ಮೈಸೂರು,ಏಪ್ರಿಲ್,29,2023(www.justkannada.in): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ಪದೇ ಪದೇ ರಾಜ್ಯಕ್ಕೆ ಆಗಮಿಸಿ ಪ್ರಚಾರ ರೋಡ್ ಶೋಗಳಲ್ಲಿ ಪಾಲ್ಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಪದೇ ಪದೇ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ನರೇಂದ್ರ ಮೋದಿ ನಮ್ಮ ರಾಜ್ಯಕ್ಕೆ ನೀಡಿರುವ ಕೊಡುಗೆಯಾದರೂ ಏನು? ಎಂದು ಪ್ರಶ್ನಿಸಿರುವ ಹಳ್ಳಿಹಕ್ಕಿ, ಲಜ್ಜೆಗೆಟ್ಟ ಭ್ರಷ್ಟ ಬಿಜೆಪಿ ಮೊದಲು ಸರಿಪಡಿಸಲಿ ಎಂದು ಕಿಡಿಕಾರಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನಲೆ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಎಲ್.ಸಿ ವಿಶ್ವನಾಥ್ , ರಾಜ್ಯದ ಹಲವೆಡೆ ತ್ರಿಕೋನ ಸ್ಪರ್ಧೆ ಮತ್ತೆ ಕೆಲವೆಡೆ ನೇರ ಸ್ಪರ್ಧೆ ಏರ್ಪಡುವ ಲಕ್ಷಣಗಳು ಕಂಡು ಬಂದಿವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ. ಆಡಳಿತಾರೂಢ ಬಿಜೆಪಿ ಯಾವ ವಿಚಾರ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ ಎಂಬುದನ್ನು ತಿಳಿಸಿಲ್ಲ. ಅನ್ನ, ಅಕ್ಷರ, ಆರೋಗ್ಯದ ಬಗ್ಗೆ ಬಿಜೆಪಿ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸುತ್ತಿಲ್ಲ. ಅಭಿವೃದ್ಧಿ ವಿಚಾರಗಳನ್ನು ಪ್ರಸ್ತಾಪಿಸುತ್ತಿಲ್ಲ. ಈಗಲೂ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ಬಿಜೆಪಿ ಧರ್ಮಾಧಾರಿತ ರಾಜಕಾರಣ ಮಾಡುತ್ತಿದೆ ಎಂದು ಗುಡುಗಿದರು.
ದಕ್ಷಿಣ ಭಾರತದ ಮೇಲೆ ಉತ್ತರ ಭಾರತದವರ ಯಜಮಾನಿಕೆ ಜಾಸ್ತಿಯಾಗುತ್ತಿದೆ. ಕರ್ನಾಟಕದ ಮೇಲೆ ಕೇಂದ್ರದ ಯಜಮಾನಿಕೆ ಹೆಚ್ಚಾಗುತ್ತಿದೆ. ಪ್ರತಿಯೊಂದು ವಿಚಾರಕ್ಕೂ ಜಿ ಎಸ್ ಟಿ ಪಾವತಿ ಮಾಡಬೇಕಾಗಿದೆ. ಅಗತ್ಯ ವಸ್ತುಗಳ ಬೆಲೆ ಏರುತ್ತಿದ್ದು ಹೆಣ್ಣು ಮಕ್ಕಳು ಶಾಪ ಹಾಕುತ್ತಿದ್ದಾರೆ. ರಾಜ್ಯದ ಜಿ ಎಸ್ ಟಿ ಪಾಲು ಸರಿಯಾಗಿ ಸಿಗುತ್ತಿಲ್ಲ ಎಂದು ಹೆಚ್.ವಿಶ್ವನಾಥ್ ಹರಿಹಾಯ್ದರು.
ಬೇರೆ ಬ್ಯಾಂಕುಗಳ ಜೊತೆ ವಿಲೀನಗೊಳಿಸಿರುವ ನಮ್ಮ ಬ್ಯಾಂಕುಗಳನ್ನು ವಾಪಸ್ ಕೊಡಿ.ಹಿಂದಿ ಹೇರಿಕೆಯನ್ನು ನಿಲ್ಲಿಸಿ. ನಂದಿನಿಯ ಅಸ್ತಿತ್ವಕ್ಕೆ ಧಕ್ಕೆ ತರಬೇಡಿ ಎಂದು ಆಗ್ರಹಿಸಿದ ಹೆಚ್.ವಿಶ್ವನಾಥ್, ಯಾವುದೇ ಕಾರಣಕ್ಕೂ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಮೋದಿ ಭೇಟಿಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮಂತಹವರು, ಕುಮಾರಸ್ವಾಮಿ ಅಂತಹವರ ನೆರವಿನಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಇನ್ನೆಂದಿಗೂ ಕರ್ನಾಟಕ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಲ್ಲೇ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಭವಿಷ್ಯ ನುಡಿದರು.
ರಾಜಕೀಯ ನಾಯಕರು ತಾತ್ವಿಕ ಟೀಕೆಗಳನ್ನು ಮಾಡಿ,ತೀರಾ ವೈಯುಕ್ತಿಕ ಟೀಕೆಗಳನ್ನು ಮಾಡಬೇಡಿ.
ವೈಯಕ್ತಿಕ ಟೀಕೆಗಳಿಗಿಳಿದ ರಾಜಕೀಯ ನಾಯಕರಿಗೆ ಕಿವಿಮಾತು ಹೇಳಿದ ಹೆಚ್.ವಿಶ್ವನಾಥ್ಮ ರಾಜಕೀಯ ನಾಯಕರು ತಾತ್ವಿಕ ಟೀಕೆಗಳನ್ನು ಮಾಡಿ. ತೀರಾ ವೈಯುಕ್ತಿಕ ಟೀಕೆಗಳನ್ನು ಮಾಡಬೇಡಿ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಜಕೀಯ ನಾಯಕರು ಸಕಾರಾತ್ಮಕ, ತಾತ್ವಿಕ ಟೀಕೆಗಳನ್ನು ಮಾಡಬೇಕು. ತೀರಾ ವೈಯುಕ್ತಿಕ ಮಟ್ಟಕ್ಕೆ ಹೋಗಿ ಟೀಕೆಗಳನ್ನು ಮಾಡಬೇಡಿ ಎಂದರು.
ನಿನ್ನ ಬೆತ್ತಲೆ ಪ್ರಪಂಚದ ಪ್ರತಾಪ ನಮ್ಮ ಬಳಿ ಇದೆ: ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುತ್ತೇವೆ-ಪ್ರತಾಪ್ ಸಿಂಹಗೆ ವಾರ್ನಿಂಗ್
ಇದೇ ವೇಳೆ ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ ಹೆಚ್.ವಿಶ್ವನಾಥ್, ಸೋಮಣ್ಣ ಮತ್ತು ಸಿದ್ದರಾಮಯ್ಯ ಕೆಳಹಂತದಿಂದ ರಾಜಕೀಯಕ್ಕೆ ಬಂದವರು. ವರುಣ ಕ್ಷೇತ್ರಕ್ಕೆ ಹೋಗಿ ನಿನ್ನ ಪ್ರತಾಪ ತೋರಿಸಬೇಡ. ನಿನ್ನ ಬೆತ್ತಲೆ ಪ್ರಪಂಚದ ಪ್ರತಾಪ ನಮ್ಮ ಬಳಿ ಇದೆ. ಮುಂದಿನ ದಿನಗಳಲ್ಲಿ ಅದನ್ನು ಬಿಡುಗಡೆ ಮಾಡುತ್ತೇವೆ ಎಂದರು.
Key words: contribution -Modi – state – corrupt -BJP – H. Vishwanath