ಬೆಂಗಳೂರು:ಆ-20:(www.justkannada.in) ಒಂಬತ್ತು ಪ್ರಯಾಣಿಕರಿಗೆ 1,20,452 ರೂಗಳನ್ನು ಪಾವತಿಸಲು ಗ್ರಾಹಕ ವೇದಿಕೆ ವಿಮಾನಯಾನ ಸಂಸ್ಥೆಯೊಂದಕ್ಕೆ ನಿರ್ದೇಶನ ನೀಡಿದೆ.
ಎರಡೂವರೆ ವರ್ಷಗಳ ಹಿಂದೆ ರದ್ದುಗೊಂಡ ವಿಮಾನಕ್ಕಾಗಿ ಒಂಬತ್ತು ಪ್ರಯಾಣಿಕರಿಗೆ 1,20,452 ರೂ.ಗಳನ್ನು ಪಾವತಿಸುವಂತೆ ಮೂರನೇ ಹೆಚ್ಚುವರಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವೇದಿಕೆ ನ್ಯಾಯಾಲಯ ಏರ್ ಪೆಗಾಸಸ್ ಪ್ರೈವೇಟ್ ಲಿಮಿಟೆಡ್‌ಗೆ ನಿರ್ದೇಶಿಸಿದೆ.
2016ರಲ್ಲಿ ಶರಣ್ಯಾ ಶೆಟ್ಟಿ ಮತ್ತು ಇತರ ಎಂಟು ಮಂದಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ಎರಡು ಗುಂಪುಗಳಾಗಿ ಪ್ರಯಾಣಿಸಲು ಏರ್ ಪೆಗಾಸಸ್ ವಿಮಾನಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಮೊದಲ ಗುಂಪಿನ ಪ್ರಯಾಣಿಕರು 2016 ರ ನವೆಂಬರ್ 12 ರಂದು ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಲು ಮತ್ತು ನವೆಂಬರ್ 13, 2016 ರಂದು ಸಂಜೆ 4.45 ಕ್ಕೆ ಹಿಂದಿರುಗಲು ನಿರ್ಧರಿಸಲಾಗಿತ್ತು.
ಎರಡನೇ ಗುಂಪಿನ ಪ್ರಯಾಣಿಕರು ನವೆಂಬರ್ 12 ರಂದು ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಬೇಕಿತ್ತು ಮತ್ತು ನವೆಂಬರ್ 14, 2016 ರಂದು ಬೆಳಿಗ್ಗೆ 10 ಗಂಟೆಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಮರಳಲು ನಿರ್ಧರಿಸಲಾಗಿತ್ತು ಆದರೆ ಏರ್ ಪೆಗಾಸಸ್ ಪ್ರೈವೇಟ್ ಲಿಮಿಟೆಡ್ ನಿಗದಿತ ವಿಮಾನ ರದ್ದುಗೊಂಡಿದೆ ಎಂದು ಇಮೇಲ್ ಕಳುಹಿಸಿ ತಿಳಿಸಿತ್ತು. ಅಲ್ಲದೇ ಟಿಕೆಟ್‌ಗಳ ಬುಕಿಂಗ್‌ಗೆ ಪಾವತಿಸಿದ ಸಂಪೂರ್ಣ ಮೊತ್ತವನ್ನು ಶೀಘ್ರದಲ್ಲಿಯೇ ಮರುಪಾವತಿಸಲಾಗುತ್ತದೆ ಎಂದು ಕೂಡ ತಿಳಿಸಿತ್ತು. ಆದರೆ ವಿಮಾನಯಾನ ಸಂಸ್ಥೆ ಟಿಕೆಟ್ ಬುಕಿಂಗ್ ಹಣವನ್ನು ಮರುಪಾವತಿ ಮಾಡಿಯೇಲ್ಲ.
ಹಲವುಬಾರಿ ವಿಮಾನಯಾನ ಸಂಸ್ಥೆಗೆ ಕರೆ ಮಾಡಿದರೆ ಶರಣ್ಯಾ ಕುಟುಂಬಕ್ಕೆ ಯಾವುದೇ ಪ್ರತಿಕ್ರಿಯೆಯನ್ನೂ ನೀಡುತ್ತಿರಲಿಲ್ಲ. ಇದರಿಂದ ಬೇಸತ್ತ ಶರಣ್ಯಾ ಕುಟುಂಬ ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿತ್ತು. ಮರುಪಾವತಿಯ ದಿನಾಂಕದವರೆಗೆ 18 ಪ್ರತಿಶತದಷ್ಟು ಬಡ್ಡಿಯೊಂದಿಗೆ ವಿಮಾನಯಾನ ಸಂಸ್ಥೆ 54,474 ರೂಗಳನ್ನು ಪಾವತಿಸಬೇಕೆಂದು ಒತ್ತಾಯಿಸಿದ್ದರು. ಇದು ವಿಮಾನ ಟಿಕೆಟ್ ಖರೀದಿಸಲು ಅವರು ಪಾವತಿಸಿದ ಮೊತ್ತವಾಗಿದೆ.
ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಶರಣ್ಯಾ ಹಾಗೂ ಎಂಟು ಪ್ರಯಾಣಿಕರು ಸೇರಿ 9 ಪ್ರಯಾಣಿಕರಿಗೆ ವಿಮಾನ ಸಂಸ್ಥೆ ನೀಡಿದ ಮಾನಸಿಕ ಸಂಕಟ ಮತ್ತು ನೋವಿಗೆ ಪರಿಹಾರವಾಗಿ 2,00,000 ರೂ.ಗಳನ್ನು ಪಾವತಿಸಬೇಕು. ಅಲ್ಲದೇ ಪರ್ಯಾಯ ಸಾರಿಗೆ ವಿಧಾನಕ್ಕಾಗಿ ಮತ್ತು ದಾವೆ ವೆಚ್ಚಕ್ಕಾಗಿ ಹೆಚ್ಚುವರಿ ವೆಚ್ಚಗಳಿಗೆ 20,000 ರೂ. ಹಾಗೂ ವಿಮಾನ ಟಿಕೆಟ್ ಹಣ ಮರುಪಾವತಿ ವೆಚ್ಚ ಸೇರಿದಂತೆ ಒಟ್ಟು 1,20,452 ರೂ ಪಾವತಿಸುವಂತೆ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದೆ.