ಕಲುಷಿತ ನೀರು ಸೇವಿಸಿ ಸಾವು ಕೇಸ್: ಮೂಡಾ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದ ಶಾಸಕ ಜಿ.ಟಿ ದೇವೇಗೌಡ.

ಮೈಸೂರು,ಮೇ,21,2024 (www.justkannada.in): ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಯುವಕ  ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂಡಾ ಅಧಿಕಾರಿಗಳ ಮೇಲೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.

ಇಂದು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, 48 ಜನರಿಗೆ ವಾಂತಿ ಬೇಧಿ ಶುರುವಾಗಿದೆ. ಕಳೆದ ಎರಡು ದಿನಗಳ ಹಿಂದೆ  ಈ ರೀತಿಯಾಗಿದ್ದು, ಅಸ್ವಸ್ಥರಾದವರು ನಿನ್ನೆ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ನೀರು ಕಲುಷಿತಗೊಂಡ ಕಾರಣ ಈ ಘಟನೆ ನಡೆದಿದೆ. ಜಿಲ್ಲಾಧಿಕಾರಿಗಳು, ಅರೋಗ್ಯಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. 5 ಜನ ವೈದ್ಯರು, ಮತ್ತೆ ಆರೋಗ್ಯ ಇಲಾಖೆ ತಂಡ ಕೆ.ಸಾಲುಂಡಿ ಗ್ರಾಮದಲ್ಲಿ ಕ್ಯಾಂಪ್ ಮಾಡಿದೆ. ಇನ್ನು 75 ಜನರಿಗೆ ವಾಂತಿ ಬೇದಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬರು‌ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರಾಭಿವೃದ್ಧಿ ಪಾಧಿಕಾರಿದಲ್ಲಿ ಯುಜಿಡಿ ಮಾಡುವಾಗ ಸೆಪ್ಟಿಕ್ ಟ್ಯಾಂಕ್ ಮಾಡಿಲ್ಲ. ಯುವಕ ಸಾವಿಗೆ ಮೂಡಾ ಅಧಿಕಾರಿಗಳೇ ಕಾರಣ ಎಂದು ಹೇಳುವ ಮೂಲಕ ಮುಡಾ ಅಧಿಕಾರಿಗಳ ಮೇಲೆ ಗಂಭೀರ ಆರೋಪ ಮಾಡಿದರು.

ಹಾಗೆಯೇ ಆಸ್ಪತ್ರೆ ಎಲ್ಲಾ ಚಿಕಿತ್ಸಾ ವೆಚ್ಚವನ್ನ ನಾನೇ ಭರಿಸುತ್ತೇನೆ. ಸಾವನ್ನಪ್ಪಿದ ಯುವಕನ  ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಪರಿಹಾರ ನೀಡಬೇಕು. ಇಲ್ಲಿನ ಜನರು ಸಿಎಂ ಸಿದ್ದರಾಮಯ್ಯ ಅವರನ್ನ ಬೆಂಬಲಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕುಟುಂಬಕ್ಕೆ ಪರಿಹಾರ ಕೊಡಬೇಕು ಎಂದು ಮನವಿ ಮಾಡಿದರು.

ಸಿಎಂ ಈಗಾಲಾದರೂ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಯುಜಿಡಿ ಕೆಲಸಗಳನ್ನ ಶೀಘ್ರವಾಗಿ ಕೆಲಸ ಮಾಡುವಂತೆ ಸೂಚನೆ ನೀಡಬೇಕು. ಯುಜಿಡಿ ಕೆಲಸಕ್ಕೆ ಸರ್ಕಾರ ಹಣ ಕೊಡಬೇಕು ಎಂದು ಶಾಸಕ ಜಿ.ಟಿ ದೇವೇಗೌಡ ಹೇಳಿದರು.

ಮೂಡಾ ವಿರುದ್ಧ ಗ್ರಾಮಸ್ಥರ ಆಕ್ರೋಶ.

ಇನ್ನು ಘಟನೆ ಸಂಬಂಧ ಮೂಡಾ ವಿರುದ್ಧ ಕೆ.ಸಾಲುಂಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆಲ್ಲ ಕಾರಣ ಮೂಡಾ ಅಧಿಕಾರಿಗಳು. ನಿಗದಿತ ಸಮಯಕ್ಕೆ ಯುಜಿಡಿ ಕಾಮಗಾರಿ ಮುಗಿಸಿಲ್ಲ. ಈಗಾಗಿ ಯುಜಿಡಿ ನೀರು ಕುಡಿಯುವ ನೀರಿನ ಪೈಪ್ ಗೆ ಸೇರಿದೆ. ಕೂಡಲೇ ಸರ್ಕಾರ ಮತ್ತು ಮೂಡಾ ಚಿಕಿತ್ಸಾ ವೆಚ್ಚ ಬರಿಸಬೇಕು. ಜೊತೆಗೆ ಮೃತಪಟ್ಟಿರುವ ಯುವಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಕಾಮಾಕ್ಷಿ ಆಸ್ಪತ್ರೆ ಭೇಟಿ ನೀಡಿದ ಮೂಡಾ ಅಧ್ಯಕ್ಷ ಕೆ ಮರೀಗೌಡ.

ಕೆ ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಗ್ರಾಮಸ್ಥರು ಅಸ್ವಸ್ಥ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ವಸ್ಥರಿಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೂಡಾ ಅಧ್ಯಕ್ಷ ಕೆ ಮರೀಗೌಡ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳು, ಆಸ್ಪತ್ರೆ ವೈದ್ಯರಿಂದ ಮಾಹಿತಿ ಪಡೆದುಕೊಂಡರು. ಅಸ್ವಸ್ಥಗೊಂಡ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Key words: contaminated, water,  GT Deve Gowda