ಗುತ್ತಿಗೆದಾರ ಆತ್ಮಹತ್ಯೆ ಕೇಸ್: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ವಿರುದ್ದ FIR ದಾಖಲು

ಕಲಬುರಗಿ,ಡಿಸೆಂಬರ್,28,2024 (www.justkannada.in):  ಗುತ್ತಿಗೆದಾರ ಸಚಿನ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್‌ ವಿರುದ್ದ ಎಫ್ ಐಆರ್ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜು ಕಪನೂರ್‌ ವಿರುದ್ದ ಗುತ್ತಿಗೆ ನೀಡುವುದಾಗಿ ಹೇಳಿ ವಂಚನೆ, ಕೊಲೆ ಬೆದರಿಕೆ ಆರೋಪ ಮಾಡಿ ರೈಲಿಗೆ ತಲೆಕೊಟ್ಟು ಸಾವನ್ನಪ್ಪಿರುವ ಸಚಿನ್‌ ಪ್ರಕರಣವನ್ನು ಕರ್ನಾಟಕ ರೈಲ್ವೇ ಪೊಲೀಸರು ಕೈಗೆತ್ತಿಕೊಂಡು ತನಿಖೆ ಆರಂಭಿಸಿದ್ದಾರೆ.  ರಾಜು ಕಪನೂರ್‌ ಗ್ಯಾಂಗ್‌ನಿಂದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ರಾಜು ಕಪನೂರ್ ವಿರುದ್ಧ ಕಳೆದೆರಡು ದಿನಗಳಿಂದ ಆರೋಪಗಳು ಕೇಳಿಬರುತ್ತಲೇ ಇದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲೂ ರಾಜು ಕಪನೂರ್‌ ವಿರುದ್ಧ ಆರೋಪಗಳು ಕೇಳಿಬರುತ್ತಿದ್ದಂತೆ, ಇತ್ತ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ್ ಸೇರಿ ನಾಲ್ವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಿಸಲಾಗಿತ್ತು.

ಬಿಜೆಪಿ ಶಾಸಕರು ಮತ್ತು ಇತರರಿಗೆ  ರಾಜು ಕಪನೂರು ಗ್ಯಾಂಗ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಅರೋಪದ ಮೇಲೆ ನಿನ್ನೆ ಕಲಬುರಗಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸದ ಹಿನ್ನೆಲೆ ಪೊಲೀಸರ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆಯನ್ನೂ ಮಾಡಿದ್ದರು.

ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನೂ ಹೊರಹಾಕಿದ್ದರು. ಆದರೆ ಇದೀಗ ಬಿಜೆಪಿಯ ಹೋರಾಟಕ್ಕೆ ಮಣಿದು ಪೊಲೀಸರು ಎಫ್‌ ಐ ಆರ್ ದಾಖಲಿಸಿಕೊಂಡಿದ್ದಾರೆ. ರಾಜು ಕಪನೂರ್, ನಂದಕುಮಾರ್‌ ನಾಗಭುಜಂ ಸೇರಿ 6 ಜನರ ವಿರುದ್ಧ ಸದ್ಯ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಎಫ್‌ ಐ ಆರ್ ದಾಖಲಾಗಿದೆ.

Key words: Contractor ,suicide, case, FIR