ಮೈಸೂರು,ಮಾರ್ಚ್,31,2021(www.justkannada.in) : ದೇಶದಲ್ಲಿ ಮತ್ತೆ ಕೊರೊನಾ ಎರಡನೇ ಅಲೆ ಆರಂಭವಾಗಿದೆ. ಈ ಹಿನ್ನೆಲೆ 1 ರಿಂದ 9ನೇ ತರಗತಿಯ ಪರೀಕ್ಷೆ ಸಂಬಂಧಿಸಿದಂತೆ ಒಂದೆಡೆ ಸರ್ಕಾರದ ನಿರ್ಧಾರ ಗೊಂದಲವಾದರೆ, ಮತ್ತೊಂದೆಡೆ ಖಾಸಗಿ ಶಾಲೆಗಳು ಆಫ್ ಲೈನ್ ಪರೀಕ್ಷೆಗೆ ಸಜ್ಜಾಗುತ್ತಿರುವುದು ಪೋಷಕರನ್ನು ಆತಂಕಕ್ಕೀಡು ಮಾಡಿದೆ.
ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಮಾರ್ಗಸೂಚಿಯನ್ವಯ 1ರಿಂದ 9ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಆದರೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ 1ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆಯು ಸಿದ್ಧತೆ ನಡೆಸುತ್ತಿದೆ. ಪರೀಕ್ಷೆ ಇಲ್ಲದೆಯೇ ಪಾಸ್ ಮಾಡುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಯ ನಡುವೆ ಖಾಸಗಿ ಶಾಲೆಗಳು 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಆಫ್ ಲೈನ್ ಪರೀಕ್ಷೆ ನಡೆಸುವ ಸಂಬಂಧ ಅಗತ್ಯ ಸಿದ್ಧತೆ ನಡೆಸುತ್ತಿರುವುದು ಪೋಷಕರ ಆತಂಕಕ್ಕೆ ಕಾರಣವಾಗಿದೆ.
ಕೊರೊನಾ 2ನೇ ಅಲೆ, ಎಚ್ಚರ ಎಂದು ಸರ್ಕಾರವೇ ಹೇಳುತ್ತೆ…!
ಕೊರೊನಾ 2ನೇ ಅಲೆ ಆರಂಭವಾಗಿದ್ದು, ಅದನ್ನು ತಡೆಗಟ್ಟಲು ಹೆಚ್ಚಿನ ಕ್ರಮ ಅಗತ್ಯ ಎಂದು ಸರ್ಕಾರ ಹೇಳುತ್ತಿದೆ. ಆದರೆ, ವಿದ್ಯಾರ್ಥಿಗಳ ಪರೀಕ್ಷೆ ಸಂಬಂಧಿಸಿದಂತೆ ಸಚಿವರುಗಳಲ್ಲಿಯೇ ಗೊಂದಲವಿದೆ. ಆರೋಗ್ಯ ಸಚಿವರು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸುವ ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಈಗಾಗಲೇ, ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಭರವಸೆಯಿಂದ ಹಾಗೂ ಮಕ್ಕಳ ಶೈಕ್ಷಣಿಕ ಬದುಕಿನ ದೃಷ್ಟಿಯಿಂದ ಶಿಕ್ಷಣ ಸಚಿವರು ಪರೀಕ್ಷೆ ನಡೆಸುವುದಾಗಿ ಅಭಿಪ್ರಾಯವ್ಯಕ್ತಪಡಿಸುತ್ತಿದ್ದಾರೆ.
ಆನ್ ಲೈನ್ ಪರೀಕ್ಷೆಗೆ ಖಾಸಗಿ ಶಾಲೆಗಳು ಹಿಂದೇಟು
ಕೊರೊನಾ ಮೊದಲ ಅಲೆಯಲ್ಲಿ ಎಲ್ಲಾ ಕ್ಷೇತ್ರವು ಆರ್ಥಿಕವಾಗಿ ಸಂಕಷ್ಟಕ್ಕೆ ತುತ್ತಾಗಿದೆ. ಕೊರೊನಾ ಹೆಚ್ಚಳ ಕುರಿತಂತೆ ಸರ್ಕಾರ ಎಚ್ಚರಿಕೆವಹಿಸಿ ಪರೀಕ್ಷೆ ರದ್ದುಗೊಳಿಸಿದರೆ ಪೋಷಕರ ಆತಂಕ ಕಡಿಮೆಯಾಗಲಿದೆ. ಆದರೆ, ಖಾಸಗಿ ಶಾಲೆಗಳು ಆಫ್ ಲೈನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆನ್ ಲೈನ್ ಪರೀಕ್ಷೆ ನಡೆಸುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ.
ಆದರೆ, ಈಗಾಗಲೇ ಶಾಲಾ ಶುಲ್ಕ ಪಾವತಿ ಸಂಬಂಧಿಸಿದಂತೆ ಖಾಸಗಿ ಶಾಲೆಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದು, ಸರ್ಕಾರವೇ ಮುಂದೆ ನಿಂತು ತಣ್ಣಗಾಗಿಸುವ ಪ್ರಯತ್ನ ಮಾಡಿದೆ. ಹೀಗಾಗಿ, ಆನ್ ಲೈನ್ ಪರೀಕ್ಷೆ ನಡಸುವುದಕ್ಕೆ ಖಾಸಗಿ ಶಾಲೆಗಳು ಹಿಂದೇಟು ಹಾಕುತ್ತಿವೆ.
ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಕೊರೊನಾ, ಪೋಷಕರಲ್ಲಿ ಆತಂಕ
ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ 18 ವಿದ್ಯಾರ್ಥಿಗಳಿಗೆ ಕೊರೊನಾ ದೃಢಪಟ್ಟಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳ ಆತಂಕ ಹೆಚ್ಚಿಸಿದೆ. ಹೀಗಾಗಿ, ಸರ್ಕಾರವು ಒಮ್ಮತದಿಂದ ವಿದ್ಯಾರ್ಥಿಗಳ ಹಾಗೂ ಪೋಷಕರ ಹಿತದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸುವ ಅಥವಾ ನಡೆಸುವ ಸಂಬಂಧ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.
ಸರ್ಕಾರದ ಮೇಲೆ ಪೋಷಕರು, ವಿದ್ಯಾರ್ಥಿಗಳ ಅಸಮಾಧಾನ
ಖಾಸಗಿ ಶಾಲೆಗಳ ಆಫ್ ಲೈನ್ ಪರೀಕ್ಷೆಗೆ ಪೋಷಕರ ವಿರೋಧವಿದೆ. ವಿದ್ಯಾರ್ಥಿಗಳ ಪರೀಕ್ಷೆ ಸಂಬಂಧಿಸಿದಂತೆ ಸರ್ಕಾರವು ಸೂಕ್ತ ನಿರ್ಧಾರ ಕೈಗೊಳ್ಳದಿರುವುದಕ್ಕೆ ಸರ್ಕಾರದ ಮೇಲೂ ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ಅಸಮಾಧಾನವ್ಯಕ್ತವಾಗುತ್ತಿದೆ. ಸರ್ಕಾರವು ಒಮ್ಮತದಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ರದ್ದುಗೊಳಿಸುವ ಅಥವಾ ನಡೆಸುವ ಸಂಬಂಧ ಶೀಘ್ರವೇ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದು ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಾಯವಾಗಿದೆ.
key words : Corona-2nd Wave-Next-offline-test-Private-Institutes-Increased-anxiety-among-parents