ್ಗ ನಿರ್ಮಾಣದಿಂದ ಪಾಠ ಬಿಎಂಆರ್‌ಸಿಎಲ್, ಈ ಬಾರಿ ಅತಿ ಉದ್ದದ (14 ಕಿ.ಮೀ.) ಸುರಂಗ ಮಾರ್ಗದಲ್ಲಿ ಎಚ್ಚರಿಕೆ ಹೆಜ್ಜೆಗಳನ್ನು ಇಡಲಿದೆ. ಈ ಹಾದಿಯಲ್ಲಿ ಹೆಚ್ಚಾಗಿ ವಾಣಿಜ್ಯ ಕಟ್ಟಡಗಳು ಬರಲಿದ್ದು, ಕಟ್ಟಡಗಳ ಸ್ಥಿತಿಗತಿ ಸಮೀಕ್ಷೆ ನಡೆಸಲಾ ಗುತ್ತಿದೆ. ಅತ್ಯಾಧುನಿಕ ವಿಧಾನಗಳಿಂದ ಮಾರ್ಗದುದ್ದಕ್ಕೂ ಮುಂಚಿತವಾಗಿ ಮೇಲ್ಮೈ ಗ್ರೌಟಿಂಗ್‌ ಮಾಡಲಾಗುತ್ತಿದೆ ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು.

ಮೊದಲ ಹಂತದ ಹಸಿರು ಮಾರ್ಗದಲ್ಲಿ ಬರುವ ಸುರಂಗ ನಿರ್ಮಾಣದ ವೇಳೆ ಬಿಎಂಆರ್‌ಸಿಎಲ್ 19 ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಆ ಕಟ್ಟಡಗಳ ಮಾಲಿಕರಿಗೆ 2.8 ಕೋಟಿ ರೂ. ಪರಿಹಾರ ನೀಡಿರುವುದನ್ನು ಇಲ್ಲಿ ಗಮನಿಸ ಬಹುದು. ಅಷ್ಟೇ ಅಲ್ಲ, ಮಂತ್ರಿ ಸ್ಕ್ವೇರ್‌ನಿಂದ ಮೆಜೆಸ್ಟಿಕ್‌ ನಡುವೆ ಗೋದಾವರಿ ಟಿಬಿಎಂ ವರ್ಷಗಟ್ಟಲೆ ಕೆಟ್ಟುನಿಂತಿತ್ತು. ಇದರಿಂದ ಕೋಟ್ಯಂತರ ರೂ. ನಷ್ಟವಾಗಿತ್ತು. ಇದು ಪುನರಾವರ್ತನೆ ಆಗದಂತೆ ಈ ಬಾರಿ ಅತಿ ಹೆಚ್ಚು ಟಿಬಿಎಂಗಳನ್ನು ಈ ಮಾರ್ಗದಲ್ಲಿ ಬಳಸಲು ನಿರ್ಧರಿಸಲಾಗಿದೆ.

21.25ಕಿ.ಮೀ. ಗೊಟ್ಟಿಗೆರೆ- ನಾಗವಾರ ಮಾರ್ಗದ ಒಟ್ಟು ಉದ್ದ
13.79ಕಿ.ಮೀ. ಡೈರಿ ವೃತ್ತ- ನಾಗವಾರ ಸುರಂಗ ಮಾರ್ಗದ ಉದ್ದ
11,500ಕೋಟಿ ರೂ. ಮಾರ್ಗದ ಅಂದಾಜು ಯೋಜನಾ ವೆಚ್ಚ
12ಸುರಂಗದಲ್ಲಿ ಬರುವ ನಿಲ್ದಾಣಗಳು
ಒಂಬತ್ತು ಟಿಬಿಎಂಗಳನ್ನು ಬಳಸಲು ನಿರ್ಧಾರ:
14 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣಕ್ಕೆ ಕೊರೆಯಲು 9 ಟಿಬಿಎಂಗಳನ್ನು ಬಳಸಲು ಉದ್ದೇಶಿಸಲಾಗಿದೆ. ಈ ಪೈಕಿ ಈಗಾಗಲೇ ಕಾವೇರಿ, ಕೃಷ್ಣ, ಮಾರ್ಗರೇಟ್, ಹೆಲನ್‌, ರಾಬಿನ್ಸ್‌, ಗೋದಾವರಿ ಎಂಬ ಆರು ಟಿಬಿಎಂಗಳು ಪೀಣ್ಯ ಮೆಟ್ರೋ ಡಿಪೋದಲ್ಲಿವೆ. ಇವುಗಳನ್ನು ನೂರಾರು ಕೋಟಿ ರೂ. ಸುರಿದು ಅಮೆರಿಕ, ಜರ್ಮನಿ, ಜಪಾನ್‌, ಇಟಲಿ, ಚೀನಾದಿಂದ ತರಲಾಗಿತ್ತು. ಇದೇ ಟಿಬಿಎಂಗಳನ್ನು ಎರಡನೇ ಹಂತದಲ್ಲೂ ಬಳಸುವುದು ಅನುಮಾನ. ಯಾಕೆಂದರೆ, ಮೊದಲ ಹಂತದಲ್ಲಿ ಗುತ್ತಿಗೆ ಪಡೆದ ಕಂಪೆನಿಗಳು ಸಿಇಸಿ ಮತ್ತು ಕೋಸ್ಟಲ್. ಪ್ರಸ್ತುತ ನಾಲ್ಕು ಪ್ಯಾಕೇಜ್‌ಗಳ ಪೈಕಿ ಎರಡು ಪ್ಯಾಕೇಜ್‌ಗಳನ್ನು ಗುತ್ತಿಗೆ ಪಡೆದ ಕಂಪೆನಿ ಎಲ್ ಆಂಡ್‌ ಟಿ. ಅಲ್ಲದೆ, ಈಗಾಗಲೇ ಈ ಟಿಬಿಎಂಗಳು ಹಲವು ಬಾರಿ ದುರಸ್ತಿಗೊಂಡಿವೆ. ಮತ್ತೆ ಅದೇ ಟಿಬಿಎಂಗಳನ್ನು ಬಳಸಲು ಮನಸ್ಸು ಮಾಡುತ್ತದೆಯೇ ಎಂಬುದನ್ನು ಕಾದುನೋಡಬೇಕು.
ಕೃಪೆ:ಉದಯವಾಣಿ

ಸುರಂಗದಲ್ಲಿ ನಿಲ್ದಾಣ ನಿರ್ಮಾಣ ಆರಂಭ
construction-of-the-station-in-the-tunnel-begins