ಬೆಂಗಳೂರು, ಜನವರಿ 10, 2022 (www.justkannada.in): ಬೆಂಗಳೂರು ಮಹಾನಗರದಲ್ಲಿ ಇಂದು ‘ಸ್ಪೈಡರ್ ಮ್ಯಾನ್’ ಚಲನಚಿತ್ರದ ಗೋಲ್ಡ್ ಕ್ಲಾಸ್ ಟಿಕೆಟ್ ದರ ರೂ.೮೭೮. ಆದರೆ ೧೯೫೦ರ ದಶಕದಲ್ಲಿ ಕೇವಲ ನಾಲ್ಕಾಣೆಗೆ ಹಾಲಿವುಡ್ ಚಲನಚಿತ್ರವನ್ನು ವೀಕ್ಷಿಸಬಹುದಾಗಿತ್ತು. ಅಂದರೆ ಹೆಚ್ಚಳದ ಪ್ರಮಾಣವನ್ನು ಗಮನಿಸಿ. ಆಗಿನ ಕಾಲದಲ್ಲಿ ಟಾಕೀಸುಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದ ಆನಂದವನ್ನು ಅರಿತಿರುವ ಹಿರಿಯ ನಾಗರಿಕರು ಇಂದು ಅವರ ಅಂದಿನ ಅದ್ಭುತ ದಿನಗಳನ್ನು ಎಷ್ಟು ಮಿಸ್ ಕಾಡಿಕೊಳ್ಳುತ್ತಿರಬಹುದು?
ಮಲ್ಟಿಪ್ಲೆಕ್ಸ್ ಗಳು ಹಾಗೂ ಆನ್ಲೈನ್ ಸ್ಟ್ರೀಮಿಂಗ್ ನಂತಹ ಹೊಸ ವೇದಿಕೆಗಳು ಸೃಷ್ಟಿಯಾಗಿರುವ ಈ ಆಧುನಿಕ ಯುಗದಲ್ಲಿ ಸಾಂಪ್ರದಾಯಿಕ ಚಲನಚಿತ್ರ ವೀಕ್ಷಣೆಯ ಅನುಭವ ನಿಧಾನವಾಗಿ ಇತಿಹಾಸ ಸೇರುತ್ತಿದೆ. ಹಳೆಯ ಕಾಲದ ಸಿನಿಮಾ ಟಾಕೀಸುಗಳ ಸಂಖ್ಯೆ ೨೦೦೦ದಲ್ಲಿ ಕಡಿಮೆಯಾಗ ತೊಡಗಿತು. ಕೋವಿಡ್ ಸಾಂಕ್ರಾಮಿಕ ಬಂದ ನಂತರವಂತೂ ಈ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಒಂದು ಕಾಲದಲ್ಲಿ ಸಿನಿಮಾ ಟಾಕೀಸುಗಳ ಸುವರ್ಣ ಯುಗವೆಂದೇ ಪರಿಗಣಿಸಲ್ಪಡುತ್ತಿದ್ದ ಸಂದರ್ಭದ ಹಿನ್ನೆಲೆಯಲ್ಲಿ, ಈಗ ರಾಜಾದ್ಯಂತ ಸ್ಥಿತಿ ಹೇಗಿದೆ ಎಂಬ ಒಂದು ಸಂಕ್ಷಿಪ್ತ ಚಿತ್ರಣವನ್ನು ಇಲ್ಲಿ ನಿಮ್ಮ ಮುಂದಿಡಲು ಪ್ರಯತ್ನಿಸಲಾಗಿದೆ.
ಕರ್ನಾಟಕದ ಚಲನಚಿತ್ರ ಸೊಸೈಟಿ ಚಳವಳಿಯಲ್ಲಿ ಪ್ರತಿಷ್ಠಿತ ಹೆಸರನ್ನು ಪಡೆದಿರುವ ಹೆಚ್.ಎನ್. ನರಹರಿ ರಾವ್ ಅವರಿಗೆ ಈಗ ೮೧ ವರ್ಷ. ಇವರು ತಾವು ಮೊಟ್ಟ ಮೊದಲ ಬಾರಿಗೆ ಟಾಕೀಸಿನಲ್ಲಿ ಚಲನಚಿತ್ರವನ್ನು ವೀಕ್ಷಿಸಿದ ಆನಂದವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ – ಅವರು ನೋಡಿದ ಮೊಟ್ಟ ಮೊದಲ ಚಲನಚಿತ್ರ, ತಮಿಳಿನ ಕರುಣಾನಿಧಿ ಅವರ ಚಿತ್ರಕಥೆಯುಳ್ಳ, ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಅವರು ನಟಿಸಿದ್ದ ‘ಪರಾಶಕ್ತಿ’ ಚಲನಚಿತ್ರವಂತೆ. ಇವರು ಕೇವಲ ೧೨ ವರ್ಷ ವಯಸ್ಸಿನವರಾಗಿದ್ದಾಗ ಅವರ ಪೋಷಕರು ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಬಳಿ ಇದ್ದಂತಹ ಸೂಪರ್ ಟಾಕೀಸಿಗೆ ಕರೆದುಕೊಂಡು ಹೋಗಿದ್ದರಂತೆ. ಸೂಪರ್ ಟಾಕೀಸನ್ನು ೧೯೭೦ರ ದಶಕದಲ್ಲಿ ನೆಲಕ್ಕುರುಳಿಸಲಾಯಿತು.
ಇವರ ತಲೆಮಾರಿನವರು ಬೆಂಗಳೂರಿನ ಕಂಟೋನ್ಮೆಂಟ್ ಪ್ರದೇಶದಲ್ಲಿದ್ದಂತಹ ಅನೇಕ ಟಾಕೀಸುಗಳಲ್ಲಿ ಬ್ರಿಟಿಷ್ ಮತ್ತು ಹಾಲಿವುಡ್ ಚಲನಚಿತ್ರಗಳನ್ನು ವೀಕ್ಷಿಸಿ ಆನಂದಿಸುತ್ತಿದ್ದರು. ಇವರು ತಮ್ಮ ಗಳೆಯರೊಂದಿಗೆ ದಿನಪತ್ರಿಕೆಗಳನ್ನು ಮಾರಿ, ಅದರಿಂದ ಬರುವ ಹಣವನ್ನು ಉಳಿಸಿ “ಟು ಕ್ಯಾಛ್ ಎ ಥೀಫ್,’ ‘ರೇರ್ ವಿಂಡೊ,’, ‘ದಿ ಮ್ಯಾನ್ ಹೂ ನ್ಯೂ ಟೂ ಮಚ್,’ ಹಾಗೂ ‘ಡಾ. ನೊ,’ದಂತಹ ಇಂಗ್ಲೀಷ್ ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದರಂತೆ. ಆದರೆ ಆಗ ಕಂಟೋನ್ಮೆಂಟ್ ಪ್ರದೇಶದಲ್ಲಿದ್ದಂತಹ ಅನೇಕ ಚಿತ್ರಮಂದಿರಗಳೇ ಕಣ್ಮರೆಯಾಗಿವೆ. ಅವುಗಳಲ್ಲಿ, ಎಂಪೈರ್, ನ್ಯೂ ಒಪೆರಾ, ಲಿಬರ್ಟಿ, ಬಿಆರ್ವಿ, ಪ್ಲಾಜಾ, ಗ್ಯಾಲಾಕ್ಸಿ ಹಾಗೂ ಲಿಡೋ ಚಿತ್ರಮಂದಿರಗಳು ಸೇರಿವೆ. ದಕ್ಷಿಣ ಬೆಂಗಳೂರು ಭಾಗದಲ್ಲಿದ್ದಂತಹ ಪ್ರಸಿದ್ಧ ಶಾಂತಿ ಹಾಗೂ ನಂದಾ ಚಿತ್ರಮಂದಿರಗಳು ಈಗ ಇತಿಹಾಸ ಸೇರಿವೆ. ಲಿಡೊದಂತೆ ಸ್ವಾಗತ್ ಈಗ ಮಾಲ್ ಮತ್ತು ಮಲ್ಟಿಪ್ಲೆಕ್ಸ್ ಆಗಿ ಪರಿವರ್ತಿತಗೊಂಡಿದೆ.
೧೯೭೧ರಲ್ಲಿ ಸುಚಿತ್ರಾ ಫಿಲಂ ಸೊಸೈಟಿಯನ್ನು ಸ್ಥಾಪಿಸಿದಂತಹ ನರಹರಿ ರಾವ್ ಅವರು, “ನಾನು ಕಂಟೋನ್ಮೆಂಟ್ ನಲ್ಲಿ ಯಾವುದೇ ಚಲನಚಿತ್ರ ಬಿಡುಗಡೆಯಾದರೂ ಮೊದಲ ವಾರದಲ್ಲಿಯೇ ನೋಡುತ್ತಿದ್ದೆ. ಒಂದು ವೇಳೆ ತಪ್ಪಿದರೆ ಸಿಟಿ ಮಾರುಕಟ್ಟೆಯ ಬಳಿ ಇದ್ದಂತಹ ಪ್ಯಾರಾಮೌಂಟ್ ಚಿತ್ರಮಂದಿರದಲ್ಲಿ ವೀಕ್ಷಿಸುತ್ತಿದ್ದೆ. ಅಲ್ಲಿ ಟಿಕೆಟ್ ದರ ಕೇವಲ ಮೂರುವರೆ ಆಣೆ, ಚಿಲ್ಲರೆ ಇಲ್ಲದಿದ್ದರೆ ಒಂದು ಪಾನ್ ಬೀಡಾ ನೀಡುತ್ತಿದ್ದರು,” ಎನ್ನುತ್ತಾರೆ ನರಹರಿ ರಾವ್.
ಎಂ.ಜಿ.ರಸ್ತೆಯಲ್ಲಿದ್ದಂತಹ ಲಿಬರ್ಟಿ ಚಿತ್ರಮಂದಿರದ ಮಾಲೀಕರಾದ ಅಖ್ತರ್ ಬೇಗಂ ಅವರು ತಮ್ಮ ವೈಶಿಷ್ಟ್ಯತೆಗೆ ಹೆಸರುವಾಸಿಯಾಗಿದ್ದರು. ಆಕೆ ತಮ್ಮ ಚಿತ್ರಮಂದಿರಕ್ಕೆ ಆಗಮಿಸುತ್ತಿದ್ದಂತಹ ಮಾಮೂಲಿ ಗ್ರಾಹಕರನ್ನು ವೈಯಕ್ತಿಕವಾಗಿ ಸ್ವಾಗತಿಸುತ್ತಿದ್ದರಂತೆ. ಗ್ರಾಹಕರ ಮೇಲೆ ಸುಗಂಧದ್ರವ್ಯವನ್ನು ಸಿಂಪಡಿಸುತ್ತಿದ್ದರಂತೆ. ಆದರೆ ಈಗ ಅಂತಹ ಆತಿಥ್ಯ ಎಲ್ಲಿ ಕಾಣಸಿಗುತ್ತದೆ? ಇಂದಿನ ದಿನಗಳಲ್ಲಿ ಮಲ್ಟಿಪ್ಲೆಕ್ಸ್ ಗಳಲ್ಲಿ ಚಲನಚಿತ್ರಗಳನ್ನು ವೀಕ್ಷಿಸಲು ಹೋದರೆ ಮೆಟೆಲ್ ಡಿಟೆಕ್ಟರ್ ಹಿಡಿದು ಇಡೀ ಮೈಯನ್ನೆಲ್ಲಾ ಚೆಕ್ ಮಾಡುತ್ತಾರೆ.
೧೯೭೦ರ ದಶಕದಲ್ಲಿ ಅತ್ಯಂತ ಸ್ವಚ್ಛ ಹಾಗೂ ಚೆನ್ನಾಗಿ ನಿರ್ವಹಿಸಿದ್ದಂತಹ ಚಿತ್ರಮಂದಿರಗಳಿಗಾಗಿ ಕರ್ನಾಟಕ ಇಡೀ ದೇಶದಲ್ಲಿಯೇ ಹೆಸರುವಾಸಿಯಾಗಿತ್ತು. ಆದರೆ ಆ ವೈಭವದ ದಿನಗಳು ಇಂದು ಕಣ್ಮರೆಯಾಗಿವೆ. ರಾಜ್ಯದಲ್ಲಿ ೬೩೧ ರಷ್ಟಿದ್ದ ಏಕ-ಪರದೆ ಚಿತ್ರಮಂದಿರಗಳ ಸಂಖ್ಯೆ ಈಗ ೫೦೬ಕ್ಕೆ ಇಳಿದವೆ. ಸುಮಾರು ೧೨೫ ಚಿತ್ರಮಂದಿರಗಳನ್ನು ಮುಚ್ಚಿಹಾಕಲಾಗಿವೆ. ಒಂದೊಮ್ಮೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಬಳಿಯಿರುವ ಗಾಂಧಿನಗರ ಚಲನಚಿತ್ರಗಳ ಕೇಂದ್ರ ಸ್ಥಾನವಾಗಿತ್ತು. ಆದರೆ ಈಗ ಆ ವೈಭವ ಕಣ್ಮರೆಯಾಗಿದೆ.
ಆಗಿನ ಕಾಲದಲ್ಲಿ ನಗರದ ರೈಲ್ವೆ ನಿಲ್ದಾಣದಿಂದ ನಡಿಗೆಯ ದೂರದಲ್ಲೇ ಬರೋಬ್ಬರಿ ೨೨ ಚಿತ್ರಮಂದಿರಗಳಿದ್ದವು. ಈ ವೈಭವ ಇಡೀ ಪ್ರಪಂಚದಲ್ಲಿಯೇ ಎಲ್ಲೂ ಇರಲಿಲ್ಲ. ಆ ಹೆಗ್ಗಳಿಕೆಯನ್ನು ನಮ್ಮ ಬೆಂಗಳೂರು ಹೊಂದಿತ್ತು. ಆದರೆ ಈಗ ಆ ಪೈಕಿ ತ್ರಿವೇಣಿ, ಅನುಪಮಾ, ಮೂವಿಲ್ಯಾಂಡ್, ಭೂಮಿಕಾ ಮತ್ತು ಅಭಿನಯ್, ಈ ಐದು ಚಿತ್ರಮಂದಿರಗಳು ಮಾತ್ರ ಉಳಿದುಕೊಂಡಿವೆ. ಈ ಪ್ರದೇಶ ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತದೆ. ಏಕೆಂದರೆ ರಾಜ್ಯದ ಮೂಲೆಮೂಲೆಗಳಿಂದಲೂ ಇಲ್ಲಿಗೆ ಜನರು ಆಗಮಿಸುತ್ತಾರೆ. “ಹಾಗಾಗಿಯೇ ಈ ಪ್ರದೇಶದಲ್ಲಿ ಬಾಡಿಗೆಯೂ ಹೆಚ್ಚು, ಚಿತ್ರಮಂದಿರಗಳನ್ನು ಮುಚ್ಚಿ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನು ನಿರ್ಮಿಸಿದರೆ ಹೆಚ್ಚು ಲಾಭ,” ಎನ್ನುವುದು ಇತ್ತೀಚೆಗಷ್ಟೆ ಚಲನಚಿತ್ರಗಳ ಪ್ರದರ್ಶನವನ್ನು ಸ್ಥಗಿತಗೊಳಿಸಿದಂತಹ ಸಂತೋಷ್-ನರ್ತಕಿ-ಸಪ್ನಾ ಕಂಪ್ಲೆಕ್ಸ್ ನ ಮಾಲೀಕರಾದ ಅರುಣ್ ಕುಮಾರ್ ಅವರ ಅಭಿಪ್ರಾಯ.
ಮೈಸೂರಿನ ಸುವರ್ಣ ಯುಗ
ಮೈಸೂರು ನಗರದಲ್ಲಿ ಆಧುನಿಕ ಕೆಫೆಗಳು ಯುವಜನರ ಮೆಚ್ಚಿನ ಮನರಂಜನಾ ತಾಣವಾಗುವುದಕ್ಕೆ ಮುಂಚೆ, ಗಾಯಿತ್ರಿ ಚಿತ್ರಮಂದಿರದೊಳಗಿದ್ದಂತಹ ‘ಐಸ್ ಹೌಸ್’ ಬಹಳ ಜನಪ್ರಿಯವಾಗಿತ್ತು.
“ಇಲ್ಲಿ ದೊರೆಯುವ ಐಸ್ಕ್ರೀಂಗಳು, ಮಟನ್ ಕಟ್ಲೆಟ್ ಗಳು, ರಮ್ ಕೇಕ್ ಗಳು ಹಾಗೂ ಜೆಲ್ಲಿಗಳು ಯುವಜನರಿಗೆ ಅಚ್ಚುಮೆಚ್ಚಾಗಿದ್ದವು,” ಎನ್ನುತ್ತಾರೆ ಮಾಲೀಕರಾದ ಎಂ.ಆರ್. ರಾಜಾರಾಂ. ಇವರು ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಉಪಾಧ್ಯಕ್ಷರು.
ಪ್ರಸ್ತುತ ಮೈಸೂರಿನಲ್ಲಿ ಉಳಿದುಕೊಂಡಿರುವ ಬೆರಳೆಣಿಕೆಯಷ್ಟು ಏಕಪರದೆಯ ಚಿತ್ರಮಂದಿಗಳ ಪೈಕಿ ಗಾಯಿತ್ರಿ ಮತ್ತು ಸಂಗಮ್ ಮುಖ್ಯವಾದವು. ಮೈಸೂರು ಹೋಟೆಲ್ ಮಾಲೀಕರ ಸಂಘದ ಮುಖ್ಯಸ್ಥರು ಹಾಗೂ ಚಲನಚಿತ್ರ ಪ್ರಿಯರೂ ಆದ ನಾರಾಯಣಗೌಡ ಸಿ, ಅವರು, “ನಾನು ಪ್ರೇಮಲೋಕ ಚಿತ್ರವನ್ನು (೧೯೮೭) ಬರೋಬ್ಬರಿ ೧೮ ಬಾರಿ ವೀಕ್ಷಿಸಿದ್ದೆ. ನಾನು ಆಗ ಪ್ರೌಢಾವಸ್ಥೆಯಲ್ಲಿದ್ದೆ. ಆಗಿನ ಚಲನಚಿತ್ರ ಗೀತೆಗಳು ಅದ್ಭುತವಾಗಿದ್ದವು. ನನಗೆ ಉತ್ತಮ ಹಾಡುಗಳಿರುವ ಚಲನಚಿತ್ರಗಳೆಂದರೆ ಅಚ್ಚುಮೆಚ್ಚು. ವಿಷ್ಣುವರ್ಧನ್ ಅವರ ‘ಬಂಧನ’ ಚಿತ್ರವನ್ನು ೧೫ ಬಾರಿ ನೋಡಿದ್ದೆ. ಆಗಿನ ಕಾಲದಲ್ಲಿ ಎಲ್ಲರ ಬಳಿಯೂ ಟಿವಿಗಳಿರಲಿಲ್ಲ,” ಎಂದು ತಮ್ಮ ಹಿಂದಿನ ದಿನಗಳನ್ನು ಮೆಲುಕು ಹಾಕಿದರು.
ರಾಜ್ಕುಮಾರ್ ಅಭಿಮಾನಿ ಎಂದು ಹೇಳಿಕೊಳ್ಳುವ ನಾರಾಯಣಗೌಡ ಅವರು, ಆಗ ಟಿವಿಯಲ್ಲಿ ಬರುತ್ತಿದ್ದ ‘ಮಹಾಭಾರತ’ ಮತ್ತು ‘ರಾಮಾಯಣ’ ಈ ಎರಡು ಧಾರಾವಾಹಿಗಳು ಏಕ ಮಾತ್ರ ದೃಶ್ಯ ಮನರಂಜನಾ ಮೂಲಗಳಾಗಿದ್ದವು ಎನ್ನುತ್ತಾರೆ.
ಕೋವಿಡ್ ಸಾಂಕ್ರಾಮಿಕ ಮೈಸೂರಿನ ಜನಪ್ರಿಯ ಸರಸ್ವತಿ, ಲಕ್ಷ್ಮಿ ಮತ್ತು ಶಾಂತಲಾ ಈ ಮೂರು ಚಿತ್ರಮಂದಿರಗಳು ಮುಚ್ಚಲು ಕಾರಣವಾಗಿದೆ. ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ, ಹಾಲಿವುಡ್ ಚಿತ್ರಗಳ ಪ್ರದರ್ಶನಕ್ಕೆ ಪ್ರಸಿದ್ಧಿಯನ್ನು ಹೊಂದಿದ್ದಂತಹ ಸ್ಟರ್ಲಿಂಗ್ ಚಿತ್ರಮಂದಿರಕ್ಕೆ ಇದೇ ಜನವರಿಯಲ್ಲಿ ತೆರೆ ಎಳೆಯಲಾಗುತ್ತಿದೆ.
೧೯೯೦ರ ದಶಕದಲ್ಲಿ ೨೪ರಷ್ಟಿದ್ದ ಚಿತ್ರಮಂದಿರಗಳ ಪೈಕಿ ಈಗ ಮೈಸೂರಿನಲ್ಲಿ ಕೇವಲ ೧೧ ಏಕ-ಪರದೆ ಚಿತ್ರಮಂದಿರಗಳು ಉಳಿದುಕೊಳ್ಳುತ್ತವೆ. ಗಾಯಿತ್ರಿ ಹಾಗೂ ಸಂಗಮ್ ಚಿತ್ರಮಂದಿರಗಳು ಅಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿವೆ. ಈಗ ಇಡೀ ರಾಜ್ಯದಲ್ಲಿ ಡಾಲ್ಬಿ ಸಿಪಿ ೯೫೦ ಧ್ವನಿ ವ್ಯವಸ್ಥೆಯನ್ನು ಹೊಂದಿರುವ ಎರಡೇ ಎರಡು ಚಿತ್ರಮಂದಿರಗಳೆಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿವೆ.
ಎಲ್ಲಾ ಚಿತ್ರಮಂದಿರಗಳೂ ಸಹ ದೊಡ್ಡ ಪ್ರಮಾಣದಲ್ಲಿ ಪರಿವರ್ತನೆಯನ್ನು ಹೊಂದುವ ಸ್ಥಿತಿಯಲ್ಲಿಲ್ಲ. “ಆದಾಯದ ಮಾದರಿ ಕೆಲಸ ಮಾಡುತ್ತಿಲ್ಲ,” ಎನ್ನುತ್ತಾರೆ ರಾಜಾರಾಮ್. ಶಿವಮೊಗ್ಗ ನಗರವೂ ಸಹ ತನ್ನ ಏಕ-ಪರದೆ ಚಿತ್ರಮಂದಿರಗಳ ಪರಂಪರೆಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದೆ.
ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಕರ್ನಾಟಕದ ಹೋಲಿಕೆಯಲ್ಲಿ ತಮ್ಮ ಏಕ-ಪರದೆ ಚಿತ್ರಮಂದಿರಗಳ ಪರಂಪರೆಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿಕೊಂಡಿವೆ. ಈ ಮೂರೂ ರಾಜ್ಯಗಳಲ್ಲಿ ೧೨೦೦ಕ್ಕೂ ಹೆಚ್ಚಿನ ಸಂಖ್ಯೆಯ ಏಕ-ಪರದೆ ಚಿತ್ರಮಂದಿರಗಳು ಈಗಲೂ ಇವೆ. ಅಲ್ಲಿನ ರಾಜ್ಯ ಸರ್ಕಾರಗಳು ಅವರಿಗೆ ಅನೇಕ ರೀತಿಯಲ್ಲಿ ಬೆಂಬಲ ನೀಡುತ್ತಿರುವ ಕಾರಣದಿಂದಾಗಿ ಈಗಲೂ ಆ ಚಿತ್ರಮಂದಿರಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ, ಎನ್ನುವುದು ರಾಜಾರಾಮ್ ಅವರ ಅಭಿಪ್ರಾಯವಾಗಿದೆ.
“ತಮಿಳುನಾಡಿನಲ್ಲಿ ೧,೫೦೦ ಏಕ-ಪರದೆ ಚಿತ್ರಮಂದಿರಗಳಿದ್ದು, ಹೊಸ ಚಿತ್ರಮಂದಿರಗಳೂ ತಲೆ ಎತ್ತುತ್ತಿವೆ,” ಎಂದು ತಿಳಿಸಿದರು.
ಉತ್ತರ ಕರ್ನಾಟಕ
ಹುಬ್ಬಳ್ಳಿಯಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಮಲ್ಟಿಪ್ಲೆಕ್ಸ್ ಗಳು ಜನರಿಗೆ ಸ್ವಚ್ಛ ಒಳಾಂಗಣದ ಆಶ್ವಾಸನೆಯನ್ನು ನೀಡಿವೆ. ಆದರೆ ರಾಜ್ಯದ ಈ ಭಾಗದ ಜನರು ಈ ಕುರಿತು ಅಷ್ಟು ಉತ್ಸುಕರಾಗಿಲ್ಲ. ತನ್ನ ೪೦ರ ವಯಸ್ಸಿನಲ್ಲಿರುವ ಅಮಿತ್ ಟಿ. ಎಂಬ ಹೆಸರಿನ ಮಾರ್ಕೆಟಿಂಗ್ ವೃತ್ತಿಪರ ಈ ಬದಲಾವಣೆಗೆ ಒಗ್ಗಿಕೊಳ್ಳುವುದು ಕಷ್ಟ ಎನ್ನುತ್ತಾರೆ. “ನಾನು ಯುವಕನಾಗಿದ್ದಾಗ ವಾರಕ್ಕೆ ಎರಡು ಚಲನಚಿತ್ರಗಳನ್ನು ವೀಕ್ಷಿಸುತ್ತಿದ್ದೆ. ಆದರೆ ಈಗ ಎರಡು ಚಲನಚಿತ್ರಗಳ ವೀಕ್ಷಣೆಯ ನಡುವೆ ವರ್ಷಗಳಷ್ಟು ಅಂತರವೇ ಇರುತ್ತದೆ,” ಎನ್ನುತ್ತಾರೆ.
ಹುಬ್ಬಳ್ಳಿಯಲ್ಲಿರುವ ಅಪ್ಸರಾ ಮತ್ತು ಸುಧಾ ಕಾಂಪ್ಲೆಕ್ಸ್ ಈಗಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. “ಇವುಗಳು ಹಬ್ಬಳ್ಳಿ ನಗರದಲ್ಲಿರುವ ಅತ್ಯಂತ ಹಳೆಯ ಚಿತ್ರಮಂದಿರಗಳ ಪೈಕಿ ಸೇರಿವೆ. ಬಾಲಿವುಡ್ ನ ಮೂರು ದಿಗ್ಗಜ ಖಾನ್ ಗಳ (ಆಮೀರ್, ಸಲ್ಮಾನ್ ಮತ್ತು ಶಾರೂಖ್) ಚಲನಚಿತ್ರಗಳು ಇಲ್ಲಿ ಪ್ರದರ್ಶಿತವಾಗುತ್ತಿದ್ದವು. ನಾವು ಅವರ ಬಹುಪಾಲು ಎಲ್ಲಾ ಚಲನಚಿತ್ರಗಳನ್ನೂ ವೀಕ್ಷಿಸುತ್ತಿದ್ದೆವು. ಒಮ್ಮೆ ಹಳೆಯ ಸ್ನೇಹಿತರೆಲ್ಲಾ ಸೇರಿದ್ದೆವು, ಆಗ ಅಪ್ಸರಾ ಚಿತ್ರಮಂದಿರದಲ್ಲಿ ಕ್ರೀಡಾ ಚಿತ್ರಕಥೆ ಆಧಾರಿತ ಚಲನಚಿತ್ರ ‘೮೩’ಅನ್ನು ಇಲ್ಲಿ ವೀಕ್ಷಿಸಿದ್ದೆವು. ಆ ಚಿತ್ರಮಂದಿರದ ಒಳಗೆ ಒಂದು ಅಕ್ವೇರಿಯಂ ಇದ್ದು, ಈಗಲೂ ಉತ್ತಮವಾಗಿದೆ, ನಮಗೆ ಅದನ್ನು ನೋಡುವುದೇ ಒಂದು ಖುಷಿ,” ಎನ್ನುತ್ತಾರೆ ಅಮಿತ್.
೧೯೬೪ರಲ್ಲಿ ‘ಸಂಗಮ್’ ಚಲನಚಿತ್ರದ ಯಶಸ್ಸನ್ನು ಆಚರಿಸಲು ಬಾಲಿವುಡ್ ನ ಎಂಟರ್ ಟೇನರ್ ರಾಜ್ ಕಪೂರ್ ಅವರು ಹುಬ್ಬಳ್ಳಿ, ಧಾರವಾಡ ಮತ್ತು ಬೆಳಗಾವಿಗೆ ಭೇಟಿ ನೀಡಿದ್ದರಂತೆ. ದಿಲೀಪ್ ಕುಮಾರ್ ಸಹ ಕರ್ನಾಟಕದ ಹಲವು ನಗರಗಳಿಗೆ ಭೇಟಿ ನೀಡಿದ್ದರು. ಕನ್ನಡದ ಅನೇಕ ಚಲನಚಿತ್ರ ನಟರು ಈ ಭಾಗದ ತಮ್ಮ ಮೆಚ್ಚಿನ ಅಭಿಮಾನಿಗಳನ್ನು ಭೇಟಿ ಮಾಡಲು ಹಲವು ಬಾರಿ ಮೆರವಣಿಗೆ ನಡೆಸಿದ್ದಾರೆ.
ಉತ್ತರ ಕರ್ನಾಟಕ ಭಾಗವು ಮುಖ್ಯವಾಹಿನಿ ಚಲನಚಿತ್ರಗಳ ದೊಡ್ಡ ಮಾರುಕಟ್ಟೆಯಾಗಿದೆ, ಆದರೆ ಇಂದಿನ ದಿನಗಳಲ್ಲಿ ಇಲ್ಲಿಯೂ ಸಹ ಚಿತ್ರಮಂದಿರಗಳ ವ್ಯವಹಾರ ಅಷ್ಟು ಚೆನ್ನಾಗಿಲ್ಲ. ಹುಬ್ಬಳ್ಳಿಯಲ್ಲಿ ಒಟ್ಟು ೧೮ ಚಿತ್ರಮಂದಿರಗಳಿದ್ದವು, ಆದರೆ ಈಗ ಕೇವಲ ಆರು ಏಕ-ಪರದೆ ಚಿತ್ರಮಂದಿರಗಳು ಮಾತ್ರ ಉಳಿದಿವೆ. ಧಾರವಾಡದಲ್ಲಿ ಇದರ ಸಂಖ್ಯೆ ಏಳರಿಂದ ನಾಲ್ಕಕ್ಕೆ ಇಳಿದಿದೆ.
“ಕರ್ನಾಟಕ ಚಲನಚಿತ್ರ ಪ್ರದರ್ಶಕರ ಒಕ್ಕೂಟದ’ ಅಧ್ಯಕ್ಷರಾದ ಆರ್.ಆರ್. ಔಡುಗೌಡರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾ, “ಉಪಗ್ರಹ ಆಧಾರಿತ ತಂತ್ರಜ್ಞಾನ ಆರಂಭವಾದಾಗಿನಿಂದ ಚಿತ್ರಮಂದಿಗಳ ವ್ಯವಹಾರದ ಮೇಲೆ ದೊಡ್ಡ ಹೊಡೆತ ಬಿದ್ದಿದೆ,” ಎನ್ನುತ್ತಾರೆ. ಆದಾಗ್ಯೂ, ಈಗಲೂ ಸಹ ಧಾರವಾಡದಲ್ಲಿ ಶ್ರೀನಿವಾಸ ಮತ್ತು ಪದ್ಮ, ಹುಬ್ಬಳ್ಳಿಯಲ್ಲಿ ಸಂಜೋತ, ಸುಜಾತ, ಹಾಗೂ ಬೆಳಗಾವಿಯಲ್ಲಿ ಸ್ವರೂಪ್ ನರ್ತಕಿ ಚಿತ್ರಮಂದಿರಗಳು ಏಕ-ಪರದೆ ಪರಂಪರೆಯನ್ನು ಎತ್ತಿಹಿಡಿದು ನಿಂತಿವೆ.
ಸಂಖ್ಯೆ ಇಳಿಮುಖವಾಗುತ್ತಿರುವುದು ಏಕೆ?
ರಿಯಲ್ ಎಸ್ಟೇಟ್: ಚಲನಚಿತ್ರಗಳ ಹಂಚಿಕೆದಾರರಿಂದ ಬರುವ ಬಾಡಿಗೆ ಬಹಳ ಕಡಿಮೆ. ಚಿತ್ರಮಂದಿರಗಳ ಮಾಲೀಕರಿಗೆ ಬಾಕ್ಸ್ ಆಫೀಸ್ ಹಣಗಳಿಕೆಯಲ್ಲಿ ಪಾಲಿನ ಬೇಡಿಕೆಯಿದೆ. ಇದು ಮಲ್ಟಿಪ್ಲೆಕ್ಸ್ ಗಳಲ್ಲಿ ಅನುಸರಿಸುವ ಮಾದರಿ.
ನಿರ್ಬಂಧಗಳು: ಚಿತ್ರಮಂದಿರಗಳ ಮಾಲೀಕರು ತಮಗೆ ಬೇಕಾದಾಗ ಚಿತ್ರಮಂದಿರಗಳನ್ನು ನವೀಕರಿಸಲು ವೇಗವಾಗಿ ಹಾಗೂ ಹೆಚ್ಚು ಸರಾಗವಾಗಿ ಅನುಮತಿಯನ್ನು ಪಡೆಯುವುದನ್ನು ನಿರೀಕ್ಷಿಸುತ್ತಾರೆ.
ಸ್ಟಾರ್ ಚಲನಚಿತ್ರಗಳು: ಒಂದೊಮ್ಮೆ ಕಾಣುತ್ತಿದ್ದಂತಹ ಬ್ಲಾಕ್ ಬಸ್ಟರ್ ಚಲನಚಿತ್ರಗಳ ಸರಣಿ ಸಾಧ್ಯವಾದರೆ ತಮ್ಮ ಆರ್ಥಿಕ ಪರಿಸ್ಥಿತಿ ಈಗಲೂ ಚೇತರಿಸಿ, ಹಿಂದಿನ ವೈಭವ ಮರಳಬಹುದು ಎನ್ನುವುದು ಚಿತ್ರಮಂದಿರಗಳ ಮಾಲೀಕರ ನಂಬಿಕೆಯಾಗಿದೆ.
ಉತ್ತಮ ಪ್ರೇಕ್ಷಕರು: ಮೇಲಾಗಿ ಹೆಚ್ಚಿನ ಸಂಖ್ಯೆಯ ಜನರು ಚಿಕ್ಕ ಚಲನಚಿತ್ರಗಳನ್ನು ವೀಕ್ಷಿಸುವಂತಾಗಬೇಕು ಎನ್ನುವುದು ಚಿತ್ರಮಂದಿರಗಳ ಮಾಲೀಕರ ಅಭಿಪ್ರಾಯವಾಗಿದೆ.
ಕೋವಿಡ್ ಪರಿಣಾಮ
ಕೋವಿಡ್ ಸಾಂಕ್ರಾಮಿಕದ ನಂತರವಂತೂ ಕರ್ನಾಟಕದಲ್ಲಿ ಏಕ-ಪರದೆ ಚಿತ್ರಮಂದಿರಗಳ ಸಂಖ್ಯೆ ೬೩೧ ರಿಂದ ೫೦೬ಕ್ಕೆ ಇಳಿದಿದೆ. ಮುಂಬರುವ ದಿನಗಳಲ್ಲಿ ಈ ರೀತಿಯ ಚಿತ್ರಮಂದಿರಗಳು ನಮಗೆ ಕಾಣಸಿಗುವುದೋ ಇಲ್ಲವೋ ಯಾರಿಗೆ ಗೊತ್ತು?
Key words: Continued -Number -closing –cinema- talkies.