ಬೆಂಗಳೂರು,ಜುಲೈ,5,2023(www.justkannada.in): ಬಾಕಿ ಇರುವ ಬಿಲ್ ಹಣವನ್ನು ಜುಲೈ 15ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಕಾಮಗಾರಿ ಬಿಲ್ ತಡೆಹಿಡಿಯಲಾಗಿದೆ. ಈ ಹಿನ್ನೆಲೆ ಗುತ್ತಿಗೆದಾರರ ಸಂಘ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಬಿಲ್ ಮೊತ್ತ ಬಿಡುಗಡೆಗೆ ಆಗ್ರಹಿಸಿತ್ತು. ಸಂಘದ ಮನವಿಗೆ ಸ್ಪಂದಿಸಿದ್ದ ಸಿಎಂ ಸಿದ್ಧರಾಮಯ್ಯ ಜೂನ್ 28ರಂದು ಸುತ್ತೋಲೆ ಹೊರಡಿಸಿತ್ತು.
ಆದರೆ ಇದೀಗ ಸುತ್ತೋಲೆ ಹೊರಡಿಸಿ ಒಂದು ವಾರ ಕಳೆದರೂ ಬಿಲ್ ಮೊತ್ತ ಬಿಡುಗಡೆಯಾಗಿಲ್ಲ. ಒಂದೂವರೆ ತಿಂಗಳಿಂದ ಹಣ ಬಿಡುಗಡೆ ಮಾಡದಿದ್ದರಿಂದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಣ್ಣೊರೆಸುವ ತಂತ್ರ ಕೈಬಿಟ್ಟು ಕಾಮಗಾರಿ ಬಿಲ್ ಬಿಡುಗಡೆ ಮಾಡಬೇಕು. ಜುಲೈ 15ರೊಳಗೆ ಬಿಲ್ ಮೊತ್ತ ಬಿಡುಗಡೆ ಮಾಡದಿದ್ದರೇ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಗುತ್ತಿಗೆದಾರರ ಸಂಘ ಎಚ್ಚರಿಸಿದೆ.
Key words: Contractors -association – warned – government – protest.