ಬೆಂಗಳೂರು, ಫೆಬ್ರವರಿ,2,2022 (www.justkannada.in): ಸೋಮವಾರ ಪೊಲೀಸರಿಂದ ನಡೆದ ಲಾಠಿ ಚಾರ್ಜ್ ನಡೆದ ನಂತರವೂ ಸಹ ಎಬಿವಿಪಿ ಕಾರ್ಯಕರ್ತರಿಂದ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಉಪಕುಲಪತಿಗಳ ವಿರುದ್ಧ ಅನುಚಿತ ಶ್ರೇಯಾಂಕ ನೀಡಿಕೆ, ಅಂಕಪಟ್ಟಿಗಳು, ಮೂಲಭೂತ ವಿದ್ಯಾರ್ಥಿನಿಲಯ ಸೌಲಭ್ಯಗಳ ಅವ್ಯವಸ್ಥೆಯ ವಿರುದ್ಧ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಿನ್ನೆ ಪ್ರತಿಭಟನೆ ನಡೆಸುತ್ತಿದ್ದಾಗ ಪೊಲೀಸರು ಅವರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದರು. ಆದರೆ ಮಂಗಳವಾರದಂದೂ ಸಹ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನೆಯ ಸುಳಿವು ಸಿಕ್ಕ ಪೊಲೀಸರು ಇಂದು ಮುಂಜಾನೆಯೇ ಸ್ಥಳಕ್ಕೆ ಆಗಮಿಸಿದ್ದರು.
ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಎಬಿವಿಪಿ ಕಾರ್ಯಕರ್ತರು ಜ್ಞಾನಭಾರತಿ ಆವರಣದ ಮುಖ್ಯ ಕಚೇರಿಯ ಮುಂದೆ ಸೇರಿ ವಿಶ್ವವಿದ್ಯಾಲಯ ಮತ್ತು ಉಪಕುಲಪತಿಗಳ ವಿರುದ್ಧ ಘೋಷಣೆಗಳನ್ನು ಕೂಗಿ, ಹೊರಗೆ ಬಂದು ತಮ್ಮ ಬೇಡಿಕೆಗಳನ್ನು ಆಲಿಸುವಂತ ಒತ್ತಾಯಿಸಿದರು. ಪೊಲೀಸರು ಪ್ರತಿಭಟನಾಕಾರರನ್ನು ಶಾಂತವಾಗಿರುವಂತೆ ಕೋರಿದರು. ನ್ಯಾಷನಲ್ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ (ಎನ್ಎಸ್ಯುಐ)ದ ಸದಸ್ಯರು ಸಹ ಸ್ಥಳಕ್ಕೆ ಆಗಮಿಸಿದರು. ಆದರೆ ಪೊಲೀಸರು ಅವರನ್ನು ಮರಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಓರ್ವ ಪ್ರತಿಭಟನಾಕಾರರು ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಅಂಕಪಟ್ಟಿಗಳನ್ನು ನೀಡುವಲ್ಲಿ ಆಗುತ್ತಿರುವ ವಿಳಂಬ ಹಾಗೂ ವಿಶ್ವವಿದ್ಯಾಲಯದ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಅನುಚಿತ ಅಂಕಗಳನ್ನು ನೀಡುವ ಕುರಿತು ಆಕ್ಷೇಪ ವ್ಯಕ್ತಪಡಿಸಿದರು. ಜೊತೆಗೆ ಅವರು ವಿದ್ಯಾರ್ಥಿನಿಲಯಗಳ ಪರಿಸ್ಥಿತಿಯೂ ಬಹಳ ಕೆಟ್ಟದಾಗಿದೆ ಎಂದು ಆರೋಪಿಸಿದರು.
ನಂತರ, ಸೋಮವಾರದಂದು ಉಪಕುಲಪತಿಗಳ ಅನುಮತಿಯಿಲ್ಲದೇ ಪೊಲೀಸರಿಂದ ವಿಶ್ವವಿದ್ಯಾಲಯದ ಆವರಣದೊಳಗೆ ವಿದ್ಯಾರ್ಥಿಗಳ ಮೇಲೆ ಹೇಗೆ ಲಾಠಿ ಚಾರ್ಜ್ ನಡೆಸಲಾಯಿತು ಎಂಬ ಕುರಿತು ಮಾತನಾಡಿದರು.
ಆ ವೇಳೆಗೆ ಉಪಕುಲಪತಿ ಕೆ.ಆರ್. ವೇಣುಗೋಪಾಲ್ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರು. ಆದರೆ ಪ್ರತಿಭಟನಾಕಾರರು ವಿಶ್ವವಿದ್ಯಾಲಯ ಹಾಗೂ ಉಪಕುಲಪತಿಗಳ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವುದನ್ನು ಮುಂದುವರೆಸಿ, ಘೋಷಣೆಗಳನ್ನು ಕೂಗುವುದನ್ನೂ ಮುಂದುವರೆಸಿದರು.
“ಬೆಂಗಳೂರು ವಿಶ್ವವಿದ್ಯಾಲಯವು ಪರೀಕ್ಷಾ ಫಲಿತಾಂಶವನ್ನು ಪ್ರಕಟಿಸುವಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ, ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು ಸರಿಯದ ಸಮಯಕ್ಕೆ ನೀಡುತ್ತಿಲ್ಲ ಮತ್ತು ೧,೩೦೦ ಎಕರೆಗಳಷ್ಟು ವಿಶಾಲವಾದ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಭೂಹಗರಣಗಳಾಗುತ್ತಿವೆ. ವಿಶ್ವವಿದ್ಯಾಲಯದ ಭೂಮಿಯನ್ನು ಪೆಟ್ರೋಲ್ ಪಂಪ್ ಗಳು, ಹೋಟೆಲ್ಗಳು, ಬಾರ್ ಮತ್ತು ರೆಸ್ಟೊರೆಂಟ್ ಗಳಿಗೆ ನೀಡುತ್ತಿದ್ದಾರೆ. ಈ ಭೂ ಹಗರಣದ ವಿರುದ್ಧ ನಾವು ಹೋರಾಡುತ್ತಿದ್ದರೂ ಸಹ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಾಗಿ, ೮೦೨ ಅಂಕಪಟ್ಟಿಗಳನ್ನು ತಿದ್ದಲಾಗಿದೆ, ಇದಕ್ಕೆ ಸಾಕಷ್ಟು ಸಾಕ್ಷಿಯೂ ಇದೆ,” ಎಂದು ಓರ್ವ ಕಾರ್ಯಕರ್ತ ಆರೋಪಿಸಿದರು.
ಈ ಕುರಿತು ಮಾತನಾಡಿದ ಉಪಕುಲಪತಿಗಳು, “ಕೋವಿಡ್ ಸಾಂಕ್ರಾಮಿದಿಂದಾಗಿ ಅನೇಕ ಮೌಲ್ಯಮಾಪಕರು ದೂರದ ಸ್ಥಳಗಳಿಂದ ಬರಬೇಕಾಗಿದ್ದು ಈ ಕಾರಣದಿಂದಾಗಿ ಫಲಿತಾಂಶಗಳನ್ನು ಘೋಷಿಸುವಲ್ಲಿ ವಿಳಂಬವಾಗಿದೆ. ಇನ್ನೊಂದು ವಾರದೊಳಗೆ ಉಳಿದ ಪರೀಕ್ಷೆಗಳ ಫಲಿತಾಂಶವನ್ನು ಘೋಷಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು. ಈ ನಡುವೆ ಬೆಂಗಳೂರು ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿ ಎಬಿವಿಪಿಯ ಪ್ರತಿಭಟನೆ ನಮಗೆ ಸಂತೋಷ ತಂದಿಲ್ಲ ಎಂದರು.
ಸುದ್ದಿ ಮೂಲ: ಬೆಂಗಳೂರ್ ಮಿರರ್
Key words: Continued-protest – Bangalore University.