ಮೈಸೂರು ಫೆ,29,2020(www.justkannada.in): ಸೇವಾ ನ್ಯೂನತೆ ಎಸಗಿದ ಮೈಸೂರಿನ ಕರೂರು ವೈಶ್ಯ ಬ್ಯಾಂಕಿಗೆ ದಂಡ ವಿಧಿಸಿ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆ ಆದೇಶಿಸಿದೆ.
ಪ್ರಕರಣದ ವಿವರ: ಮೈಸೂರಿನ ಲಷ್ಕರ್ ಮೊಹಲ್ಲಾದ ಇರ್ವಿನ್ ರಸ್ತೆಯ ನಿವಾಸಿ ಫಿರ್ದೋಸ್ ಮಲ್ಲಿಕ್ ಎಂಬವರು ಮನೆ ಖರೀದಿ ಮಾಡುವ ಸಲುವಾಗಿ ಶಿವರಾಂ ಪೇಟೆಯ ಕರೂರು ವೈಶ್ಯ ಬ್ಯಾಂಕಿನಲ್ಲಿ 10.05.2012 ರಂದು ರೂ.8,50,000 ಗಳನ್ನು ಸಾಲವಾಗಿ ಪಡೆದಿದ್ದರು. ಆ ಸಮಯದಲ್ಲಿ ತಮ್ಮ ಮನೆಯ ದಾಖಲಾತಿಗಳನ್ನು ಬ್ಯಾಂಕಿಗೆ ಆಧಾರವಾಗಿ ನೀಡುವ ಜೊತೆಗೆ ಆಧಾರ ಪತ್ರವನ್ನೂ ನೋಂದಾಯಿಸಿ ನೀಡಿದ್ದರು.
ಇದರ ಜೊತೆಗೆ ಫಿರ್ದೋಸ್ ಮಲ್ಲಿಕ್ ಅವರು ಕರೂರು ವೈಶ್ಯ ಬ್ಯಾಂಕಿನಲ್ಲಿ 887.700 ಗ್ರಾಂ ಚಿನ್ನದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ತಾನು ಅಡವಿಟ್ಟ ಚಿನ್ನವನ್ನು ಹರಾಜು ಮೂಲಕ ಮಾರಾಟ ಮಾಡಿ ಆ ಮೂಲಕ ಬಂದ ಮೊತ್ತವನ್ನು ತನ್ನ ಎರಡೂ ಸಾಲಗಳಿಗೆ ಜಮಾ ಮಾಡಿ ಉಳಿದ ಮೊತ್ತವನ್ನು ತನಗೆ ಹಿಂದಿರುಗಿಸುವಂತೆ ಕೋರಿ ಫಿರ್ದೋಸ್ ಮಲಿಕ್ ಅವರು ದಿನಾಂಕ 20.10.2016 ರಂದು ಕರೂರು ವೈಶ್ಯ ಬ್ಯಾಂಕಿಗೆ ಪತ್ರ ಬರೆದಿದ್ದರು.
ಆದರೆ ಕರೂರು ವೈಶ್ಯ ಬ್ಯಾಂಕಿನವರು ಫಿರ್ದೋಸ್ ಮಲ್ಲಿಕ್ ಅವರ ಗಮನಕ್ಕೆ ಬಾರದಂತೆ ಚಿನ್ನವನ್ನು ಹರಾಜು ಮೂಲಕ ಮಾರಾಟ ಮಾಡಿದ್ದಲ್ಲದೆ ಆ ಹರಾಜಿನಲ್ಲಿ ಎಷ್ಟು ಹಣ ಬಂದಿದೆ ಎಂಬ ಮಾಹಿತಿಯನ್ನೂ ಕೂಡ ಫಿರ್ದೋಸ್ ಮಲಿಕ್ ಅವರಿಗೆ ನೀಡಲಿಲ್ಲ.
ಆ ಮೂಲಕ ಕರೂರು ವೈಶ್ಯ ಬ್ಯಾಂಕ್ ಸೇವಾ ನ್ಯೂನತೆ ಎಸಗಿದೆ ಎಂದು ಆಪಾದಿಸಿದ ಫಿರ್ದೋಸ್ ಮಲಿಕ್ ಅವರು ಚಿನ್ನದ ಆಭರಣಗಳನ್ನು ಮಾರಾಟ ಮಾಡಿ ಬಂದ ಹಣದಲ್ಲಿ ತನ್ನ ಸಾಲದ ಮೊತ್ತಕ್ಕೆ ಜಮಾ ಮಾಡಿ ಉಳಿದ ರೂ.2,58,226 ಹಾಗೂ
ಸೇವಾ ನ್ಯೂನತೆ ಎಸಗಿದುದಕ್ಕಾಗಿ ರೂ.1,00,000 ಪರಿಹಾರವನ್ನು ಪ್ರಕರಣದ ಖರ್ಚು ರೂ.5000 ದೊಂದಿಗೆ ಕರೂರು ವೈಶ್ಯ ಬ್ಯಾಂಕಿನಿಂದ ಕೊಡಿಸಬೇಕೆಂದು ಕೋರಿ ಮೈಸೂರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು ಕರೂರು ವೈಶ್ಯ ಬ್ಯಾಂಕ್ ಸೇವಾ ನ್ಯೂನತೆ ಎಸಗಿದೆ ಎಂದು ತೀರ್ಮಾನಿಸಿ ಫಿರ್ದೋಸ್ ಮಲಿಕ್ ಅವರು ಸಾಲ ಪಡೆಯುವಾಗ ಬ್ಯಾಂಕಿಗೆ ಆಧಾರವಾಗಿ ನೀಡಿದ್ದ ಮನೆಯ ಪತ್ರಗಳನ್ನು ಹಿಂದಿರುಗಿಸುವಂತೆ ಆದೇಶಿಸುವ ಜೊತೆಗೆ ಸದರಿ ಅಡಮಾನ ಪತ್ರವನ್ನು ರದ್ದು ಮಾಡಿ 45 ದಿನಗಳೊಳಗೆ ನೋಂದಣಿ ಮಾಡಿಕೊಡಬೇಕೆಂದೂ ಆದೇಶಿಸಿದೆ.ಇದಕ್ಕೆ ತಪ್ಪಿದಲ್ಲಿ ದಿನವೊಂದಕ್ಕೆ ರೂ.100 ದಂಡ ಪಾವತಿಸಬೇಕಾಗುತ್ತದೆಂದೂ ಆದೇಶಿಸಿದೆ.
ಇದರೊಂದಿಗೆ ಚಿನ್ನದ ಆಭರಣಗಳನ್ನು ಹರಾಜು ಮೂಲಕ ಮಾರಾಟ ಮಾಡಿ ಸಾಲದ ಮೊತ್ತಕ್ಕೆ ಜಮಾ ಮಾಡಿ ಬ್ಯಾಂಕಿನಿಂದ ಫಿರ್ದೋಸ್ ಮಲಿಕ್ ಅವರಿಗೆ ಬರಬೇಕಾಗಿರುವ ಬಾಕಿ ಮೊತ್ತ ರೂ.,2,58,226 ಗಳನ್ನು ವಾರ್ಷಿಕ 10% ಬಡ್ಡಿಯೊಂದಿಗೆ ಹಿಂದಿರುಗಿಸುವಂತೆ ಆದೇಶಿಸಿದೆ.
ಅಲ್ಲದೆ ಪ್ರಕರಣದ ಖರ್ಚಿನ ಬಾಬ್ತು ರೂ 35,000 ಗಳನ್ನು 45 ದಿನಗಳೊಳಗಾಗಿ ಪಾವತಿಸುವಂತೆ ಆದೇಶಿದೆ.ಇದಕ್ಕೆ ತಪ್ಪಿದಲ್ಲಿ ವಾರ್ಷಿಕ 10% ಬಡ್ಡಿ ಕೊಡಬೇಕಾಗುತ್ತದೆಂದೂ ಗ್ರಾಹಕರ ವೇದಿಕೆಯು ಎಚ್ಚರಿಸಿದೆ. ಫಿರ್ಯಾದುದಾರ ಫಿರ್ದೋಸ್ ಮಲಿಕ್ ಪರವಾಗಿ ವಕೀಲ ಕೆ.ಈಶ್ವರ ಭಟ್ ವಕಾಲತ್ತು ವಹಿಸಿದ್ದರು.
Key words: Consumer Forum- – fined- Karur Vysya Bank- mysore