ನವದೆಹಲಿ,ಡಿ,12,2019(www.justkannada.in): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿ ಆದೇಶಿಸಿದ್ದ ತೀರ್ಪನ್ನ ಮರುಪರಿಶೀಲಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ತೀರ್ಪು ಮರುಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ 18 ಮರುಪರಿಶೀಲನಾ ಅರ್ಜಿಗಳನ್ನ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಎಸ್.ಎ. ನಜೀರ್, ಡಿವೈ ಚಂದ್ರಚೂಡ್ ಮತ್ತು ಸಂಜೀವ್ ಖನ್ನಾ ಅವರನ್ನು ಒಳಗೊಂಡ ಐವರ ಸದಸ್ಯರ ಪೀಠ ವಜಾಗೊಳಿಸಿದೆ.
ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಮರುಪರಿಶೀಲಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ 18 ಮೇಲ್ಮನವಿಯನ್ನು ಇಂದು ಸುಪ್ರೀಂಕೋರ್ಟ್ ಸಿಜೆಐ ಎಸ್ ಎ ಬೋಬ್ಡೆ ನೇತೃತ್ವದ ಪಂಚಸದಸ್ಯ ಪೀಠ ಗೌಪ್ಯ ವಿಚಾರಣೆ ನಡೆಸಿತ್ತು.
ರಾಮಜನ್ಮಭೂಮಿ-ಬಾಬ್ರಿ ಮಸೀದಿಯ 2.77 ಎಕರೆ ಭೂವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಿಜೆಐ ಜಸ್ಟೀಸ್ ರಂಜನ್ ಗೋಗೊಯಿ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ, ಅಯೋಧ್ಯೆ ರಾಮಜನ್ಮಭೂಮಿಯಾಗಿದ್ದು, ಇಲ್ಲಿಯೇ ರಾಮಮಂದಿರ ನಿರ್ಮಿಸಲು ಕೇಂದ್ರ ಸರ್ಕಾರ ಮೂರು ತಿಂಗಳೊಳಗೆ ಸಮಿತಿ ರಚಿಸಬೇಕು. ಅಲ್ಲದೇ ಸುನ್ನಿ ವಕ್ಫ್ ಮಂಡಳಿಗೆ ಮಸೀದಿ ಕಟ್ಟಲು ಅಯೋಧ್ಯೆಯಲ್ಲಿ 5 ಎಕರೆ ಜಾಗ ನೀಡಬೇಕೆಂದು ತೀರ್ಪು ಪ್ರಕಟಿಸಿತ್ತು.
Key words: Construction – Ram Mandir –Ayodhya- Supreme Court- dismisses – Reconsideration petitions