ಮೈಸೂರು ಮಾರ್ಚ್ 20,2023(www.justkannada.in) ಏಪ್ರಿಲ್ 02 ರಂದು ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಗೌತಮ ಪಂಚ ಮಹಾ ರಥೋತ್ಸವ ಆಚರಿಸುವ ಸಂಬಂಧ ಎಲ್ಲರೂ ಅಗತ್ಯ ಸಹಕಾರ ನೀಡಿ, ಅದ್ಧೂರಿಯಾಗಿ ಆಚರಣೆ ಮಾಡೋಣ ಎಂದು ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ಬಿ. ಹರ್ಷವರ್ಧನ್ ಅವರು ತಿಳಿಸಿದರು.
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ 2023 ನೆ ಸಾಲಿನ ದೊಡ್ಡ ಜಾತ್ರೆ ಅಂಗವಾಗಿ ನಡೆಯುವ ಗೌತಮ ಪಂಚಮಹಾ ರಥೋತ್ಸವ ನಡೆಯುವ ಸಂಬಂಧ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗೌತಮ ಪಂಚಮಹಾ ರಥೋತ್ಸವವು ಏಪ್ರಿಲ್ 02 ರಂದು ಬೆಳಿಗ್ಗೆ 6 ಗಂಟೆಗೆ ನಡೆಯಲಿದೆ. ಏಪ್ರಿಲ್ 04 ರಂದು ತೆಪ್ಪೋತ್ಸವ ಕಾರ್ಯಕ್ರಮ ನಡೆಯಲಿದೆ. ಲೋಕೋಪಯೋಗಿ ಇಲಾಖೆಯವರು ದೇವಸ್ಥಾನದ ಆವರಣದ ಜಾಗದಲ್ಲಿ ಸಮತಟ್ಟು ಮಾಡಬೇಕು. ಚೆಸ್ಕಾಂ ಅಧಿಕಾರಿಗಳು ನಿರಂತರವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಅಂಬೇಡ್ಕರ್ ಪ್ರತಿಮೆ, ಅಂಬೇಡ್ಕರ್ ಭವನ, ವಾಲ್ಮೀಕಿ ಭವನ ಹಾಗೂ ಪೊಲೀಸ್ ಕಚೇರಿಗಳನ್ನು ದೀಪಾಲಂಕಾರ ಮಾಡಬೇಕು. ಕೆ.ಎಸ್. ಆರ್. ಟಿ.ಸಿ ಇಲಾಖೆಯಿಂದ ಅಗತ್ಯ ಹೆಚ್ಚಿನ ಬಸ್ ವ್ಯವಸ್ಥೆ ಕಲ್ಪಿಸಬೇಕು. ವಾಹನಗಳನ್ನು ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ಮಾಡಬೇಕು ಎಂದರು.
ಮಾರ್ಚ್ 26 ರಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ ವಿಶ್ವ ಪ್ರಸಿದ್ದಿಯಾಗಿದೆ. 7 ಊರಿನ ಗ್ರಾಮಸ್ಥರು, ರೈತಾಪಿ ವರ್ಗದವರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ. ಕೆ ವಿ ರಾಜೇಂದ್ರ ಅವರು ಮಾತನಾಡಿ ರಥೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಭಕ್ತಾದಿಗಳು ಭಾಗವಹಿಸುತ್ತಾರೆ. ಭಕ್ತಾದಿಗಳು ಕಪಿಲಾ ನದಿಯಲ್ಲಿ ಸ್ನಾನ ಮಾಡಲು ಹೋಗುವುದರಿಂದ ಅಗತ್ಯ ರಕ್ಷಣಾ ಕ್ರಮಗಳಾದ ಪರಿಣಿತಿ ಈಜುಗಾರರು, ಬೋಟ್ ವ್ಯವಸ್ಥೆ ಕಲ್ಪಿಸಬೇಕು. 200 ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಕಲ್ಪಿಸಬೇಕು ಹಾಗೂ ನಿರಂತರವಾಗಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು.
ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆಯಿಂದ ಆಂಬ್ಯುಲೆನ್ಸ್ ಸೇವೆಯನ್ನು ಕಲ್ಪಿಸಬೇಕು. ರಥೋತ್ಸವ ನಡೆಯುವ ಮಾರ್ಗದಲ್ಲಿ ವಿದ್ಯುತ್ ತಂತಿಗಳ ಪರಿಶೀಲನೆ ನಡೆಸಬೇಕು. ಜಾತ್ರೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪರಿಸರ ಸ್ನೇಹಿ ವಸ್ತುಗಳ ಬಳಕೆ ಆಗಬೇಕು. ರಥ ಎಳೆಯುವ ಮಾರ್ಗದ ರಸ್ತೆ ಸ್ವಚ್ಚವಾಗಿ ಇರಬೇಕು ಎಂದರು.
ಸಭೆಯಲ್ಲಿ ಉಪ ವಿಭಾಗ ಅಧಿಕಾರಿಗಳಾದ ಕಮಲಾಬಾಯಿ, ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮಗಳ ಮುಖಂಡರು ಉಪಸ್ಥಿರಿದ್ದರು.
Key words: cooperate – Gautama Panch Maharathotsav – Srikantheshwara Temple- MLA- B. Harshvardhan