ಮಂಗಳೂರು,ಡಿಸೆಂಬರ್,28,2021(www.justkannada.in): ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಕರ್ತರ ಮತ್ತು ಪತ್ರಕರ್ತರ ಸಂಘದ ಪಾತ್ರ ಅನನ್ಯವಾದುದು ಎಂದು ಮಂಗಳೂರು ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ಜಿಲ್ಲಾ ಪತ್ರಕರ್ತರ ಸಮ್ಮೇಳನ ‘ಸಾಧನೆ ಸಂಭ್ರಮ-2021’ನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಾದರಿಯಾಗಿ ಕೆಲಸ ಮಾಡುತಿದೆ. ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಲವು ಮಂದಿ ಜನ ಪ್ರತಿನಿಧಿಗಳಿಗೆ, ಸರಕಾರಕ್ಕೆ ಪ್ರೇರಣೆಯಾಗಿದೆ. ಬ್ರಾಂಡ್ ಮಂಗಳೂರು ಎಂಬ ಆಶಯದೊಂದಿಗೆ ಅಪೂರ್ವ ಮಾದರಿಯನ್ನು ನೀಡಿದೆ ಎಂದು ಹೇಳಿದರು. ಕೊರೋನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಪತ್ರಕರ್ತರು ಅಭೂತಪೂರ್ವವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಅವರು ಹೇಳಿದರು. ಕಾರ್ಮಿಕ ಇಲಾಖೆ ನೀಡುವ ಕಿಟ್ ವಿತರಣೆ ಮಾಡಿದರು.
ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಮಾತನಾಡಿ, ಕನ್ನಡ ನಾಡು, ನುಡಿ, ಜಲ, ನೆಲ ಭಾಷೆಯ ಬಗ್ಗೆ ಅಭಿಮಾನ ಯಾವತ್ತೂ ಕಡಿಮೆ ಆಗಬಾರದು. ನೆಲ, ಜಲ, ನಾಡು ನುಡಿಯ ಬೆಳವಣಿಗೆ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಸಿರಿಗನ್ನಡಂ ಗೆಲ್ಗೆ ಹಾಡನ್ನು ಹಾಡುವ ಮೂಲಕ ಅವರು ಸಮಾರಂಭಕ್ಕೆ ಶುಭ ಹಾರೈಸಿದರು.
ಜಿಲ್ಲಾ ಸಂಘದ ಮೂರು ವರ್ಷಗಳ ಪ್ರಗತಿಯ ವಿವರಗಳನ್ನು ಒಳಗೊಂಡ ವಿಶೇಷ ಸಂಚಿಕೆ ‘ಸಾಧನೆ’ ಯನ್ನು ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಿಡುಗಡೆ ಮಾಡಿದರು.
ಮನೋಹರ ಪ್ರಸಾದರ ಕೃತಿ ಭಾವಚಿತ್ರ ಯಾನವನ್ನು ಕರಾವಳಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ್ ರಾವ್ ಬಿಡುಗಡೆಗೊಳಿಸಿ ಮಾತನಾಡಿದರು. ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಡಪ್ಪಾಡಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಕುತ್ಲೂರು ಶಾಲಾ ಮಕ್ಕಳಿಗೆ ಕ್ರೀಡಾ ಸಮವಸ್ತ್ರ ವಿತರಣೆಯನ್ನು ಮಾಡಿದರು.
ಪತ್ರಿಕಾಭವನ ಟ್ರಸ್ಟ್ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಆರಿಫ್ ಪಡುಬಿದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಬಾಳ ಜಗನ್ಬಾಥ ಶೆಟ್ಟಿ ಸ್ವಾಗತಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಸಂಘದ ಮಾಜಿ ಅಧ್ಯಕ್ಷ ಪಿ.ಬಿ. ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು.
ಉದ್ಘಾಟನಾ ಸಮಾರಂಭದ ಮೊದಲು ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆಗಳು ಸೇರಿದಂತೆ ಪ್ರಮುಖ ಪತ್ರಿಕೆಗಳ ಪ್ರತಿಗಳು, ಪುಸ್ತಕಗಳಿಂದ ತುಂಬಿದ ಪಲ್ಲಕಿಯೊಂದಿಗೆ ಅತಿಥಿ ಗಣ್ಯರನ್ನು ಸಭಾಂಗಣದೊಳಕ್ಕೆ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
Key words: contribution – Journalists -Journalists Association – creation – Wellness -Society –unique-MLA-Vedasavam Kamath